ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲೇ ನಡೆಯುತ್ತಿವೆ ಗಮನಸೆಳೆವ ಚಟುವಟಿಕೆಗಳು

5 months ago

ಬೆಂಗಳೂರು: ನಾಯಕತ್ವ ಬದಲಾವಣೆ, ಬ್ರೇಕ್ ಫಾಸ್ಟ್ ಮೀಟಿಂಗ್ ನಡುವೆ ರಾಜ್ಯ ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲೇ ಚಟುವಟಿಕೆಗಳು ನಡೆಯುತ್ತಿದ್ದು ಕುತೂಹಲ ಮೂಡಿಸಿದೆ.

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೆ, ಡಿಸಿಎಂ ಡಿ ಕೆ ಶಿವಕುಮಾರ್ ಖಾಸಗಿ ಕಾರ್ಯಕ್ರಮ ನಿಮಿತ್ತ ದೆಹಲಿಗೆ ತೆರಳಿದ್ದಾರೆ.

ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ಭೇಟಿ ಮತ್ತು ಸಂವಾದದ ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿದ್ದರಾಮಯ್ಯ ಆಗಮಿಸಿದ್ದರು.

ಅಲ್ಲದೆ, ಕೆ ಸಿ ವೇಣುಗೋಪಾಲ್ ಕೂಡಾ ಆಗಮಿಸಿದ್ದರು. ಈ ಇಬ್ಬರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲ ಹೊತ್ತು ರಾಜ್ಯ ರಾಜಕಾರಣದ ಕುರಿತು ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.

ಇದಾದ ನಂತರ ವೇಣುಗೋಪಾಲ್ ಅವರೊಂದಿಗೆ ಸಿದ್ದರಾಮಯ್ಯ ಭೋಜನ ಸೇವಿಸಿದ್ದು ಈ ವೇಳೆ ಸಚಿವರಾದ ಪರಮೇಶ್ವರ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಕೂಡ ಉಪಸ್ಥಿತರಿದ್ದು, ರಾಜ್ಯ ರಾಜಕಾರಣದ ಹಲವಾರು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಈ ಮಾತುಕತೆಯ ಬಗ್ಗೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ಸಹಜವಾಗಿ ವೇಣುಗೋಪಾಲ್ ಅವರ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಆದರೆ ರಾಜ್ಯದ ರಾಜಕೀಯ ಕುರಿತಾಗಿ ಯಾವುದೇ ಮಾತುಕತೆ ನಡೆಸಿಲ್ಲ ಎಂದರು.

ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಬೆಂಬಲಿಗರು ಪ್ರತ್ಯೇಕವಾಗಿ ಘೋಷಣೆ ಮತ್ತು ಪ್ರತಿ ಘೋಷಣೆಗಳನ್ನು ಹಾಕುವ ಮೂಲಕ ಗಮನ ಸೆಳೆದರು. ಕೆ ಸಿ ವೇಣುಗೋಪಾಲ್ ಅವರು ವಿಮಾನ ನಿಲ್ದಾಣದ ಹೊರ ಬರುತ್ತಿದ್ದಂತೆ ಡಿಕೆ ಶಿವಕುಮಾರ್ ಅಭಿಮಾನಿಗಳು ಡಿ ಕೆ ಡಿಕೆ ಎಂದು ಘೋಷಣೆ ಕೂಗಲು ಶುರುಮಾಡಿದರು. ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ ಹಾಗೂ ಮತ್ತಿತರರು ಡಿಕೆಶಿ ಪರವಾಗಿ ಘೋಷಣೆ ಕೂಗಿದರು.

ಕೆಲವೇ ಹೊತ್ತಿನಲ್ಲಿ ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಿದ್ದರಾಮಯ್ಯ ಪರವಾಗಿ ಮತ್ತೊಂದು ಬಣದ ಕಾರ್ಯಕರ್ತರು ಘೋಷಣೆ ಕೂಗಿದರು. ಸಿದ್ದು, ಸಿದ್ದು ಪೂರ್ಣಾವಧಿ ಸಿಎಂ ಎಂದು ಘೋಷಣೆ ಕೂಗುವ ಮೂಲಕ ಡಿ ಕೆ ಶಿವಕುಮಾರ್ ಅಭಿಮಾನಿಗಳಿಗೆ ತಿರುಗೇಟು ನೀಡಿದರು.

Leave a Reply