ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಲಾಗಿದ್ದ ಬೆಂಗಳೂರು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಸುಮಾರು 150 ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‍ಗೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾರೀ ಬೆಂಬಲ ನೀಡಿದರು.
ಬಂದ್ ಬಗ್ಗೆ ಮಾಹಿತಿಯಿಲ್ಲದೆ ಬೆಳಿಗ್ಗೆ ದೂರದ ಊರುಗಳಿಂದ ಬಸ್, ರೈಲು, ವಿಮಾನಗಳಲ್ಲಿ ಬಂದ ಜನ ತಮ್ಮ ಸ್ಥಳಗಳಿಗೆ ಹೋಗಲು ಪರದಾಡಬೇಕಾಯಿತು. ಈ ಮೂಲಕ ಕಾವೇರಿ ನದಿ ನೀರು ಉಳಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಂತಾಗಿದೆ.
ಬಂದ್ ನಿಂದಾಗಿ, ನಗರದ ಪ್ರಮುಖ ರಸ್ತೆಗಳ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳ ಸಂಚಾರ ವಿರಳವಾಗಿತ್ತು. ಆಟೋ, ಕ್ಯಾಬ್‍ಗಳು ಬೆರಳೆಣಿಕೆಯಷ್ಟು ಓಡಾಡುತ್ತಿದ್ದವು. ಕೆಲವರು ಇದರ ದುರುಪಯೋಗ ಪಡೆದುಕೊಂಡು ಪ್ರಯಾಣಿಕರನ್ನು ಸುಲಿಗೆ ಮಾಡುವ ಯತ್ನವನ್ನೂ ನಡೆಸಿದರು.
ಪೊಲೀಸರು ಮುಂಜಾಗ್ರತವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಎಲ್ಲೆಡೆ ವ್ಯಾಪಕ ಬಿಗಿ ಬಂದೋಬಸ್ತ್ ಆಯೋಜಿಸಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಸರ್ಪಗಾವಲು ಹಾಕಲಾಗಿತ್ತು.
ಶಾಲಾ-ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಕೆಲವು ಖಾಸಗಿ ಶಾಲೆಗಳು ತರಗತಿಗಳನ್ನು ನಡೆಸಿದರಾದರೂ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಕೆಲವು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಿವೆ.
ಕಳೆದ ಮೂರು ದಿನಗಳಿಂದಲೂ ಬಂದ್ ಬಗ್ಗೆ ವ್ಯಾಪಕ ಚರ್ಚೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾನ್ಯವಾಗಿ ಪ್ರವಾಸ ಅಥವಾ ಓಡಾಟವನ್ನು ನಿಯಂತ್ರಿಸಿಕೊಂಡಿದ್ದರು. ಹೀಗಾಗಿ ಬೆಂಗಳೂರಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು
ನಿಷೇಧಾಜ್ಞೆ ಜಾರಿ ಮಾಡಿರುವುದನ್ನು ಲೆಕ್ಕಿಸದೇ ಸಾವಿರಾರು ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಗ್ಗೆ ಬೀದಿಗಿಳಿದು ಪುರಭವನದ ಬಳಿ ಸಮಾವೇಶಗೊಂಡರು. ಪುರಭವನದಿಂದ ಫ್ರೀಡಂ ಪಾರ್ಕ್ವರೆಗೂ ಸಾವಿರಾರು ಮಂದಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟರು.
ಪ್ರತಿಭಟನಾ ಮೆರವಣಿಗೆ ಹೊರಟ ಸಾವಿರಾರು ಮಂದಿಯನ್ನು ಪೊಲೀಸರು ಮಾರ್ಗ ಮಧ್ಯದಲ್ಲಿ ಬಂಧಿಸಿ ಬಸ್ ಗಳಲ್ಲಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಿದಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬೇಕೇ ಬೇಕು ನ್ಯಾಯಬೇಕು ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಕೆಲಕಾಲ ಹೈಡ್ರಾಮ ನಡೆಯಿತು. ಅಂತಿಮವಾಗಿ ಬಿಎಂಟಿಸಿ ಬಸ್‍ಗಳ ಮೂಲಕ ಪ್ರತಿಭಟನಾಕಾರರನ್ನು ಪೊಲೀಸರು ಕರೆದುಕೊಂಡು ಹೋದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರೊಬ್ಬರು ಮಾತನಾಡಿ, ”ಕಾವೇರಿ ಹೋರಾಟ ನಿಲ್ಲೋದಿಲ್ಲ. ಸರ್ಕಾರ ಜನರ ಕಿವಿ ಮೇಲೆ ಹೂ ಇಡುತ್ತಿದೆ. ರಾಜ್ಯದಲ್ಲಿ ನಮಗೇ ನೀರಿಲ್ಲ. ಇಂಥ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ. ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಟೌನ್ ಹಾಲ್‌ವರೆಗೆ ಬಂದಿದ್ದೇವೆ. ಇಲ್ಲಿಂದ ಫ್ರೀಡಂ ಪಾರ್ಕ್ಗೆ ಹೋಗಲಿದ್ದೇವೆ ಅದಕ್ಕೆ ನಾವೂ ಹೂ ಇಟ್ಟುಕೊಂಡು ಪ್ರತಿಭಟನೆ ಮಾಡೋಕೆ ಬಂದಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.




