ಸುಸೂತ್ರವಾಗಿ ನಡೆದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ

3 years ago

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3064 ಮಂದಿ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ರಾಜ್ಯಾದ್ಯಂತ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ಸುಗಮವಾಗಿ ನಡೆಯಿತು.

ಬೆಂಗಳೂರಲ್ಲಿ ಸುಮಾರು 78 ಪರೀಕ್ಷಾ ಕೇಂದ್ರಗಳಿದ್ದು, ಸುಮಾರು 42,740 ಮಂದಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಿದ್ದರು. ರಾಜ್ಯಾದ್ಯಂತ ಸುಮಾರು 4 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಸರ್ಕಾರ 2022ರಲ್ಲೇ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಪಿಎಸ್ಐ ಹಗರಣದ ನಂತರ ಪರೀಕ್ಷೆಯನ್ನು ನಡೆದಿರಲಿಲ್ಲ. ಇದೀಗ 3064 ಹುದ್ದೆಗಳು ಖಾಲಿಯಿದ್ದು, ಸಿಎಆರ್/ಡಿಎಆರ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಿತು.

ರಾಜ್ಯದೆಲ್ಲೆಡೆ ಪರೀಕ್ಷಾ ಕೇಂದ್ರಗಳ ಮುಂಭಾಗ ನಡುಗಿಸುವ ಚಳಿಯಲ್ಲೇ ಅಭ್ಯರ್ಥಿಗಳು ನಿಂತಿರುವ ದೃಶ್ಯಗಳು ಕಂಡುಬಂದವು. ಬೆಳಗ್ಗೆ 11 ಗಂಟೆಯಿಂದ 12.30ರವರೆಗೆ ಲಿಖಿತ ಪರೀಕ್ಷೆ ನಡೆಯಿತು.

ಪರೀಕ್ಷೆ ಬರೆಯಲು ಬೆಳಗಾವಿ, ಕೊಪ್ಪಳ, ಯಾದಗಿರಿ, ಬಿಜಾಪುರ ,ಕಲ್ಬುರ್ಗಿ, ಚಿತ್ರದುರ್ಗದಿಂದಲ್ಲೂ ಅಭ್ಯರ್ಥಿಗಳು ಬಂದಿದ್ದರು. ಉತ್ತರ ಕರ್ನಾಟಕದಿಂದ ಅತಿ ಹೆಚ್ಚು ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಅಕ್ರಮ ತಪ್ಪಿಸಲು ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ಹಾಕಲಾಗಿತ್ತು.

ಧಾರವಾಡದ ಸಪ್ತಪೂರದ ಪ್ರಿಸಮ್ ಕಾಲೇಜಿನಲ್ಲಿ ಪರೀಕ್ಷಾ ಅಕ್ರಮ ನಡೆಯದಂತೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶಾರ್ಟ್ ಧರಿಸಬೇಕೆನ್ನುವ ನಿಯಮ ಹಿನ್ನೆಲೆಯಲ್ಲಿ ಪ್ರತಿ ಅಭ್ಯರ್ಥಿಗಳನ್ನು ಸಹ ಪೊಲೀಸರು ತಪಾಸಣೆ ನಡೆಸಿದರು. ಜೀನ್ಸ್ ಪ್ಯಾಂಟ್, ಹೆಚ್ಚಿನ ಜೇಬು ಇರುವ ಪ್ಯಾಂಟ್ ಧರಿಸಿ ಬಂದವರಿಗೆ, ಶೂ ಸೇರಿ ಕೈಗೆ ಹಾಗೂ ಒಳಭಾಗದಲ್ಲಿ ದಾರಗಳನ್ನು ಹಾಕಿಕೊಂಡು ಬಂದವರಿಗೆ ಕೇಂದ್ರದೊಳಗೆ ಪ್ರವೇಶ ಇರಲಿಲ್ಲ. ಕುತ್ತಿಗೆ ಸುತ್ತ ಆಭರಣ ಸೇರಿ ಉಂಗುರ ಮತ್ತು ಕಡಗಗಳನ್ನು ನಿಷೇಧಿಸಲಾಗಿತ್ತು.

ರಾಜ್ಯ ಸಶಸ್ತ್ರ ಪೊಲೀಸ್ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ಯಾದಗಿರಿ ಪರೀಕ್ಷಾ ಕೇಂದ್ರದ ಎದುರು ಪೊಲೀಸ್ ಕಟ್ಟೆಚ್ಚರ ವಹಿಸಲಾಗಿತ್ತು. ಕೆಇಎ ಪರೀಕ್ಷಾ ಅಕ್ರಮದ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ಪ್ರತಿಯೊಂದು ಪರೀಕ್ಷಾ ಕೇಂದ್ರದ ಎದುರು ಬಯೋಮೆಟ್ರಿಕ್ ಯಂತ್ರ ಅಳವಡಿಕೆ ಮಾಡಿದ್ದರು.

ಪರೀಕ್ಷಾ ಕೇಂದ್ರದ ಹೊರಗೆ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ನಡೆಸಲಾಯಿತು. ಮೆಟಲ್ ಡಿಟೆಕ್ಟರ್ ಮೂಲಕ ಅಭ್ಯರ್ಥಿಗಳ ಪರಿಶೀಲನೆ ನಡೆಸಲಾಯಿತು. ಪ್ರತಿ ಕೊಠಡಿಗೆ 20 ಅಭ್ಯರ್ಥಿಗಳು ಕುಳಿತುಕೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಒಟ್ಟು ಐದು ಡಿವೈಎಸ್ಪಿ, ಪ್ರತಿ ಕೇಂದ್ರಕ್ಕೆ ಓರ್ವ ಸಿಪಿಐ, ಪಿಎಸ್ಐ ಹಾಗೂ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

Leave a Reply