ಬೆಳಗಾವಿ: ಗರ್ಭಿಣಿಯರು ಮತ್ತು ಅವರ ಕುಟುಂಬ ಸದಸ್ಯರನ್ನು ಹೆದರಿಸಿ ಸಿಸೇರಿಯನ್ ಹೆರಿಗೆಗಳ ಮೂಲಕ ಸುಲಿಗೆ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ತಿಂಗಳು ನೂತನ ಕಾರ್ಯಕ್ರಮ ಜಾರಿಗೆ ತರುತ್ತಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
- ಚಿತ್ರದುರ್ಗ ಜಿಲ್ಲೆಯ ವಸತಿ ರಹಿತರಿಗೆ ಸುವರ್ಣಾವಕಾಶ
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ಜಗದೇವ ಗುತ್ತೇದಾರ ಅವರ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಪ್ರತಿ ವರ್ಷ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. 2021-2022 ರಲ್ಲಿ 35% ಇದ್ದ ಸಿಸೇರಿಯನ್ ಪ್ರಮಾಣ, 2022-23 ಕ್ಕೆ 38%ಕ್ಕೆ ಏರಿಕೆಯಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ 46% ಇದೆ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ 61 ರಷ್ಟು ಸಿಸೇರಿಯನ್ ಗಳನ್ನ ಮಾಡಲಾಗುತ್ತಿದೆ. ಸಿಸೇರಿಯನ್ ಗಳಿಂದ ಹೆಚ್ಚು ಆದಾಯ ಬರುತ್ತದೆ ಮತ್ತು ಸುಲಭವಾಗಿ ಸಿಸೇರಿಯನ್ ಮಾಡಬಹುದು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಸಿಸೇರಿಯನ್ ಹೆರಿಗೆಗಳನ್ನೇ ಹೆಚ್ಚು ಮಾಡುತ್ತಿದ್ದಾರೆ ಎಂದರು.
ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನ ಸಹಜ ಹೆರಿಗೆ ಮಾಡಿಸಿಕೊಳ್ಳಲು ಮಾನಸಿಕವಾಗಿ ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ನೂತನ ಕಾರ್ಯಕ್ರಮ ಜಾರಿಗೊಳಿಸುತ್ತಿರುವುದಾಗಿ ಹೇಳಿದರು.
ಭ್ರೂಣ ಹತ್ಯೆ ವಿರುದ್ಧ ರಾಜ್ಯ ಸರ್ಕಾರ ಸಮರ ಸಾರಿದೆ. ರಾಜ್ಯದಲ್ಲಿ 2023-24 ರಿಂದ ಇಲ್ಲಿಯವರೆಗೆ ಭ್ರೂಣಹತ್ಯೆ ಸಂಬಂಧಿಸಿದಂತೆ 8 ಪ್ರಕರಣ ದಾಖಲಿಸಿ 46 ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್ ಮತ್ತು ಆಸ್ಪತ್ರೆಗಳ ಮೇಲೆ ತಪಾಸಣೆಗಳನ್ನು ಜಾಸ್ತಿ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯ ಭ್ರೂಣ ಹತ್ಯೆ ಪ್ರಕರಣಗಳು ಕಂಡುಹಿಡಿಯಲಾಗಿದೆ. ಅಲ್ಲದೇ ಡಿಕಾಯ್ ಆಪರೇಷನ್ಗಳ ಯಶಸ್ವಿ ಕಾರ್ಯಾಚರಣೆಗಳನ್ನ ನಡೆಸಿ ಭ್ರೂಣೆ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಯಲು ಸರ್ಕಾರ ಪಿ.ಸಿ&ಪಿ.ಎನ್.ಡಿ.ಟಿ. ಕಾಯ್ದೆಯಡಿ ಬರುವ ಎಲ್ಲಾ ಶಾಸನಬದ್ದ ಸಮಿತಿಗಳನ್ನು ರಾಜ್ಯ ಮತ್ತು ಜಿಲ್ಲೆಗಳಲ್ಲಿ ರಚನೆ ಮಾಡಲಾಗಿದೆ. 2018ರಿಂದ ರಾಜ್ಯದಲ್ಲಿ ‘ಬಾಲಿಕಾ’ ಆನ್ಲೈನ್ ಸಾಪ್ಟ್ವೇರ್ ಮುಖಾಂತರ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ನಡೆಸಲಾಗುತ್ತಿದೆ ಎಂದರು.
ರಾಜ್ಯ ಮಟ್ಟದಲ್ಲಿ ಶೇ.100ರಷ್ಟು ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಗ್ರಾಮ ಮಟ್ಟದಲ್ಲಿ ಜನನ ಸಮಯದ ಲಿಂಗಾನುಪಾತದ ದತ್ತಾಂಶಗಳನ್ನು ಮಾಹಿತಿ ತಂತ್ರಜ್ಞಾನದ ಮುಖಾಂತರ ಮೇಲ್ವಿಚಾರಣೆ ಮಾಡಲು ಕಲ್ಪಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಇದುವರೆಗೂ ಪಿ.ಸಿ&ಪಿ.ಎನ್.ಡಿ.ಟಿ. ಕಾಯ್ದೆಯನ್ನು ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್ / ಮಾಲೀಕರು/ ವೈದ್ಯರ ವಿರುದ್ಧ ಒಟ್ಟು 136 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, 74 ಪ್ರಕರಣಗಳು ದಂಡವಿಧಿಸಿ ಖುಲಾಸೆಗೊಂಡಿದ್ದು, 65 ಪ್ರಕರಣಗಳು ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿ ಬಾಕಿಯಿದೆ ಎಂದರು.
ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್ , ಆಸ್ಪತ್ರೆ ,ವೈದ್ಯರು , ದಲ್ಲಾಳಿಗಳು ಗರ್ಭಿಣಿಯರ ಸಂಬಂಧಿಕರ ವಿರುದ್ಧ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಕರಿಸುವ ಮಾಹಿತಿದಾರರಿಗೆ ಕರ್ನಾಟಕ ಸರ್ಕಾರದಿಂದ ನೀಡುತ್ತಿದ್ದ ಬಹುಮಾನವನ್ನು ರೂ.50 ಸಾವಿರದಿಂದ ರೂ.1 ಲಕ್ಷದವರೆಗೆ ಹೆಚ್ಚಿಸಲಾಗಿದೆ ಎಂದರು.
ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆಯನ್ನು ರಚಿಸಲಾಗಿದ್ದು, ರಾಜ್ಯ ಮಟ್ಟದಿಂದ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಗುಪ್ತ ಕಾರ್ಯಚರಣೆ ನಡೆಸಲಾಗಿದೆ ಎಂದರು.




