ಹುಕ್ಕಾ ಬಾರ್ ನಿಷೇಧಕ್ಕೆ ರಾಜ್ಯ ಸರ್ಕಾರದಿಂದ ಯತ್ನ

2 years ago

ಬೆಳಗಾವಿ: ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆರೋಗ್ಯ ಇಲಾಖೆಯ ವರದಿಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹುಕ್ಕಾಬಾರ್‌ಗಳನ್ನು ನಿಷೇಧ ಮಾಡಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸಿ.ಕೆ.ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಇನ್ನಿತರ ನಗರಗಳಲ್ಲಿನ ಹುಕ್ಕಾಬಾರ್ ಸೇರಿದಂತೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದು, ಈ ಸಂಬಂಧ ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ನಗರದಲ್ಲಿ ಹುಕ್ಕಾಬಾರ್‌ಗಳ ಪ್ರಮಾಣ ಹೆಚ್ಚಾಗಿದ್ದು,ನಿಯಮ ಮೀರಿ ಹುಕ್ಕಾಬಾರ್ ನಡೆಸಿದರೆ ಪೊಲೀಸರು ದಾಳಿ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಹುಕ್ಕಾಬಾರ್‌ಗಳಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಯಾವುದೇ ರೀತಿಯ ಪರವಾನಗೆ ನೀಡುವುದಿಲ್ಲ. ಆದರೆ, ಕಾಫಿ, ಟೀ ಬಾರ್ ಮಾದರಿಯಲ್ಲೇ ಹುಕ್ಕಾಬಾರ್‌ಗಳ ಮಾಲಕರು 2022 ರಿಂದಲೂ ರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ಪಡೆದು ಹುಕ್ಕಾಬಾರ್‌ಗಳನ್ನು ನಡೆಸುತ್ತಿದ್ದಾರೆ. ಕೋರ್ಟ್ ಕೂಡ ಹುಕ್ಕಾ ಸೇದಲು ಕಾಫಿ, ಟೀ ಬಾರ್ ಬಾರ್ ಗಳಲ್ಲಿ ಪ್ರತ್ಯೇಕ ಕೊಠಡಿ ಸ್ಥಾಪಿಸಬೇಕೆಂದು ಸೂಚನೆ ನೀಡಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಹುಕ್ಕಾಬಾರ್‌ಗಳ ನಿಯಮಗಳನ್ನು ಪಾಲನೆ ಮಾಡದಿದ್ದ ವೇಳೆ, ದೂರುಗಳು ಬಂದರೆ ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಮಾತ್ರ ಅವಕಾಶವಿದೆ. ಆದರೆ ಹುಕ್ಕಾಬಾರ್‌ಗಳ ಮೇಲೆ ನಿಯಂತ್ರಣ ಸಾಧಿಸಲು ನಮಗೆ ಅವಕಾಶಗಳಿಲ್ಲ. ಅಕ್ಟೋಬರ್ 19 ರಂದು ಕೋರಮಂಗಲದಲ್ಲಿ ಬೆಂಕಿ ಅನಾಹುತ ಸಂವಿಸಿತ್ತು. ಅದರಲ್ಲಿ ಮೂರನೆ ಮಹಡಿಯಲ್ಲಿ 13 ಗ್ಯಾಸ್ ಸಿಲಿಂಡರ್‌ಗಳನ್ನು ಇರಿಸಲಾಗಿತ್ತು. ಬೆಂಕಿ ಅನಾಹುತ ಸಂವಿಸಿದಾಗ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ವ್ಯಕ್ತಿಯೊಬ್ಬ ಮೂರನೆ ಮಹಡಿಯಿಂದ ಕೆಳಗೆ ಜಿಗಿದಿದು ಮರದ ಮೇಲೆ ಬಿದ್ದು ಕೆಳಗೆ ಬಿದ್ದಿದ್ದರಿಂದ ಪವಾಡದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.

ಹುಕ್ಕಾಬಾರ್‌ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯುವಕರನ್ನು ಮಾದಕ ವ್ಯಸನಗಳಿಂದ ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಬಿಬಿಎಂಪಿ, ಪೊಲೀಸ್ ಹಾಗೂ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳ ಸಹಿತ ಸಂಬಂಧಪಟ್ಟ ಇಲಾಖೆಗಳ ಜತೆಗೆ ಸಮಾಲೋಚನೆ ನಡೆಸಿ ಹುಕ್ಕಾಬಾರ್‌ಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ರೂಪಿಸಲು ಕ್ರಮ ವಹಿಸಲಾಗುವುದು ಎಂದರು.

Leave a Reply