ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹4.30 ಲಕ್ಷ ಕೋಟಿ ಕೊಟ್ಟರೆ, ರಾಜ್ಯಕ್ಕೆ ಅನುದಾನ ರೂಪದಲ್ಲಿ ₹44,000 ಕೋಟಿ ಮಾತ್ರ ನೀಡಲಾಗುತ್ತಿದೆ: ಪ್ರಿಯಾಂಕ್ ಖರ್ಗೆ

2 years ago

ಕಲಬುರಗಿ: ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯಾದ್ಯಂತ ಅಭೂತಪೂರ್ವ ಯಶಸ್ಸು ಕಂಡಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಜಿಲ್ಲೆಯ 5,22,171 ಫಲಾನುಭವಿ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯ 19,16,144 ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ ಎಂದರು.

ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ ರಾಜ್ಯಾದ್ಯಂತ 60 ಲಕ್ಷಕ್ಕೂ ಅಧಿಕ ಮಹಿಳೆಯರು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 21.05 ಕೋಟಿಗೂ ಅಧಿಕ ಮಹಿಳೆಯರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ 4.27 ಕೋಟಿಗೂ ಅಧಿಕ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಇದುವರೆಗೂ ಉಚಿತ ಪ್ರಯಾಣ ಮಾಡಿದ್ದಾರೆ ಎಂದರು.

ಯುವನಿಧಿ ಯೋಜನೆಯ ಲಾಭ ಪಡೆಯಲು ಜಿಲ್ಲೆಯಲ್ಲಿ 7,146 ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ ಕಲಬುರಗಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 5,28,530 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಕನ್ನಡಿಗರಿಗೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಮಾಡಿದ್ದು ಇದರ ವಿರುದ್ಧ ‘ನನ್ನ ತೆರಿಗೆ ನನ್ನ ಹಕ್ಕು’ ಘೋಷಣೆಯೊಂದಿಗೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ದೆಹಲಿಯಲ್ಲಿ ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ಪ್ರತಿವರ್ಷ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹4.30 ಲಕ್ಷ ಕೋಟಿ ಕೊಟ್ಟರೆ ಕೇಂದ್ರ ನಮ್ಮ ರಾಜ್ಯಕ್ಕೆ ಅನುದಾನದ ರೂಪದಲ್ಲಿ ಕೇವಲ ₹44,000 ಕೋಟಿ ಮಾತ್ರ ನೀಡುತ್ತಿದೆ ಎಂದರು.

ತುಂಬಾ ಸರಳವಾಗಿ ಹೇಳುವುದಾದರೆ, ₹100 ನೇರ ತೆರಿಗೆ ಕಟ್ಟಿದರೆ ಕೇವಲ ₹13ರಷ್ಟು ಮಾತ್ರ ವಾಪಸ್ ಬರುತ್ತಿದೆ. ಆದರೆ, ಅದೇ ಉತ್ತರ ಪ್ರದೇಶಕ್ಕೆ‌ ₹330, ಮಧ್ಯಪ್ರದೇಶಕ್ಕೆ‌ ₹292, ಬಿಹಾರಕ್ಕೆ ₹972, ಒರಿಸ್ಸಾಕ್ಕೆ ₹197 ಗಳನ್ನು ಕೇಂದ್ರ ನೀಡುತ್ತಿದೆ. ಈ ತಾರತಮ್ಯದ ವಿರುದ್ಧ ಹೋರಾಟ ಮಾಡಿದರೆ ನಮ್ಮನ್ನೇ ದೇಶ ಒಡೆಯುವವರು ಹಾಗೂ ದೇಶದ್ರೋಹಿಗಳೆಂಬ ಹಣೆಪಟ್ಟಿ ನೀಡುತ್ತಿದ್ದಾರೆ ಎಂದರು.

ಸಾರಿಗೆ ನೌಕರರು ತಮ್ಮ ಬೇಡಿಕೆ‌ ಪಟ್ಟಿಯನ್ನು ಈಗಾಗಲೇ ಸಾರಿಗೆ ಸಚಿವರಿಗೆ ಸಲ್ಲಿಸಿದ್ದು, ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಂಡು ಸಾರಿಗೆ ನೌಕರರಿಗೆ ಅವರ ಬೇಡಿಕೆಗಳನ್ನು ಪೂರೈಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

Leave a Reply