ರಾಹುಲ್ ಗಾಂಧಿ ಅವರ ಭೇಟಿಗೆ ಕಾದು ಕುಳಿತ ಡಿ ಕೆ ಶಿವಕುಮಾರ್

3 months ago

ದೆಹಲಿ: ನಾಯಕತ್ವ ಬದಲಾವಣೆ ವಿಚಾರ ರಾಜ್ಯ ಕಾಂಗ್ರೆಸ್ಸಿನಲ್ಲಿ ತೀವ್ರ ಚಟುವಟಿಕೆಗಳಿಗೆ ಕಾರಣವಾಗಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಭೇಟಿಗೆ ಕಾದು ಕುಳಿತಿರುವ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತೊಮ್ಮೆ ದೆಹಲಿಯಾತ್ರೆ ಕೈಗೊಂಡಿದ್ದಾರೆ.

ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ರಾತ್ರಿ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇದರ ನಡುವೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜನವರಿ 21ರಂದು ದೆಹಲಿಗೆ ತೆರಳುತ್ತಿದ್ದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ಅಧಿಕಾರ ಹಸ್ತಾಂತರಕ್ಕೆ ಪಟ್ಟು ಹಿಡಿದಿರುವ ಡಿಸಿಎಂ ಡಿ ಕೆ ಶಿವಕುಮಾರ್ ಬಿರುಸಿನ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಅಸ್ಸಾಂ ವಿಧಾನಸಭೆ ಚುನಾವಣೆ ವೀಕ್ಷಕರಾಗಿ ನೇಮಕಗೊಂಡಿರುವ ಅವರು, ದೆಹಲಿಗೆ ಆಗಮಿಸಿದ್ದು, ಚುನಾವಣಾ ಕಾರ್ಯತಂತ್ರ ಸಭೆಯಲ್ಲಿ ಪಾಲ್ಗೊಂಡರು ಈ ವೇಳೆ ಪ್ರತ್ಯೇಕವಾಗಿ ರಾಹುಲ್ ಗಾಂಧಿ ಅವರ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸಿದರಾದರೂ ಭೇಟಿ ಸಾಧ್ಯವಾಗಲಿಲ್ಲ.

ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೀದರ್ ಗೆ ಆಗಮಿಸಿದ್ದರು. ಅಲ್ಲಿಂದ ಮತ್ತೆ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ವಿದ್ಯಮಾನಗಳ ಕುರಿತು ರಾಹುಲ್ ಗಾಂಧಿ ಮತ್ತು ಕೆ ಸಿ ವೇಣುಗೋಪಾಲ್ ಅವರ ಜೊತೆ ಮಾತನಾಡಲು ಸಿದ್ಧತೆ ನಡೆಸಿದ್ದಾರೆ.

ಡಿ ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರ ಭೇಟಿಗೆ ಕಾದು ಕುಳಿತಿರುವ ನಡುವೆಯೇ ದೆಹಲಿಗೆ ಆಗಮಿಸಿದ ಇಂಧನ ಸಚಿವ ಕೆ ಜೆ ಜಾರ್ಜ್ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೇರಳ ವಿಧಾನಸಭೆ ಚುನಾವಣೆ ಉಸ್ತುವಾರಿಯಾಗಿರುವ ಅವರು, ರಾಹುಲ್ ಗಾಂಧಿ ಅವರ ಜೊತೆ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದು, ಕೇರಳ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ರಾಜ್ಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಮನವಿ ಮಾಡಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

Leave a Reply