ಮುಚ್ಚುವ ಪರಿಸ್ಥಿತಿ ಎದುರಿಸುತ್ತಿರುವ ಮುಕ್ಕಾಲು ಶತಮಾನದ ಸರ್ಕಾರಿ ಕನ್ನಡ ಪಾಠಶಾಲೆ!

5 hours ago

ಸರ್ಕಾರಿ ಶಾಲೆಗಳು ಸಮಾಜದ ಎಲ್ಲ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುವ ಸಾರ್ವಜನಿಕ ಸಂಸ್ಥೆಗಳಾಗಿವೆ. ಬಡವರು, ದಲಿತರು, ಆದಿವಾಸಿಗಳು, ಅಲೆಮಾರಿಗಳು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳಿಗೆ ಸರ್ಕಾರಿ ಶಾಲೆಗಳು ಶಿಕ್ಷಣದ ಪ್ರಮುಖ ಆಶ್ರಯವಾಗಿವೆ. ಆದರೆ ಇತ್ತೀಚಿನ ದಶಕಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣ ಮತ್ತು ಬಂಡವಾಳೀಕರಣದ ಪ್ರಭಾವ ಹೆಚ್ಚಾಗುತ್ತಿದೆ. ಶಿಕ್ಷಣವನ್ನು ಸಾರ್ವಜನಿಕ ಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿ ನೋಡುವ ಬದಲು, ಲಾಭ ಗಳಿಸುವ ಉದ್ಯಮವಾಗಿ ಪರಿಗಣಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದರ ಪರಿಣಾಮವಾಗಿ ಶಿಕ್ಷಣವು ಆರ್ಥಿಕವಾಗಿ ಸಬಲರಾದವರಿಗೆ ಸುಲಭವಾಗಿ ದೊರೆಯುವ ಸರಕಾಗಿಯೂ, ಬಡವರು ಮತ್ತು ದುರ್ಬಲ ವರ್ಗದವರಿಗೆ ಎಟಕಿಸಿಕೊಳ್ಳಲಾರದ ಹೊರೆಯಾಗಿಯೂ ಪರಿಣಮಿಸುವ ಅಪಾಯ ಎದುರಾಗಿದೆ. ಅಷ್ಟು ಮಾತ್ರವಲ್ಲದೆ ಅನೇಕ ಸರ್ಕಾರಿ ಕನ್ನಡ ಪಾಠಶಾಲೆಗಳು ಮುಚ್ಚುವ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಇದಕ್ಕೊಂದು ತಾಜಾ ಉದಾಹರಣೆ ನೀಡುವುದಾದರೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವ ಯಾದಗೆರೆ ಎಂಬ ಪುಟ್ಟ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಇದೆ. 75 ವರ್ಷಗಳ ಹಿಂದೆ 1951-52 ಪ್ರಾರಂಭವಾದ ಈ ಶಾಲೆಗೆ ಸಮೀಪದಲ್ಲಿ ಇದೇ ಯಾದಗೆರೆ ಗ್ರಾಮದಲ್ಲಿ ಇತ್ತೀಚೆಗೆ ‘ಸೆಂಟ್ ಮೇರಿಸ್ ಪಬ್ಲಿಕ್ ಸ್ಕೂಲ್’ ಹೆಸರಿನ ಖಾಸಗಿ ಶಾಲೆಯೊಂದು ತಲೆ ಎತ್ತಿ ನಿಂತಿದೆ. ಈ ಖಾಸಗಿ ಶಾಲೆಯ ಪ್ರಭಾವ ಹೆಚ್ಚಾದಂತೆ ಯಾದಗೆರೆ ಗ್ರಾಮದ ಸರ್ಕಾರಿ ಶಾಲೆಯು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಇದು ತನ್ನ ಅಸ್ತಿತ್ವವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಕೊರಚರು – ಕೊರಮರು ಎಂಬ ಸಮುದಾಯಗಳೇ ಪ್ರಧಾನವಾಗಿ ನೆಲೆಸಿರುವ ಯಾದಗೆರೆ ಗ್ರಾಮಕ್ಕೆ ಇತ್ತೀಚೆಗೆ ನಾನು ಮತ್ತು ಶಿಕ್ಷಕನಾಗಿರುವ ನನ್ನ ಕಿರಿಯ ತಮ್ಮನಾದ ಹನುಮಂತರಾಯ ವಿ.ಹೆಚ್ ಭೇಟಿ ನೀಡಿ ಅಲ್ಲಿನ ಕೊರಚ – ಕೊರಮರ ಬದುಕಿನ ಕ್ಷೇತ್ರಾಧ್ಯಯನ ನಡೆಸಿದೆವು. ಅಲ್ಲಿನ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೂ ಭೇಟಿ ನೀಡಿದೆವು. ಯಾದಗೆರೆ ಗ್ರಾಮದ ಈ ಶಾಲೆಯಲ್ಲಿ ನಿವೃತ್ತಿಯ ಅಂಚಿನಲ್ಲಿರುವ ತಿಪ್ಪೇಸ್ವಾಮಿ ಜಿ (ಮುಖ್ಯ ಶಿಕ್ಷಕ) ಮತ್ತು ಕೃಷ್ಣಪ್ಪ ಬಿ (ಸಹಾಯಕ ಶಿಕ್ಷಕ) ಎಂಬ ಇಬ್ಬರು ತರಬೇತುಗೊಂಡ ನುರಿತ ಪ್ರತಿಭಾವಂತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಯಾದಗೆರೆ ಗ್ರಾಮದ ಪೋಷಕರ ಮಿದುಳಿಗೆ ಹೊಕ್ಕಿರುವ ಕಾನ್ವೆಂಟ್ ಶಿಕ್ಷಣದ ವ್ಯಾಮೋಹದಿಂದಾಗಿ ತಮ್ಮ ಮಕ್ಕಳನ್ನು ತಮ್ಮದೇ ಊರಿನಲ್ಲಿರುವ ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ, ನುರಿತ ಶಿಕ್ಷಕರು ಮತ್ತು ಕಲಿಕಾ ಸೌಲಭ್ಯಗಳ ಕೊರತೆ ಇಲ್ಲದಿದ್ದರೂ ಸರ್ಕಾರಿ ಶಾಲೆಯ ಮೇಲಿನ ಸಾರ್ವಜನಿಕರ ಅಸಡ್ಡೆ ತೀವ್ರವಾಗಿ ಬೆಳೆಯುತ್ತಿದೆ. ಯಾದಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ‘ಸೆಂಟ್ ಮೇರಿಸ್ ಪಬ್ಲಿಕ್ ಸ್ಕೂಲ್’ ನ ಶಿಕ್ಷಣದ ಬಂಡವಾಳೀಕರಣ ವ್ಯವಸ್ಥೆಯು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜದ ಜನರನ್ನು ವಿಭಜನೆ ಮಾಡುತ್ತಿದೆ. ಕ್ರಿಶ್ಚಿಯನ್ ಧರ್ಮದ ಹೆಸರು ಹೊತ್ತಿರುವ ಈ ಶಾಲೆಯಲ್ಲಿ ಶಿಕ್ಷಣವು ಧರ್ಮದತ್ತಿ ಸೇವಾಕಾರ್ಯವಾಗಿ ಬಾಹ್ಯ ತೋರಿಕೆಗೆ ಮಾತ್ರ ಕಾಣಿಸುತ್ತಿದೆ. ಆದರೆ ಇದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣವನ್ನು ಮಾರಾಟ ಮಾಡಲು ತೆರೆದಿರುವ ಒಂದು ಅಂಗಡಿ ಮಳಿಗೆಯಾಗಿದೆ. ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಬಂದು ಹೋಗಲು ಪ್ರತ್ಯೇಕ ಸುಸಜ್ಜಿತ ಬಸ್ಸುಗಳ ಅನುಕೂಲ ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿ ಕೂಡಾ ಮಕ್ಕಳೊಂದಿಗೆ ಇಂಗ್ಲಿಷಿನಲ್ಲಿ ವ್ಯವಹರಿಸುವ ವಾತಾವರಣ ಇದೆ. ಯಾದಗೆರೆ ಗ್ರಾಮದ ಹತ್ತು ಕಿಲೋಮೀಟರ್ ವ್ಯಾಪ್ತಿಯ ಹಲವಾರು ಹಳ್ಳಿಗಳ ಶ್ರೀಮಂತ ಕುಟುಂಬಗಳ ಪೋಷಕರು ವಾರ್ಷಿಕ ₹.35,000 ಸಂದಾಯ ಮಾಡಿ ತಮ್ಮ ಮಕ್ಕಳನ್ನು ಈ ದುಬಾರಿ ಖಾಸಗಿ ಶಾಲೆಗೆ ಸೇರಿಸಿ ಗುಣಮಟ್ಟದ ಸೌಲಭ್ಯಗಳನ್ನು ಪಡೆಯುತ್ತಾರೆ. ಇದೇ ಹಳ್ಳಿಗಳ ಕಡು ಬಡತನದ ಕುಟುಂಬಗಳ ಬೆರಳೆಣಿಕೆಯಷ್ಟು ಮಕ್ಕಳು ಸೀಮಿತ ಸೌಲಭ್ಯಗಳಿರುವ ಸರ್ಕಾರಿ ಶಾಲೆಗೆ ಸೇರುತ್ತಿದ್ದಾರೆ.

ಯಾದಗೆರೆ ಗ್ರಾಮವೊಂದರಲ್ಲಿಯೇ ಎರಡು ರೀತಿಯ ಶಿಕ್ಷಣ ವ್ಯವಸ್ಥೆಗಳು ರೂಪುಗೊಂಡಿವೆ. ಇದರಿಂದಾಗಿ ಮಕ್ಕಳಲ್ಲಿ ಸಮಾನ ಅವಕಾಶ ಮತ್ತು ಸಾಮಾಜಿಕ ಸಮಾನತೆಯ ತತ್ವ ದುರ್ಬಲವಾಗುತ್ತಿದೆ. ಕೆಲವು ಬಡ ಕುಟುಂಬಗಳ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ತಾವು ದುಡಿದ ದುಡಿಮೆ ಎಲ್ಲವನ್ನೂ ಮಕ್ಕಳ ಫೀಸು ತುಂಬಲು ವ್ಯಯಿಸುತ್ತಿದ್ದಾರೆ. ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿರುವುದನ್ನೇ ಬಲು ಕಿಮ್ಮತ್ತಿನ ವಿಷಯವೆಂದು ಇವರು ಭಾವಿಸುತ್ತಾರೆ. ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲಾಗದ ಪೋಷಕರು ತಮ್ಮ ಆರ್ಥಿಕ ಗತಿಗೇಡಿತನದ ಬಗ್ಗೆ ಪೇಚಾಡುತ್ತಾರೆ. ಹೀಗೆ ಶಿಕ್ಷಣವು ಸಾಮಾಜಿಕ ಅಸಮಾನತೆಯನ್ನು ನಿವಾರಿಸುವ ಸಾಧನವಾಗುವ ಬದಲು, ಬಡವ ಬಲ್ಲಿದರೆಂಬ ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆಯಾಗಿದೆ. ಯಾದಗೆರೆ ಗ್ರಾಮದ ಇಂತಹ ಶೈಕ್ಷಣಿಕ ಪರಿಸ್ಥಿತಿ ಒಂದು ಸಾಂಕೇತಿಕ ಉದಾಹರಣೆ ಮಾತ್ರ.

ಯಾದಗೆರೆ ಗ್ರಾಮದ ‘ಸೆಂಟ್ ಮೇರಿಸ್ ಪಬ್ಲಿಕ್ ಸ್ಕೂಲ್’ನ ಬಸ್ಸುಗಳು ವಿದ್ಯಾರ್ಥಿಗಳ ಮನೆ ಬಾಗಿಲುಗಳಿಗೆ ಬರುತ್ತವೆ. ಶಾಲೆಯ ಹೆಸರು ಹೊತ್ತ ಹಳದಿ ಬಸ್ಸುಗಳು ಊರೂರು ಓಡಾಡುತ್ತಾ ಜನರ ಕಣ್ಣುಗಳನ್ನು ಸೆಳೆಯುತ್ತಿವೆ. ಖಾಸಗಿ ಶಾಲೆಗಳ ಜಾಹೀರಾತು, ಇಂಗ್ಲಿಷ್ ಮಾಧ್ಯಮದ ಆಕರ್ಷಣೆ ಮತ್ತು ಪೋಷಕರಲ್ಲಿ ಮೂಡಿಸುವ ಪ್ರತಿಷ್ಠೆಯ ಭಾವನೆಯಿಂದ ಅನೇಕ ಕುಟುಂಬಗಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿವೆ. ಇದರಿಂದ ಯಾದಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 1951ರಲ್ಲಿ ಪ್ರಾರಂಭವಾಗಿ 75 ವರ್ಷಗಳನ್ನು ಪೂರೈಸಿರುವ ಯಾದಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯು ತನ್ನ ಇತಿಹಾಸದಲ್ಲಿ ಇದೇ ವರ್ಷ ಮೊದಲ ಬಾರಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ಕಂಡಿದೆ !

ಹೀಗೆ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಕಡಿಮೆಯಾದಾಗ ಶಾಲೆಗಳ ವಿಲೀನ, ಶಿಕ್ಷಕರ ವರ್ಗಾವಣೆ ಮತ್ತು ಶಾಲೆಗಳ ಮುಚ್ಚುವಿಕೆಯಂತಹ ಆಡಳಿತಾತ್ಮಕ ಬಿಕ್ಕಟ್ಟುಗಳು ಎದುರಾಗುತ್ತವೆ. ಇದರ ಪರಿಣಾಮವಾಗಿ ಕಡುಬಡತನದ ಕುಟುಂಬಗಳ ಮಕ್ಕಳು ಶಿಕ್ಷಣಕ್ಕಾಗಿ ನೆಂಟರಿಷ್ಟರನ್ನು ಆಶ್ರಯಿಸಿ ಪೋಷಕರನ್ನು ತೊರೆದು ದೂರದ ಊರುಗಳಿಗೆ ಹೋಗಿ ಕಲಿಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದು ಬಡ ಮತ್ತು ದುರ್ಬಲ ವರ್ಗಗಳ ಪೋಷಕರನ್ನು ಮತ್ತಷ್ಟು ಆರ್ಥಿಕ ಹೊರೆಗೆ ದೂಡುತ್ತದೆ. ಮಕ್ಕಳನ್ನು ದೂರದ ಊರುಗಳಿಗೆ ಕಳಿಸಲು ಇಷ್ಟಪಡದಿರುವ, ದುರ್ಬಲ ಆರ್ಥಿಕ ಹಿನ್ನೆಲೆಯ ಕೆಲವು ಪೋಷಕರು, ಹಾಗೊಂದು ವೇಳೆ ಸ್ವಲ್ಪ ಧೈರ್ಯಮಾಡಿ ಖಾಸಗಿ ಶಾಲೆಗೆ ಸೇರಿಸಿದರೆಂದರೆ ಪ್ರವೇಶ ಶುಲ್ಕ, ಬೋಧನಾ ಶುಲ್ಕ, ಸಾರಿಗೆ ಶುಲ್ಕ, ಸಮವಸ್ತ್ರ, ಪುಸ್ತಕಗಳು ಮತ್ತು ಇತರ ಚಟುವಟಿಕೆಗಳ ಹೆಸರಿನಲ್ಲಿ ತಾಳಿಕೊಳ್ಳಲಾರದಷ್ಟು ಆರ್ಥಿಕ ಹೊರೆ ಬೀಳುತ್ತದೆ. ಕಡಿಮೆ ಆದಾಯದ ಕುಟುಂಬಗಳು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಬೇಕಾದ ಅಥವಾ ಹೊಟ್ಟೆಬಟ್ಟೆ ಕಟ್ಟಿ ತಮ್ಮ ಅಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಶಿಕ್ಷಣ ಪಡೆಯುವ ಅವಕಾಶವು ಮಕ್ಕಳ ಪ್ರತಿಭೆ ಮತ್ತು ಆಸಕ್ತಿಗಿಂತ ಕುಟುಂಬದ ಆರ್ಥಿಕ ಸ್ಥಿತಿಯನ್ನು ಅವಲಂಬಿಸುವ ಅಪಾಯ ಹೆಚ್ಚುತ್ತದೆ.

ಶಿಕ್ಷಣದ ಬಂಡವಾಳೀಕರಣವು ಶಿಕ್ಷಕರ ವೃತ್ತಿಪರ ಸ್ಥಿತಿಗತಿಯ ಮೇಲೆಯೂ ಪರಿಣಾಮ ಬೀರುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ವೇತನಕ್ಕೆ ಅಥವಾ ಅತ್ಯಂತ ಹೆಚ್ಚು ವೇತನಕ್ಕೆ ಶಿಕ್ಷಕರನ್ನು ನೇಮಿಸುವ ಪ್ರವೃತ್ತಿ ಕಂಡುಬರುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದ ಭದ್ರತೆಯ ಕೊರತೆ ತೀರಾ ಸಾಮಾನ್ಯ ಅಂಶವಾಗಿದೆ. ಆದಾಗ್ಯೂ ಇಲ್ಲಿ ಶಿಕ್ಷಕರ ಮೇಲೆ ಆಡಳಿತಾತ್ಮಕ ಮತ್ತು ಫಲಿತಾಂಶದ ಒತ್ತಡ ತೀವ್ರವಾಗಿದೆ. ಯಾಕೆಂದರೆ ಖಾಸಗಿ ಸಂಸ್ಥೆಗಳು ಬೋಧನೆಯ ಗುಣಮಟ್ಟಕ್ಕಿಂತ ಸಂಸ್ಥೆಯ ಆರ್ಥಿಕ ಹಿತಾಸಕ್ತಿಗೆ ಆದ್ಯತೆ ನೀಡುತ್ತವೆ. ಯಾದಗೆರೆ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಮಗುವಿಗೆ ರಜೆ ಬೇಕೆಂದರೆ ಪೋಷಕರು ಒಂದು ದಿನ ಮೊದಲೇ ರಜೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಆಕಸ್ಮಿಕವಾಗಿ ಮಗು ಶಾಲೆಗೆ ಹಾಜರಾಗಿಲ್ಲವೆಂದರೆ ತಕ್ಷಣವೇ ಶಾಲೆಯಿಂದ ಪೋಷಕರಿಗೆ ಫೋನ್ ಕರೆ ಮಾಡಿ ವಿಚಾರಿಸಲಾಗುತ್ತದೆ. ಶಾಲೆಯ ಅಂಗಳಕ್ಕೆ ಯಾರಾದರೂ ಪ್ರವೇಶ ಮಾಡಬೇಕೆಂದರೂ ಪ್ರವೇಶ ದ್ವಾರದಲ್ಲಿರುವ ಗೇಟ್ಕೀಪರ್-  ವಾಚ್ಮನ್ ಮೂಲಕ ಶಾಲಾ ಆಡಳಿತದವರಿಂದ ಅನುಮತಿ ಪಡೆಯಬೇಕಾಗುತ್ತದೆ. ಕುರಿದೊಡ್ಡಿಯಂತಹ ಸರ್ಕಾರಿ ಶಾಲೆಯೊಳಕ್ಕೆ ಬೀದಿನಾಯಿ ಕೂಡಾ ಸಲೀಸಾಗಿ ನುಗ್ಗಿ ಬರಬಹುದು ! ಸರ್ಕಾರಿ ಶಾಲೆಯ ಮಗು ಒಂದು ವಾರವೇನು ಒಂದು ತಿಂಗಳು ಶಾಲೆಗೆ ಹಾಜರಾಗದೆ ಹೊರಗುಳಿದರೂ ಕೂಡಾ ಕೇಳುವುದಿಲ್ಲ ! ಮಧ್ಯಾಹ್ನದ ಬಿಸಿಯೂಟದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಬಾಳೆಹಣ್ಣು, ಮೊಟ್ಟೆ ಮೊದಲಾದ ಪೌಷ್ಟಿಕಾಹಾರ ಒದಗಿಸುವ ಸೌಲಭ್ಯವಿದ್ದರೂ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಬಣಗುಡುತ್ತಿವೆ. ಇಂತಹ ಯಾವುದೇ ಸೌಲಭ್ಯವಿಲ್ಲದೆ ಮನೆಗಳಿಂದಲೇ ಲಂಚ್ ಬಾಕ್ಸ್ ಕೊಂಡೊಯ್ದು ಶಿಕ್ಷಣ ಪಡೆಯುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ದಟ್ಟಣೆಯಲ್ಲಿ ಗಿಜಿಗುಡುತ್ತಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಹಾಗೂ ಇಂಗ್ಲೀಷ್ ಕಲಿತವರು ಮಾತ್ರ ಹೆಚ್ಚಿನ ಮನ್ನಣೆ ಪಡೆಯುತ್ತಿರುವ ಪ್ರವೃತ್ತಿಯಿಂದಾಗಿ  ಕನ್ನಡ ಮಾಧ್ಯಮ ಮಕ್ಕಳು ಕೀಳರಿಮೆ ಬೆಳೆಸಿಕೊಳ್ಳುತ್ತಿದ್ದಾರೆ. ಅಷ್ಟಲ್ಲದೆಯೇ ಕನ್ನಡ ಭಾಷೆಯೂ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತಿದೆ. ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶದ ಮಹತ್ವವೂ ತಗ್ಗುತ್ತಿದೆ. ಶಿಕ್ಷಣದಲ್ಲಿ ಭಾಷೆ ಕೂಡಾ ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸುತ್ತಿರುವುದು ಒಂದು ವಿಕೃತಿಯೇ ಹೊರತು ನಾಗರಿಕ ಸಮಾಜದ ಸಲ್ಲಕ್ಷಣವಲ್ಲ. ಇಂಗ್ಲಿಷ್ ಕಲಿಕೆ ಅಗತ್ಯವಿದೆಯಾದರೂ ಕನ್ನಡ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ನಿರ್ಲಕ್ಷಿಸುವುದು ಸಾಂಸ್ಕೃತಿಕ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರಿ ಶಾಲೆಗಳು ಕೇವಲ ಪಠ್ಯಪುಸ್ತಕದ ಜ್ಞಾನವನ್ನು ನೀಡುವ ಸಂಸ್ಥೆಗಳಲ್ಲ. ಅವು ಸಾಮಾಜಿಕ ಸಾಮರಸ್ಯ, ಸಮಾನತೆ, ಸಹಬಾಳ್ವೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಿವೆ. ಶಿಕ್ಷಣದ ಖಾಸಗೀಕರಣ ಮತ್ತು ಬಂಡವಾಳೀಕರಣವು ಸಂಸ್ಥೆಯ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಶಿಕ್ಷಣದ ಸಾಮಾಜಿಕ ಉದ್ದೇಶ ಹಿಂದೆ ಸರಿಯುತ್ತಿದೆ.

ಹೇಳಿಕೇಳಿ ಕೊರಚ – ಕೊರಮರು ಅತ್ಯಂತ ಹಿಂದುಳಿದಿರುವ ಅಲೆಮಾರಿ ಬುಡಕಟ್ಟು ಸಮುದಾಯವಾಗಿದೆ. ಇವರು ಬ್ರಿಟಿಷ್ ಸರ್ಕಾರವು ರೂಪಿಸಿದ್ದ Criminal Tribes Act -1871 ರ ಅಡಿಯಲ್ಲಿ ಜನ್ಮತಃ ಅಪರಾಧಿ ಬುಡಕಟ್ಟುಗಳ ಪಟ್ಟಿಗೆ ಸೇರಿದ್ದವರು. ಇಂತಹ ಅಂಚಿನ ಸಮುದಾಯಗಳ ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವ ಸಾರ್ವಜನಿಕ ಶಿಕ್ಷಣದ ಆಶಯ ಖಾಸಗೀಕರಣದಿಂದಾಗಿ ಮಣ್ಣುಪಾಲಾಗುತ್ತಿದೆ. ಯಾದಗೆರೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಕಳೆದ ಮುಕ್ಕಾಲು ಶತಮಾನದಿಂದಲೂ ಎಲ್ಲಾ ವರ್ಗಗಳ ಸ್ಥಳೀಯ ಮಕ್ಕಳಿಗೆ ಸುಲಭವಾಗಿ ಶಿಕ್ಷಣ ನೀಡುತ್ತಾ ಸಾಮಾಜಿಕ ಸಮಾನತೆಯ ಕೇಂದ್ರವಾಗಿದೆ. ಆದರೆ ಇದೇ ಗ್ರಾಮಕ್ಕೆ ಸರ್ಕಾರಿ ಶಾಲೆಯ ಅಸ್ತಿತ್ವಕ್ಕೆ ಭಂಗ ತರುವಂತೆ ಖಾಸಗಿ ಶಾಲೆಯನ್ನು ತೆರೆಯಲು ಅನುಮತಿ ನೀಡಿರುವುದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಅವಿವೇಕ ಮತ್ತು ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ. ಶಿಕ್ಷಣವನ್ನು ಸೇವೆಯ ಬದಲಿಗೆ ಮಾರುಕಟ್ಟೆಯ ಮಳಿಗೆಯನ್ನಾಗಿಸಿರುವುದು ಅತ್ಯಂತ ಶೋಚನೀಯ ಸಂಗತಿ.

2025-26ನೇ ಈ ಶೈಕ್ಷಣಿಕ ವರ್ಷದಲ್ಲಿ ಯಾದಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕೇವಲ ಹನ್ನೆರಡು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಅದೇ ಖಾಸಗಿ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉಚಿತ ಶಿಕ್ಷಣ ಒದಗಿಸುವ ಸಾರ್ವಜನಿಕ ಶಾಲೆಯ ಎದುರಿನಲ್ಲಿ ವರ್ಷಕ್ಕೆ ₹.35,000 ರೂಪಾಯಿಗಳಿಗೂ ಹೆಚ್ಚಿನ ಶುಲ್ಕವನ್ನು ಪೋಷಕರಿಂದ ಪೀಕಿ ಶಿಕ್ಷಣ ನೀಡುವ ಖಾಸಗಿ ಶಾಲೆಯು ಸಾಮಾಜಿಕ ಅಸಮಾನತೆಗೆ ಘೋರ ರೂಪಕವಾಗಿ ಅಟ್ಟಹಾಸ ಮೆರೆಯುತ್ತಿದೆ. ಯಾದಗೆರೆ ಗ್ರಾಮದ ಬಡವರು ತಮ್ಮೂರಿನ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸಬೇಕಾದ ಪರಿಸ್ಥಿತಿ ನಾಳೆಯ ದಿನಗಳಲ್ಲಿ ಎದುರಾದಲ್ಲಿ ಆಶ್ಚರ್ಯವೇನೂ ಇಲ್ಲ.

ಮುಂದಾಗಲಿರುವ ಇಂತಹ ವಿಪತ್ತಿನಿಂದ ಸರ್ಕಾರಿ ಶಾಲೆಯನ್ನು ಪಾರುಮಾಡಲು ಸರ್ಕಾರವು ಇಂತಹ ಸಾರ್ವಜನಿಕ ಶಾಲೆಗಳ ಅಭಿವೃದ್ಧಿಗೆ ಅಗತ್ಯವಾದ ಹೆಚ್ಚಿನ ಅನುದಾನ, ಶಿಕ್ಷಕರ ನೇಮಕಾತಿ, ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಕಂಪ್ಯೂಟರ್ ತರಬೇತಿ ಮತ್ತು ಡಿಜಿಟಲ್ ಕಲಿಕಾ ಸೌಲಭ್ಯಗಳನ್ನು ಒದಗಿಸವುದು ತೀರಾ ಅಗತ್ಯವಾಗಿದೆ. ಖಾಸಗಿ ಶಾಲೆಗಳನ್ನು ಸ್ಥಾಪಿಸಿ ಬಂಡವಾಳಶಾಹಿಗಳನ್ನು ಮತ್ತಷ್ಟು ಕೊಬ್ಬಿಸುವ ಬದಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವನ್ನು ಸುಧಾರಿಸುವ ಹಾಗೂ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ದಿಕ್ಕಿನಲ್ಲಿ ಆಲೋಚಿಸುವುದು ಉತ್ತಮ. ಶಿಕ್ಷಣದ ಬಂಡವಾಳೀಕರಣವು ಕೇವಲ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಅದು ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳ ಸಾಕಾರಕ್ಕೆ ಸಾರ್ವಜನಿಕ ಶಾಲಾ ಶಿಕ್ಷಣ ಅತ್ಯಂತ ಮಹತ್ವದ ಸಾಧನವಾಗಿದೆ. ಸರ್ಕಾರಿ ಶಾಲೆಗಳನ್ನು ಶಿಕ್ಷಣದ ಮಾದರಿ ಕೇಂದ್ರಗಳನ್ನಾಗಿ ರೂಪಿಸುವುದು ಸ್ಥಳೀಯ ಜನಪ್ರತಿಧಿಗಳ ಹಾಗೂ ನಾಗರಿಕರ ಆದ್ಯತೆಯಾಗಬೇಕಿದೆ.

– ಡಾ.ವಡ್ಡಗೆರೆ ನಾಗರಾಜಯ್ಯ, 8722724174

Leave a Reply