ಮಕ್ಕಳ ಅಪಹರಣ ಮಾಡುತ್ತಿದ್ದ ಅಂತರಾಜ್ಯ ಕಳ್ಳನ ಬಂಧನ

2 years ago

ಬೆಂಗಳೂರು: ಹಣಕ್ಕಾಗಿ ಮಕ್ಕಳ ಅಪಹರಣ ಮಾಡುತ್ತಿದ್ದ ಅಂತರಾಜ್ಯ ಕಳ್ಳನನ್ನು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಜಾರ್ಖಂಡ್ ಮೂಲದವನಾಗಿದ್ದು, ಎಲೆಕ್ಟ್ರಾನಿಕ್‌ ಸಿಟಿಯ ಪ್ರಗತಿನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದ.ತಾನು ನಡೆಸುತ್ತಿದ್ದ ಉದ್ಯಮದಲ್ಲಿ ನಷ್ಟ ಮಾಡಿಕೊಂಡು ಹಲವು ಚಟಗಳ ದಾಸನಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆತನ ಚಟಗಳಿಂದ ಉಂಟಾದ ಹಣಕಾಸಿನ ತೊಂದರೆಯಿಂದ ಮಕ್ಕಳನ್ನು ಅಪಹರಣ ಮಾಡಿ ಸುಲಭವಾಗಿ ಹಣವನ್ನು ಗಳಿಸಲು ಮುಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕಳೆದ ಜೂ.17 ರಂದು ಸಂಜೆ 6ರ ವೇಳೆ ಪ್ರಗತಿನಗರ, ಚಿಕ್ಕತೋಗೂರು ಮುಖ್ಯರಸ್ತೆಯ ಹೋಟೆಲ್ ಮುಂಭಾಗ  ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಬಾಲಕನನ್ನು ಅಪಹರಿಸಿ ರಾತ್ರಿ 9.18 ರ ವೇಳೆ ಆತನ ತಂದೆಗೆ ಕರೆ ಮಾಡಿ ನಿಮ್ಮ ಮಗ, ನನ್ನ ಬಳಿಯಿದ್ದು, 10 ಲಕ್ಷ ರೂಗಳನ್ನು ಕೊಟ್ಟರೆ ಮಗುವನ್ನು ಬಿಡುತ್ತೇನೆ, ಇಲ್ಲವಾದರೆ ಮಗುವನ್ನು ಕೊಲೆ ಮಾಡುವುದಾಗಿ ಮತ್ತು ಪೊಲೀಸರ ಬಳಿಗೆ ಹೋದರೆ ಮಗುವನ್ನು ಬಿಡುವುದಿಲ್ಲವೆಂದು ವಾಟ್ಸ್ ಆಪ್ ಮುಖಾಂತರ ಮೆಸೇಜ್ ಮಾಡಿದ್ದ. ಇದನ್ನು ಬಾಲಕನ ತಂದೆ ಪೊಲೀಸರ ಗಮನಕ್ಕೆ ತಂದಿದ್ದರು. ಇದರಿಂದ ಪ್ರಕರಣ ಬಹಿರಂಗವಾಗಿತ್ತು.

ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಪ್ರಕರಣ ದಾಖಲಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಆತನ ಮೊಬೈಲ್ ಕರೆಗಳ ಮಾಹಿತಿಯನ್ನು ಆಧರಿಸಿ ತಾಂತ್ರಿಕ ವಿಶ್ಲೇಷಣೆಯಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಹರಣಕ್ಕೊಳಗಾದ ಬಾಲಕನನ್ನು ಪ್ರಗತಿ ನಗರದಲ್ಲಿರುವ ಆಕ್ಟೋರಿಯಾ ಪಾರ್ಕ್ ಅಪಾರ್ಟ್ ಮೆಂಟ್‌ನಲ್ಲಿ ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ಬಾಲಕನನ್ನು ಪಾಲಕರ ವಶಕ್ಕೆ ಒಪ್ಪಿಸಿರುತ್ತಾರೆ. ನಂತರ ಅದೇ ದಿನ ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಅಪಹರಣಕ್ಕೊಳಗಾದ ಬಾಲಕನನ್ನು ಮತ್ತು ಆರೋಪಿಯನ್ನು ಕೇವಲ 15 ಗಂಟೆಯೊಳಗೆ ವಶಕ್ಕೆ ಪಡೆಯುವಲ್ಲಿ ಯಶಸ್ಸು ಸಾಧಿಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.

Leave a Reply