ಹೆಸರುಗಳಷ್ಟೆ ಬದಲಾವಣೆಯಾಯಿತು; ಬದುಕು ಬದಲಾಗಲೇ ಇಲ್ಲ

3 years ago

#names #changed #Life #ksnagaraj

ಕಳೆದ ಒಂಭತ್ತು ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಬದುಕನ್ನು ಬದಲಾವಣೆ ಮಾಡದಿದ್ದರೂ ಹೆಸರುಗಳನ್ನಷ್ಟೇ ಬದಲಾವಣೆ ಮಾಡುತ್ತಾ ಇದನ್ನೇ ಒಂದು ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿದೆ.

ನೆಹರೂರವರ ಕಾಲದಲ್ಲಿ ಆರಂಭವಾದ ಯೋಜನಾ ಆಯೋಗ ನೀತಿ ಆಯೋಗವಾಗಿ ಹೆಸರು ಬದಲಾಯಿತು. ಅಂದು ಇದ್ದ ಐ.ಟಿ.ಐ. ಎಂಬ ತಾಂತ್ರಿಕ ತರಬೇತಿಯ ಹೆಸರು ಕೌಶಲ್ಯ ಅಭಿವೃದ್ಧಿ ನಿಗಮವಾಯಿತು. ಹೀಗೆ ಡಾ. ಮನಮೋಹನ್ ಸಿಂಗ್ರವರ ಕಾಲದಲ್ಲಿನ ಜನರಿಕ್ ಮೆಡಿಸನ್ ಹೆಸರು ಪ್ರಧಾನಮಂತ್ರಿ ಜನೌಷಧಿಯಾಯಿತು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ರೈತರ ಯೋಜನೆಗಳು, ಕಾರ್ಮಿಕರ ಯೋಜನೆಗಳು, ಶಿಕ್ಷಣ ಕ್ಷೇತ್ರದಲ್ಲಿನ ಕಾರ್ಯಕ್ರಮಗಳು ಹೆಸರುಗಳಷ್ಟೆ ಬದಲಾವಣೆಯಾಯಿತು. ಇದು ಸಾಲದೂ ಎಂಬಂತೆ ಜಿಲ್ಲೆಗಳಿಗೆ ಹೆಸರು, ರಸ್ತೆಗಳ ಹೆಸರು ಬದಲಾವಣೆ ಮಾಡಿ ಇದನ್ನು ಮತ್ತೊಂದು ಸಾಧನೆ ಎಂದು ಬಿಂಬಿಸಿಕೊಂಡಿರುತ್ತೀರಿ.

ತನಿಖಾ ಸಂಸ್ಥೆಗಳು, ಚುನಾವಣಾ ಆಯೋಗ ಇವುಗಳ ಮೇಲಿನ ತಮ್ಮ ಹಿಡಿತಕ್ಕಾಗಿ ಅದರ ಸ್ವರೂಪವನ್ನೇ ಬದಲಾಯಿಸಿದ್ದೀರಿ. ಶಿಕ್ಷಣ ಕ್ಷೇತ್ರ, ತೆರಿಗೆ ವ್ಯವಸ್ಥೆ ಮುಂತಾದವುಗಳು ರಾಜ್ಯ ಸರ್ಕಾರದ ವ್ಯಾಪ್ತಿಗಳಿಂದ ರಾಷ್ಟ್ರೀಯತೆಯ ಹೆಸರಿನಲ್ಲಿ ಹಕ್ಕುಗಳನ್ನು ಕಸಿದುಕೊಂಡಿದ್ದೀರಿ. ಪ್ರಾದೇಶಿಕವಾದ ಅಭಿಮಾನ ಹೆಮ್ಮೆಯೊಂದಿಗೆ ಹಿರಿಯರು ಸ್ಥಾಪಿಸಲ್ಪಟ್ಟಿದ್ದ ಅನೇಕ ಬ್ಯಾಂಕ್ಗಳನ್ನು ಮತ್ತೊಂದು ಬ್ಯಾಂಕ್ಗಳ ಜೊತೆಯಲ್ಲಿ ವಿಲೀನಗೊಳಿಸಿ ಅವುಗಳನ್ನು ಹೆಸರನ್ನೇ ಮಾಯ ಮಾಡಿರುತ್ತೀರಿ.

ಈಗ ದೇಶದ ಹೆಸರನ್ನು ಬದಲಾಯಿಸುವ ವಿಚಾರವನ್ನು ಪ್ರಾಯೋಗಿಕವಾಗಿ ಚರ್ಚೆಗೆ ಬಿಟ್ಟಿರುತ್ತೀರಿ. ದೇಶದ ಹೆಸರು ಏನಾದರೇನೂ ದೇಶದ ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆಯಾಗದ ರೀತಿಯಲ್ಲಿ ಉಳಿದುಕೊಂಡರೇ ಸಾಕು. ಇಲ್ಲಿ ಬೇಕಿರುವುದು ದೇಶಾಭಿಮಾನ.

ಕಳೆದ ಒಂಭತ್ತು ವರ್ಷದ ಅವಧಿಯಲ್ಲಿ ನಿರುದ್ಯೋಗದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿಲ್ಲ. ಬದಲಾಗಿ ಸಾಕಷ್ಟು ಕಾರ್ಖಾನೆಗಳು ಮುಚ್ಚಲ್ಪಟ್ಟವು. ಆಹಾರ ಪದಾರ್ಥಗಳ ಬೆಲೆಯು ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಿದೆ. ರೂಪಾಯಿಯ ಮೌಲ್ಯ ಡಾಲರ್ ಮುಂದೆ ಕುಸಿಯುತ್ತಿದೆ. ದೇಶದ ಸಾಲದ ಪ್ರಮಾಣ ಹೆಮ್ಮರವಾಗಿ ಬೆಳೆಯುತ್ತಿದೆ. ವ್ಯಕ್ತಿ ಸ್ವಾತಂತ್ರ್ಯ ದಮನವಾಗುತ್ತಿದೆ. ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುತ್ತಿದ್ದೀರಿ. ಮಣಿಪುರವು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭೀಕರ ಸಮಸ್ಯೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ದೇವರ, ಧರ್ಮ ವಿಚಾರಗಳನ್ನು ರಾಜಕೀಯ ಅಸ್ತ್ರಗಳನ್ನಾಗಿ ಬಳಸಿಕೊಂಡು ಜನರ ಭಾವನೆಗಳೊಂದಿಗೆ ಆಟವಾಡುವಂತಹ ರಾಜಕೀಯ ಮುಂದುವರೆದಿದೆ.

ವಿರೋಧ ಪಕ್ಷವೇ ಇಲ್ಲದ ಪ್ರಜಾಪ್ರಭುತ್ವ ಏಕ ಸಂಸ್ಕೃತಿ, ಏಕ ವ್ಯಕ್ತಿ ಆಧಾರಿತ ವ್ಯವಸ್ಥೆಯನ್ನು ದೇಶದಲ್ಲಿ ತರುವ ನಿಟ್ಟಿನಲ್ಲಿ ಮುಂದಾಗಿದ್ದೀರಿ. ಕೆಲವೇ ಕೆಲವು ಶ್ರೀಮಂತರ ಹಿತಕ್ಕಾಗಿ ಸರ್ಕಾರದ ನೀತಿಗಳು ರಚನೆಯಾಗುತ್ತಿವೆ. ರೈತರ ಬದುಕು ದುಡಿಯುವ ಜನರ ಬದುಕು ಸುಧಾರಣೆಯಾಗಲೇ ಇಲ್ಲ. ರಾಜ್ಯಗಳ ಮೇಲೆ ರಾಜ್ಯಪಾಲರ ಮೂಲಕ ನಿಯಂತ್ರಿಸುವಂತಹ ವ್ಯವಸ್ಥೆಯನ್ನು ರಾಜಾರೋಷವಾಗಿ ನಡೆಸುತ್ತಿದ್ದೀರಿ. ಬಹುಮತವಿದೆ ಎಂಬ ಕಾರಣಕ್ಕೆ ತಮಗಿಷ್ಟ ಬಂದ ಕಾನೂನುಗಳನ್ನು ರೂಪಿಸುತ್ತಿದ್ದೀರಿ.

ಕೇವಲ ಕೆಲವರು ಮಾಧ್ಯಮಗಳನ್ನು ತಮ್ಮದಾಗಿಸಿಕೊಂಡು ಅವುಗಳ ಮೂಲಕ ಕತೆಗಳನ್ನು ಹೆಣೆದು ಬಿ.ಜೆ.ಪಿ.ಯ ನಾಯಕರುಗಳನ್ನು ಮಹಾನ್ ನಾಯಕರಂತೆ ಚಿತ್ರಿಸಿಕೊಂಡು ಸುಳ್ಳುಗಳನ್ನೇ ಸತ್ಯವೆಂದು ಜನರ ಮನಸ್ಸಿನಲ್ಲಿ ಬಿತ್ತುವ ಕಾಯಕ ಮಾಡುತ್ತಿದ್ದೀರಿ. “ಒಟ್ಟಾರೆ ಜನರ ಬದುಕು ಬದಲಾವಣೆಯಾಗಲಿಲ್ಲ, ಹೆಸರುಗಳಷ್ಟೇ ಬದಲಾವಣೆಯಾಗುತ್ತಿದೆ”.

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply