1.50 ಕೋಟಿ ನಗದು, ಬಂಗಾರ ದೋಚಿದವರ ಬಂಧನ

8 months ago

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಸಿಂಧಿ ಕಾಲೇಜು ಪ್ರೊಫೆಸರ್ ಗಿರಿರಾಜ್ ಕುಮಾರ್ ಅವರ ಮನೆಯಲ್ಲಿದ್ದ  ಪತ್ನಿ ತಾಯಿಯನ್ನು ಬೆದರಿಸಿ 1.50 ಕೋಟಿ ನಗದು, 50 ಗ್ರಾಂ ಚಿನ್ನ ದೋಚಿದ್ದ ಚಾಲಕ ಸೇರಿ 7 ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ಆರ್ ಎಂ ವಿ ಎರಡನೇ ಹಂತದ ರಾಜೇಂದ್ರ ಮುನೋಟ್ ಅಲಿಯಾಸ್ ರಾಜೇಂದ್ರ ಜೈನ್(42) ಹೈದರಾಬಾದ್ ನ ರಾಮನಗರ ಮುಖ್ಯರಸ್ತೆಯ ಮೋಹನ್ ಗೌಡ ಅಲಿಯಾಸ್ ಜನಾರ್ದನ್(54) ವಿಜಯನಗರದ ಚೋಳರಪಾಳ್ಯದ ಶ್ರೀನಿವಾಸನ್ ಅಲಿಯಾಸ್ ಸೀನು(44) ಶ್ರೀನಗರದ ಕಿರಣ್ ಕುಮಾರ್ ಜೈನ್ (51)ಶ್ರೀರಾಂಪುರದ ಹೇಮಂತ್ ಕುಮಾರ್ ಜೈನ್(42)ದೊಮ್ಮಲೂರಿನ ಬಿಡಿಎ ಲೇಔಟ್ ನ ಶಂಕರಪ್ಪ(48) ಹಾಗೂ ರಾಮಮೂರ್ತಿನಗರ ಶಂಕರಪ್ಪ(48)ಬಂಧಿತ ಆರೋಪಿಗಳಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.

ಬಂಧಿತ ಆರೋಪಿಗಳಿಂದ 1,27,61,200 ರೂ ನಗದು, ವಿವಿಧ ದಾಖಲಾತಿಗಳು ಕೃತ್ಯಕ್ಕೆ ಬಳಸಿದ್ದ 2 ಕಾರುಗಳ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಯಲಹಂಕದ ವಿನಾಯಕ ನಗರದ ಸಿಂಧಿ ಕಾಲೇಜು ಪ್ರೊಫೆಸರ್ ಗಿರಿರಾಜ್ ಕುಮಾರ್ ಅವರ ಮನೆಗೆ ಕಳೆದ ಸೆ.19 ರಂದು ಬೆಳಿಗ್ಗೆ ಬಂಧಿತರಲ್ಲಿ ನಾಲ್ವರು ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿ ಮನೆಯಲ್ಲಿದ್ದ ಪತ್ನಿ ಹಾಗೂ ಅವರ ತಾಯಿ ರವರುಗಳಿಗೆ ಹೆದರಿಸಿ ಮನೆಯನ್ನು ಶೋಧನೆ ಮಾಡಿ, ಮನೆಯಲ್ಲಿಟ್ಟಿದ್ದ ದಾಖಲಾತಿಗಳು ಹಾಗೂ 1.50 ಕೋಟಿ ನಗದು, 50 ಗ್ರಾಂ ಚಿನ್ನಾಭರಣಗಳಿದ್ದ ಸೂಟ್ ಕೇಸ್ ಮತ್ತು ಬ್ಯಾಗ್‍ಗಳನ್ನು ದೋಚಿ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ನೀಡಿದ್ದ ದೂರಿನ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಯಲಹಂಕ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ‌ಸೆ.23 ರಂದು ಸಂಜಯ್ ನಗರದಲ್ಲಿ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸುಲಿಗೆ ತಪ್ಪೊಪ್ಪಿಕೊಂಡು ಕೃತ್ಯದಲ್ಲಿ 7 ಮಂದಿ ಸಹಚರರು ಭಾಗಿಯಾಗಿದ್ದನ್ನು ಬಾಯ್ಬಿಟ್ಟಿದ್ದು, ಆತನ ಗೋಡೌನ್ ಹಾಗೂ ಕಚೇರಿಯಲ್ಲಿಟ್ಟ 38,80,200 ನಗದು ಹಾಗೂ ದಾಖಲಾತಿಗಳಿದ್ದ ಮೂರು ಬ್ಯಾಗ್‍ಗಳು ಈ ಕೃತ್ಯಕ್ಕೆ ಆರೋಪಿಯು ಉಪಯೋಗಿಸಿ ಕಾರನ್ನು ವಶಪಡಿಸಿಕೊಳ್ಳಲಾಯಿತು.

ಅದೇ ದಿನ ತನಿಖೆಯನ್ನು ಮುಂದುವರೆಸಿ, ಆರೋಪಿ ನೀಡಿದ ಮಾಹಿತಿ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ 2ನೇ ಆರೋಪಿಯನ್ನು ಆಂಧ್ರಪ್ರದೇಶದ ರೇಣುಕಾಮಾಪಲ್ಲಿ ಗ್ರಾಮದಲ್ಲಿ, 3ನೇ ಆರೋಪಿಯನ್ನು ವಿಜಯನಗರದ ಚೋಳರಪಾಳ್ಯದಲ್ಲಿ 4 ನೇ ಹಾಗೂ 5ನೇ ವ್ಯಕ್ತಿಗಳನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ.

ಕಳೆದ ಸೆ.24 ರಂದು ಈ ಪ್ರಕರಣದಲ್ಲಿ ಬಾಗಿಯಾಗಿದ್ದ 6ನೇ ವ್ಯಕ್ತಿಯನ್ನು ರಾಮಮೂರ್ತಿನಗರದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ದೋಚಿದ ಹಣದ ಪೈಕಿ ಸ್ವಲ್ಪ ಹಣವನ್ನು 2ನೇ ಆರೋಪಿ ವಾಸವಿರುವ ಹೈದರಾಬಾದ್‍ ವಾಸದ ಮನೆಯಿಂದ 55 ಲಕ್ಷ 500 ರೂಗಳನ್ನು, ಆತನ ಸಂಬಂಧಿಕ ಆಂಧ್ರಪ್ರದೇಶದ ರಾಣಿಮಾಕಾಪಲ್ಲಿಯ ಗ್ರಾಮದ ಮನೆಯಿಂದ 25,80,500 ರೂಗಳನ್ನು ವಶಪಡಿಸಿಕೊಳ್ಳಲಾಯಿತು ಎಂದರು.

ಪ್ರಕರಣದ 3ನೇ ಆರೋಪಿ ವಿಜಯನಗರ ಚೋಳರಪಾಳ್ಯದ ವಾಸದ ಮನೆಯಿಂದ 1,50 ಲಕ್ಷ ರೂ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮಾರುತಿ ಓಮಿನಿ ಕಾರನ್ನು ಜಪ್ತಿ ಮಾಡಲಾಗಿದೆ. ತನಿಖೆಯನ್ನು ಮುಂದುವರೆಸಿ  ಪ್ರಕರಣದ 6ನೇ ಆರೋಪಿ ಶಂಕರಪ್ಪ ವಾಸವಾಗಿರುವ ದೊಮ್ಮಲೂರಿನ ಮನೆಯಿಂದ 4 ಲಕ್ಷ ರೂಗಳನ್ನು,7ನೇ ಆರೋಪಿಯ ರಾಮೂರ್ತಿನಗರದ ಮನೆಯಿಂದ 2,50 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Leave a Reply