ಎ.ಪಿ.ಎಂ.ಸಿ.ಗಳ ಮಾರುಕಟ್ಟೆ ಶುಲ್ಕ ಇಳಿಕೆಗೆ ಚಿಂತನೆ: ಶಿವಾನಂದ ಪಾಟೀಲ್

2 years ago

ಬೆಂಗಳೂರು: ರೈತ ಸಮುದಾಯದ ಬೇಡಿಕೆಯಂತೆ ರಾಜ್ಯದಲ್ಲಿ ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈಗ ಮುಂದುವರೆದು ಎ.ಪಿ.ಎಂ.ಸಿ.ಗಳ ಮಾರುಕಟ್ಟೆ ಶುಲ್ಕವನ್ನು ಇಳಿಕೆ ಮಾಡುವ ಚಿಂತನೆಯೂ ಇದ್ದು, ಶುಲ್ಕ ಇಳಿಕೆಯಾದರೆ ವ್ಯಾಪಾರ-ವಹಿವಾಟುಗಳು ಎಲ್ಲವೂ ಪಾರದರ್ಶಕವಾಗಿ ನಡೆಯುತ್ತವೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಕಾಯ್ದೆ ಜಾರಿಗೆ ಬರುವುದರಿಂದ ಕಪ್ಪು ವಹಿವಾಟುಗಳಿಗೆ ಅವಕಾಶ ಇರುವುದಿಲ್ಲ. ಇದರಿಂದ ಆದಾಯವೂ ಹೆಚ್ಚಾಗುವುದಲ್ಲದೆ, ರೈತರಿಗೂ ಅನುಕೂಲವಾಗುತ್ತದೆ. ಹಾಗಾಗಿ ಮಾರುಕಟ್ಟೆ ಶುಲ್ಕವನ್ನು ಆದಷ್ಟು ಕಡಿಮೆ ಮಾಡುವ ಚಿಂತನೆ ನಮ್ಮದಾಗಿದೆ ಎಂದರು.

ಈ ಹೊಸ ಮಾರುಕಟ್ಟೆ ಎಪಿಎಂಸಿ ಕಾಯ್ದೆಯಿಂದ ಅಡಿಕೆ ಮತ್ತು ರೈಸ್‌ಮಿಲ್ ಮಾಲೀಕರಿಗೆ ಸ್ವಲ್ಪ ಮಟ್ಟಿಗೆ ಅನಾನುಕೂಲ ಆಗಲಿದೆ ಎಂಬುದು ತಮ್ಮ ಗಮನದಲ್ಲಿದ್ದು, ಇದನ್ನು ಸರಿಪಡಿಸಲಾಗುವುದು. ಜತೆಗೆ ಅಡಿಕೆ ಹಾಗೂ ಅಕ್ಕಿ ಗಿರಣಿ ಮಾಲೀಕರ ಹಿತರಕ್ಷಣೆಗೂ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.

ರಾಜ್ಯದ ತೆಂಗು ಬೆಳೆಗಾರರಿಂದ ಕೊಬ್ಬರಿ ಖರೀದಿಗೆ 5 ದಿನ ವಿಳಂಬವಾಗಲಿದೆ. ಈಗಿರುವ ಸಾಫ್ಟ್‌ವೇರ್‌ನ್ನು ಬದಲಿಸಲು ಹೆಚ್ಚಿನ ಸಮಯಾವಕಾಶ ಬೇಕಾಗಿರುವುದರಿಂದ ಕೊಬ್ಬರಿ ಖರೀದಿ ವಿಳಂಬವಾಗಲಿದ್ದು, ಐದು ದಿನದ ನಂತರ ಕೊಬ್ಬರಿ ಖರೀದಿ ಆರಂಭವಾಗಲಿದೆ. ಸುಮಾರು 69 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲಾಗುವುದು ಎಂದರು.

ನೂತನ ಎಪಿಎಂಸಿ ಕಾಯ್ದೆ ಜತೆಗೆ ಎಪಿಎಂಸಿಗಳನ್ನು ಸದೃಢಗೊಳಿಸುವ 64ಬಿ ಮತ್ತು 64 ಇ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದ್ದು, ಈ ಕಾನೂನು ಜಾರಿಯಿಂದ ಆರ್ಥಿಕವಾಗಿ ಬಲಿಷ್ಠವಾಗಿರುವ ಎಪಿಎಂಸಿಗಳಿಂದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿರುವ ಎಪಿಎಂಸಿಗಳಿಗೆ ನೆರವು ಸಿಗಲಿದೆ. ಈ ಮೊದಲು ಇಂತಹ ಯಾವುದೇ ಕಾಯ್ದೆಗಳು ಇರಲಿಲ್ಲ. ಈ ಕಾಯ್ದೆ ಜಾರಿಯಿಂದ ಎಲ್ಲ ಎಪಿಎಂಸಿಗಳು ಆರ್ಥಿಕವಾಗಿ ಬಲಿಷ್ಠವಾಗಲು ಅವಕಾಶ ಸಿಗುತ್ತದೆ ಎಂದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸ್ತುತ ಮಾರ್ಕೆಟಿಂಗ್ ಫೆಡರೇಷನ್ ಮಾತ್ರ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಗಳನ್ನು ನಡೆಸುತ್ತಿತ್ತು. ಇನ್ನು ಮುಂದೆ ಎಪಿಎಂಸಿ ಸಹ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ಇದರಿಂದ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಹೊಸ ಎಪಿಎಂಸಿ ಕಾಯ್ದೆಯನ್ನು ರದ್ದುಮಾಡಿ ಹಳೇ ಎಪಿಎಂಸಿ ಕಾಯ್ದೆಯನ್ನೆ ಜಾರಿ ಮಾಡುವುದಕ್ಕೆ ವಿಧಾನ ಮಂಡಲದ ಅಧಿವೇಶನದಲ್ಲಿ ಎಲ್ಲ ಪಕ್ಷಗಳು ಸಹಕಾರ ನೀಡಿವೆ. ಇದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಹಳೇ ಎಪಿಎಂಸಿ ಕಾಯ್ದೆಯನ್ನು ರದ್ದುಮಾಡಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಅದರಂತೆ ಈಗಿನ ಎಪಿಎಂಸಿ ಕಾಯ್ದೆ ರದ್ದಾಗಿ, ಹಳೇ ಎಪಿಎಂಸಿ ಕಾಯ್ದೆಯೇ ಜಾರಿಯಾಗಲಿದೆ. ಈ ಕಾಯ್ದೆ ಜಾರಿಯಿಂದ ರೈತರು, ವರ್ತಕರಿಗೆ ಕೆಲವೆಡೆ ಶೋಷಣೆಗಳಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದ್ದು, ಇದನ್ನೆಲ್ಲ ಸಮರ್ಪಕವಾಗಿ ನಿರ್ವಹಿಸಿ ರೈತರಿಗೆ ಹಾಗೂ ವರ್ತಕರಿಗೆ ಅನುಕೂಲ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ರಾಜ್ಯದ ಎಪಿಎಂಸಿಗಳಿಗೆ ಬರುವ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ-ಉಪಹಾರದ ವ್ಯವಸ್ಥೆಗಳನ್ನು ರೂಪಿಸಲು ಕ್ಯಾಂಟೀನ್‌ಗಳನ್ನು ಆರಂಭಿಸುವ ಚಿಂತನೆ ಇದೆ. ಈಗಾಗಲೇ ಮೈಸೂರು ಹಾಗೂ ಬಳ್ಳಾರಿಯಲ್ಲಿ ಅಲ್ಲಿನ ವರ್ತಕರೇ ಸೇರಿಕೊಂಡು ರಿಯಾಯ್ತಿ ದರದಲ್ಲಿ ರೈತರಿಗೆ ಊಟ ಒದಗಿಸುತ್ತಿದ್ದಾರೆ. ಹಾಗೆಯೇ ರೈತ ಆಸ್ಪತ್ರೆ, ರೈತ ಭವನವನ್ನು ಪ್ರಾರಂಭಿಸಿದ್ದಾರೆ. ಇದನ್ನು ರಾಜ್ಯದ ಎಲ್ಲ ಎಪಿಎಂಸಿಗಳಿಗೂ ವಿಸ್ತರಿಸಿ ರೈತರಿಗೆ ಕಡಿಮೆ ದರದಲ್ಲಿ ಊಟ ಒದಗಿಸುವ ಚಿಂತನೆ ಇದೆ. ಅಗತ್ಯ ಬಿದ್ದರೆ ಎಪಿಎಂಸಿಯಿಂದಲೂ ಇದಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದರು.

Leave a Reply