ಕೊರಗ ಸಮುದಾಯವನ್ನು ಬೀದಿಗೆ ತಳ್ಳುವ ಧೋರಣೆ ಅಮಾನುಷ

1 year ago

ಆದಿವಾಸಿಗಳ ವಿರುದ್ಧ ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ: ಡಾ. ಕೃಷ್ಣಪ್ಪ ಕೊಂಚಾಡಿ.

ಮಂಗಳೂರು: ಸಾಣೂರು — ಬಿಕರ್ಣಕಟ್ಟೆ ಹೆದ್ದಾರಿ ಅಗಲೀಕರಣಕ್ಕಾಗಿ ವಾಮಂಜೂರಿನ ಮಂಗಳಜ್ಯೋತಿಯಲ್ಲಿ ನೂರಾರು ವರ್ಷಗಳಿಂದ ವಾಸವಾಗಿರುವ ಕೊರಗ ಸಮುದಾಯದ ಕುಟುಂಬಗಳನ್ನು ಬೀದಿಗೆ ತಳ್ಳುವ ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಧೋರಣೆ ಅಮಾನುಷ ಮತ್ತು ತೀವ್ರ ಖಂಡನೀಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಎದುರು ಭರವಸೆ ನೀಡಿ ಅದಕ್ಕೆ ವ್ಯತಿರಿಕ್ತವಾಗಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಲು ಮುಂದಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿ ಗಳ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ  ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇವಲ ಕೊರಗಜ್ಜ ಗುಡಿಗೆ ಮಾತ್ರ ನೋಟಿಸು ನೀಡಿ  ಜುಜುಬಿ 5 ಲಕ್ಷ ಪರಿಹಾರವನ್ನು ಘೋಷಿಸಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಉಳಿದಂತೆ ಅಲ್ಲಿ 70 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸಿಸುತ್ತಿರುವ ಕೊರಗ ಕುಟುಂಬಗಳಿಗೆ ಯಾವುದೇ ನೋಟಿಸು,  ಪರ್ಯಾಯ ವ್ಯವಸ್ಥೆ, ಪರಿಹಾರವನ್ನು ನೀಡದೆ, ಏಕಾಏಕಿ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಲು ಮುಂದಾಗಿರುವುದನ್ನು ಖಂಡನೀಯ ಎಂದರು.

ಈಗ ಮುನ್ಸಿಪಾಲ್ಟಿ ಹೆಸರಿನಲ್ಲಿರುವ ಜಾಗ ಮತ್ತು ಕೊರಗಜ್ಜ ಗುಡಿ ಇರುವ ಜಾಗ ವಾಸ್ತವಿಕವಾಗಿ ಕುದ್ಮುಲ್ ರಂಗರಾಯರ ಶಿಷ್ಯ ವೆಂಕೋಜಿ ರಾವ್ ಕೊರಗ ಸಮುದಾಯಕ್ಕೆ ಎಂದು 1933ರಲ್ಲಿ ನೀಡಿರುವ 8.94 ಎಕರೆ ಜಾಗದಲ್ಲಿ ಬರುತ್ತಿದ್ದು 1962ರಲ್ಲಿ ಆಗಿನ ಮುನ್ಸಿಪಾಲ್ಟಿಯು  ಅಕ್ರಮವಾಗಿ ತನ್ನ ಹೆಸರಿಗೆ ಭೂ ಪರಿವರ್ತನೆ ಮಾಡಿ ಕೊರಗರಿಂದ ಭೂಮಿ ಲಪಟಾಯಿಸಿ ಈಗ ಕೊರಗರ ಬದುಕನ್ನೇ ಲಪಟಾಯಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಸ್ಥಳೀಯ ಘಟಕದ ಅಧ್ಯಕ್ಷ ಕರಿಯ. ಕೆ ಮಾತನಾಡಿ, ಕಮಿಷನರ್ ಮತ್ತು ಹೆದ್ದಾರಿ ಇಲಾಖೆ ಕೊಟ್ಟ ಮಾತಿಗೆ ವ್ಯತಿರಿಕ್ತವಾಗಿ ವಚನಭ್ರಷ್ಟತೆಯನ್ನು ತೋರಿ ನಮ್ಮ ಮನೆ ಉರುಳಿಸಲು ಬುಲ್ಡೋಜರ್ ಕಳುಹಿಸಿದೆ. ಬುಲ್ಡೋಜರ್ ಎಂಬುದು ಜಾಗತಿಕವಾಗಿ ಅನ್ಯಾಯ, ದೌರ್ಜನ್ಯ,  ದಬ್ಬಾಳಿಕೆಗಳ ಸಂಕೇತ. ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆದ್ದಾರಿ ಇಲಾಖೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದಾರೆ ಎಂದರು.

ಜನಪರ ಹೋರಾಟಗಾರರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾಗಿ ಅಳಿವಿನ ಅಂಚಿನಲ್ಲಿರುವ ಕೊರಗ ಸಮುದಾಯವನ್ನು  ಸರ್ವನಾಶ ಮಾಡಲು ಹೊರಟಿರುವ ಕಮಿಷನರ್ ಮತ್ತು ಹೆದ್ದಾರಿ ಇಲಾಖೆಯ ವಿರುದ್ಧ ನಾಗರೀಕರೆಲ್ಲರೂ ತೀವ್ರವಾಗಿ ಪ್ರತಿಭಟಿಸಬೇಕು, ಕೊರಗಜ್ಜನ ಗುಡಿ ಮತ್ತು ಎಲ್ಲಾ ಮನೆಗಳಿಗೆ ಕನಿಷ್ಠ 15 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದೂ ಅದಕ್ಕಾಗಿ ನಿರಂತರ ಹೋರಾಟ ನಡೆಸಬೇಕು ಎಂದು ಕರೆನೀಡಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಕೃಷ್ಣ ಇನ್ನಾ, ಸಿಐಟಿಯು ದ.ಕ  ಜಿಲ್ಲಾ ಮುಖಂಡ ವಸಂತ ಆಚಾರಿ, ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ ಕೆ ಇಂತಿಯಾಸ್, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಕೆ ಯಾದವ ಶೆಟ್ಟಿ ಮೊದಲಾದವರು ಮಾತನಾಡಿದರು.

ಪ್ರಾರಂಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮಾರ್ಗದರ್ಶಕ ಯೋಗೀಶ್  ಜಪ್ಪಿನಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಮುಂದಾಳುಗಳು, ಅಖಿಲ ಭಾರತ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಯುವಜನ ಸಂಘಟ ಡಿ ವೈ ಎಫ್ಐನ  ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಕೋರ್ ಗ್ರೂಪ್ ನ ಸದಸ್ಯರಾದ ರವೀಂದ್ರ ವಾಮಂಜೂರು, ವಿಕಾಸ್, ಮಂಜುಳಾ, ಶೇಖರ ವಾಮಂಜೂರು, ಜಯಮಧ್ಯ, ಪೂರ್ಣೇಶ್, ತುಳಸಿ, ದಿನೇಶ್, ಕೃಷ್ಣ ಕತ್ತಲ್ ಸಾರ್, ವಿನೋದ್, ಪುನೀತ್, ಲಿಖಿತ್, ವಿಘ್ನೇಶ್ ಮುಂತಾದವರು ವಹಿಸಿಕೊಂಡಿದ್ದರು.

ಪ್ರಾರಂಭದಲ್ಲಿ ಜಿಲ್ಲಾ ಮಹಿಳಾ ನಾಯಕಿ ರಶ್ಮಿ ವಾಮಂಜೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.  ಕೊನೆಯಲ್ಲಿ ಬಜಪೆ ವಲಯ ಕಾರ್ಯದರ್ಶಿ ಕಿರಣ್ ಕತ್ತಲ್ ಸಾರ್ ವಂದಿಸಿದರು.

Leave a Reply