ಬೆಂಗಳೂರು: ಆಧುನಿಕ ತಂತ್ರಜ್ಞಾನ ಎನ್ನುವುದು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಹೇಗೆ ಬಳಸಬಹುದು ಹಾಗೂ ಅಪರಾಧಿಗಳನ್ನು ಹೇಗೆ ಪತ್ತೆ ಹಚ್ಚಬಹುದು ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ.
ತಾಯಿಯ ಮಡಿಲಿನಲ್ಲಿ ನಲಿಯುತ್ತಿದ್ದ ನವಜಾತ ಶಿಶುವನ್ನು ಅಪಹರಿಸಿದ ದುಷ್ಕರ್ಮಿಗಳು ಹೆತ್ತ ತಾಯಿಯ ಆಕ್ರಂಧನಕ್ಕೆ ಕಾರಣವಾಗಿದ್ದರು. ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಬೆಂಗಳೂರು ಪೊಲೀಸರು ಸಿಸಿ ಕ್ಯಾಮೆರಾಗಳ ನೆರವಿನೊಂದಿಗೆ ಅಪರಾಧಿಯನ್ನು ಪತ್ತೆ ಹಚ್ಚಿ, ಅಪಹೃತಗೊಂಡಿದ್ದ ಮಗುವನ್ನು ಸುರಕ್ಷಿತವಾಗಿ ತಾಯಿಯ ಮಡಿಲು ಸೇರುವಂತೆ ಮಾಡಿದ್ದಾರೆ.
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಒಂದು ವಾರದ ಮಗು ಅಪಹರಣ ಪ್ರಕರಣ ಪತ್ತೆಗೆ ಸುಮಾರು 600 ಸಿಸಿಟಿವಿಗಳನ್ನು ಪರಿಶೀಲಿಸಿ ದೊರೆತ ಸುಳಿವಿನಿಂದ ಆರೋಪಿಯನ್ನು ಬಂಧಿಸುವಲ್ಲಿ ವಿವಿಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ತಿಪಟೂರು ತಾಲೂಕಿನ ರೈತ ಪ್ರಸನ್ನ ಹಾಗೂ ಸುಮಾ ಅವರ ಮಗುವನ್ನು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಿಂದ ಅಪಹರಿಸಲಾಗಿತ್ತು. ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಬಾಣಂತಿ ಹಾಗೂ ಮಗು ವೈದ್ಯಕೀಯ ಆರೈಕೆಯಲ್ಲಿದ್ದರು. ಏ.15 ಮುಂಜಾನೆ 5 ಗಂಟೆಗೆ ಆಸ್ಪತ್ರೆ ಪ್ರವೇಶಿಸಿದ್ದ ಆರೋಪಿ ಜನರಲ್ ವಾರ್ಡ್‌ನಲ್ಲಿ ತಾಯಿ, ಶುಶ್ರೂಷಕಿ ಹಾಗೂ ಭದ್ರತಾ ಕಾವಲುಗಾರ ನಿದ್ರೆಯಲ್ಲಿರುವುದನ್ನು ಗಮನಿಸಿ ಮಗುವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ದಂಪತಿ ಮತ್ತು ಆಸ್ಪತ್ರೆ ಸಿಬ್ಬಂದಿ ಸಲ್ಲಿಸಿದ್ದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಗು ಅಪಹರಣ ಮಾಡಿದ್ದ ಮಂಡ್ಯ ಜಿಲ್ಲೆಯ ದಿವ್ಯ ರಶ್ಮಿ(29)ಯನ್ನು ಬಂಧಿಸಿ ಅಪಹೃತ ಮಗುವನ್ನು ಸುರಕ್ಷಿತವಾಗಿ ತಾಯಿ ಮಡಿಲಿಗೆ ಸೇರಿಸಿದ್ದಾರೆ.
ಆರೋಪಿಯು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯಲ್ಲಿ ಏಳು ದಿನಗಳ ನವಜಾತ ಗಂಡು ಮಗುವನ್ನು ಅಪಹರಿಸಿ ಕಳೆದ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಮಿರ್ಜಾ ಆಲಿ ನೇತೃತ್ವದ ತಂಡವು, 600 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಆರೋಪಿ ರಶ್ಮಿ ಕಲ್ಯಾಣ ಮಂಟಪಗಳಲ್ಲಿ ಕೆಲಸ ಮಾಡುತ್ತಿದ್ದಳು. ಮೂರು ವರ್ಷಗಳ ಹಿಂದೆ ಕಾರ್ಮಿಕ ಸುನೀಲ್ ಜತೆ ಎರಡನೇ ವಿವಾಹವಾಗಿದ್ದ ಆಕೆಗೆ ಸಂತಾನ ಭಾಗ್ಯವಿರಲಿಲ್ಲ.ಇದರಿಂದ ರಶ್ಮಿ ಖಿನ್ನತೆಗೆ ಒಳಗಾಗಿದ್ದಳು. ಕಳೆದ ತಿಂಗಳು ಗರ್ಭಪಾತವಾಗಿದ್ದರಿಂದ ಆಕೆಯ ನೋವು ಮತ್ತಷ್ಟು ಭಾದಿಸಿತು. ಈ ನೋವಿನ ಹಿನ್ನೆಲೆಯಲ್ಲಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿಕೊಂಡು ಹೋಗಿ ತಾನು ಸಾಕಲು ಆಕೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.




