ಅಮಿತ್ ಶಾ ನಾಳೆಯಿಂದ ರಾಜ್ಯ ಪ್ರವಾಸ: ಲೋಕಸಭೆ ಚುನಾವಣೆಗೆ ಸಿದ್ಧತೆ

2 years ago

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಬಿಜೆಪಿಯಲ್ಲಿ ಕ್ಷಿಪ್ರ ಗತಿಯಲ್ಲಿ ವಿದ್ಯಮಾನಗಳು ನಡೆಯುತ್ತಿವೆ. ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆ ಕಾರ್ಯತಂತ್ರದ ಕುರಿತು ಚರ್ಚಿಸಲು ಕೇಂದ್ರ ಗೃಹ ಮಂತ್ರಿ ಹಾಗೂ ಹಿರಿಯ ನಾಯಕ ಅಮಿತ್ ಶಾ ನಾಳೆಯಿಂದ ರಾಜ್ಯ ಪ್ರವಾಸ ಮಾಡಲಿದ್ದಾರೆ.

ದೆಹಲಿಯಲ್ಲಿ ಕೋರ್ ಕಮಿಟಿ ಸಭೆ ಮುಗಿಸಿ ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ನೇರವಾಗಿ ಮೈಸೂರಿಗೆ ಹೋಗಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಫೆ.11ರಂದು ಬೆಳಗ್ಗೆ 11 ಗಂಟೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ.

ಬಳಿಕ ಅಲ್ಲಿಂದ 11.45ಕ್ಕೆ ಹೆಲಿಕಾಪ್ಟರ್ ನಲ್ಲಿ ಸುತ್ತೂರು ಗ್ರಾಮಕ್ಕೆ ಪ್ರಯಾಣ ಬೆಳಸಲಿದ್ದು, ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ಸುತ್ತೂರು ಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಮುಗಿಸಿಕೊಂಡು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ಗೆ ಆಗಮಿಸಲಿದ್ದಾರೆ. ನಂತರ ಮಧ್ಯಾಹ್ನ 2.40ಕ್ಕೆ ರಾಜ್ಯದ ಕೇಂದ್ರ ಸಚಿವರ ಜೊತೆ ಸಭೆ ನಿಗದಿಪಡಿಸಿದ್ದು, ಸುಮಾರು 2 ಗಂಟೆ ಕಾಲ ಮುಖಂಡರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇದಾದ ನಂತರ ರಾಜ್ಯದ ಎಲ್ಲಾ ಲೋಕಸಭೆ ಕ್ಷೇತ್ರಗಳ ಕ್ಲಸ್ಟರ್ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ. ನಾಲ್ಕು ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡ ಕ್ಲಸ್ಟರ್ ಗಳ ಸಭೆ ನಡೆಸಲಿದ್ದು, ಕೆಲವು ಪ್ರಮುಖ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಆನಂತರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.

Leave a Reply