ಬೆಂಗಳೂರು: ನಾಡಿನ ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಈ ಮೊದಲು 1 ರಿಂದ 8ನೇ ತರಗತಿಯ ವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ನಮ್ಮ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ. ನಮ್ಮ ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಪುಟ್ಟ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ತಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಮಗೆ ಬಾಲಕಿ ಆಶಾ ನೆಹರು ಪಾಟೀಲ್ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಪುಟ್ಟ ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿತು. ಇಂಥ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಶಾಂತಿ, ಸೌಹಾರ್ದತೆಯ ಸಮೃದ್ಧ ಕರ್ನಾಟಕ ನಿರ್ಮಾಣದ ನನ್ನ ಸಂಕಲ್ಪಕ್ಕೆ ಈ ದಿನ ಇನ್ನಷ್ಟು ಬಲ ಬಂದಿದೆ ಎಂದು ಹೇಳಿದ್ದಾರೆ.




