ವಿಚಾರಣೆಗೆ ಸಹಕರಿಸದ ಎಚ್ ಡಿ ರೇವಣ್ಣ

2 years ago

ಬೆಂಗಳೂರು: ಲೈಂಗಿಕ ಕಿರುಕುಳ ಮತ್ತು ಸಂತ್ರಸ್ತ  ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ವಿಶೇಷ ತನಿಖಾ ತಂಡದ ಅಧಿಕಾರಿಗಳ ತನಿಖೆಗೆ ಸಹಕರಿಸದೆ ಸತಾಯಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.

ತನಿಖಾ ತಂಡದ ಪ್ರತಿಯೊಂದು ಪ್ರಶ್ನೆಗೂ ರೇವಣ್ಣ ಈ ಪ್ರಶ್ನೆಯನ್ನು ಕೇಳಿ ಎಂದು ನಿಮಗೆ ಯಾರು ಹೇಳಿದ್ದಾರೆ? ಯಾರ ಒತ್ತಡದಿಂದ ಇಂತಹ ಪ್ರಶ್ನೆ ಕೇಳುತ್ತಿದ್ದೀರಿ? ಯಾರ ಜೊತೆ ಸೇರಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುತ್ತಿದ್ದೀರಿ? ಎಂದು ಮರು ಪ್ರಶ್ನೆ ಹಾಕುತ್ತಿದ್ದಾರೆ.

ತನಿಖಾ ತಂಡದ ಅಧಿಕಾರಿಗಳು ವಿಚಾರಣೆ ಸಮಯದಲ್ಲಿ ಯಾವುದೇ ವಿಷಯ ಪ್ರಸ್ತಾಪಿಸಿದರೂ ಅದನ್ನು ಕೇಳುವಂತೆ ನಿಮಗೆ ಯಾರು ಹೇಳಿ ಕಳುಹಿಸಿದ್ದಾರೆ ಎಂಬುದು ನನಗೆ ಗೊತ್ತಿದೆ. ಅದೆಲ್ಲ ಈಗ ಯಾಕೆ? ನಾನು ಕೋರ್ಟಿನಲ್ಲಿ ಉತ್ತರಿಸುತ್ತೇನೆ ಎಂದು ಹೇಳುತ್ತಿದ್ದಾರೆ.

ಈ ನಡುವೆ ಅಧಿಕಾರಿಗಳು ಅವರ ಸ್ವ-ಇಚ್ಛಾ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಸ್ವ-ಇಚ್ಛಾ ಹೇಳಿಕೆಗೆ ಸಹಿ ಹಾಕಲು ರೇವಣ್ಣ ನಿರಾಕರಿಸಿದ್ದಾರೆ. ನಿಮಗೆ ಬೇಕಾದಂತೆ ಬರೆದುಕೊಂಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್.ಡಿ. ರೇವಣ್ಣ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ನಿನ್ನೆ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಅಪಹರಣ ಕೇಸ್‌ನಲ್ಲಿ ರೇವಣ್ಣ ಅವರಿಂದ ಸ್ವ-ಇಚ್ಛಾ ಹೇಳಿಕೆ ದಾಖಲು ಮಾಡಿಕೊಳ್ಳಲು ಮುಂದಾಗಲಾಗಿದೆ. ಈ ಸಂಬಂಧ ರೇವಣ್ಣ ಅವರಿಗೆ ಭಾನುವಾರವೇ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನವನ್ನು ಅಧಿಕಾರಿಗಳೂ ಮಾಡಿದ್ದರು.

ಅಪಹರಣ ಕೇಸ್‌ ಬಗ್ಗೆ ಎಚ್.ಡಿ.ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸತೀಶ್ ಬಾಬು ಪರಿಚಯವಿದ್ದಾರಾ? ಅವರ ಮೂಲಕ ಕಿಡ್ನ್ಯಾಪ್ ಮಾಡಿಸಲು ನೀವೇ ತಿಳಿಸಿದ್ದಿರಾ? ಅಪಹರಣ ಮಾಡಿದ್ದರ ಹಿಂದಿನ ಉದ್ದೇಶ ಏನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಉತ್ತರವನ್ನು ಪಡೆದುಕೊಂಡಿದ್ದರು.

ಕೇಸ್‌ಗೆ ಸಂಬಂಧಿಸಿ ಕೆಲವು ಸಾಂದರ್ಭಿಕ ಪ್ರಶ್ನೆಗಳಿಗೆ ಹೇಳಿಕೆ ಪಡೆದು ಅದನ್ನು ಪೇಪರ್‌ನಲ್ಲಿ ನಮೂದಿಸಿ ಸ್ವ ಇಚ್ಛಾ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದ್ದಾರೆ. ಆದರೆ, ಅದಕ್ಕೆ ಸಹಿ ಹಾಕುವುದಿಲ್ಲ ಎಂದ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಅಪರಹಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆದರೂ ನೀವುಗಳು ಬರೆದುಕೊಂಡಿದ್ದೀರಿ. ನಾನೇ ಮಾಡಿಸಿರುವ ಹಾಗೆ ಬರೆದುಕೊಂಡಿದ್ದೀರಿ. ನಾನು ಯಾವ ಹೇಳಿಕೆಗೂ ಸಹಿ ಹಾಕಲ್ಲ ಎಂದು ರೇವಣ್ಣ ನಿರಾಕರಣೆ ಮಾಡಿದ್ದಾರೆ.

ಈ ನಡುವೆ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯನ್ನು ಬೆಂಗಳೂರಿಗೆ ಕರೆತಂದ ವಿಶೇಷ ತನಿಖಾ ತಂಡ ಬಸವನಗುಡಿಯಲ್ಲಿರುವ ರೇವಣ್ಣ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿ ಮಹಜರ್ ಮಾಡಿತು.

ರೇವಣ್ಣ ನಿವಾಸದ ಅಡುಗೆ ಕೋಣೆ, ಮಲಗುವ ಮನೆ ಸೇರಿದಂತೆ ಹಲವು ಕಡೆ ಮಹಿಳೆಯನ್ನು ಕರೆದುಕೊಂಡು ಹೋಗಿ ಪ್ರಕರಣಗಳ ಚಿತ್ರಣವನ್ನು ದಾಖಲು ಮಾಡಿಕೊಂಡಿತು. ಸುಮಾರು ಒಂದು ಗಂಟೆಗಳ ಕಾಲ ಈ ಮನೆಯಲ್ಲಿ ಮಹಜರ್ ಮಾಡಿದ ತನಿಖಾ ತಂಡ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದೆ.

Leave a Reply