ವಿಧಾನಸಭೆ ಮತ್ತು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಸ್ಥಾನಗಳನ್ನು ಮೀಸಲಿಡುವ ವಿಧೇಯಕ ಅಂಗೀಕಾರಗೊಂಡು ಕಾನೂನಾಗಿ ಮಾರ್ಪಾಟಾಗಿರುತ್ತದೆ.
ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕೊಡುವುದರ ಜೊತೆಗೆ ಹಿಂದುಳಿದ ವರ್ಗದವರಿಗೆ ಇದರಲ್ಲಿ ಮೀಸಲಾತಿ ಇರಬೇಕು. ಅದೇ ರೀತಿಯಲ್ಲಿ ಓ.ಬಿ.ಸಿ.ಯವರಿಗೂ ಸಹ ಮೀಸಲಾತಿ ಸೌಲಭ್ಯವಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಮೇಲ್ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ. ಹಿಂದುಳಿದ ವರ್ಗದವರು ಆಯ್ಕೆಯಾಗುವುದು ಕಷ್ಟದ ಕೆಲಸವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿಯೂ ಸಹ ಹಿಂದುಳಿದ ವರ್ಗದವರಿಗಾಗಿ ಕ್ಷೇತ್ರಗಳನ್ನು ಮೀಸಲಿಟ್ಟರೆ ಆ ವರ್ಗದ ಜನರು ಆಯ್ಕೆಯಾಗಿ ಬರುತ್ತಾರೆ.
ಯಾವ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮಹಿಳೆಯರು ಮತ್ತು ಪುರುಷರಿಗೆ ಮೀಸಲಾತಿ ಇದೆಯೋ ಅದೇ ರೀತಿಯಲ್ಲಿ ಮೀಸಲಾತಿ ಇಲ್ಲಿಯೂ ಸಹ ನೀಡಬೇಕು.
ಮುಂದಿನ ದಿನಗಳಲ್ಲಿ ಜನಗಣತಿ ಮಾಡುವ ಸಂದರ್ಭದಲ್ಲಿ ಇವುಗಳನ್ನು ಪರಿಗಣಿಸಬೇಕು. ಹೇಗಿದ್ದರೂ 2029ರ ತನಕ ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ಬರುವುದಿಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗದವರಿಗೆ ಕ್ಷೇತ್ರಗಳನ್ನು ಮೀಸಲಿಡುವ ವಿಚಾರವನ್ನು ಗಂಭೀರವಾಗಿ ಚರ್ಚಿಸಿ ಇದಕ್ಕೂ ಸಂವಿಧಾನದ ತಿದ್ದುಪಡಿಯನ್ನು ತರುವಂತೆ ದೇಶದ ಹಿಂದುಳಿದ ವರ್ಗದ ನಾಯಕರುಗಳು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ.
ಕರ್ನಾಟಕ ರಾಜ್ಯದಲ್ಲಿಯೂ ಸಹ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಹಿಂದುಳಿದ ವರ್ಗದವರು ಚುನಾವಣೆಗಳಲ್ಲಿ ಆರಿಸಿಬರುವುದು ಸಾಹಸದ ಕೆಲಸವೇ ಆಗಿದೆ.
– ಕೆ.ಎಸ್. ನಾಗರಾಜ್, ಬೆಂಗಳೂರು




