ವ್ಯಾಪಾರ ಸ್ನೇಹಿ ಹೆಜ್ಜೆಯ ಭಾಗವಾಗಿ ಸರಕು ಸೇವೆಗಳ ತೆರಿಗೆ ವಿಧೇಯಕಕ್ಕೆ ತಿದ್ದುಪಡಿ: ಕೃಷ್ಣ ಬೈರೇಗೌಡ

1 year ago

ಬೆಳಗಾವಿ: ತೆರಿಗೆದಾರರ ಹಾಗೂ ತೆರಿಗೆ ಸಂಗ್ರಹಿಸುವ ಅಧಿಕಾರಿಗಳ ನಡುವಿನ ಗೊಂದಲಕ್ಕೆ ತೆರೆ ಎಳೆಯುವ ಹಾಗೂ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಸ್ನೇಹಿ ಹೆಜ್ಜೆಯ ಭಾಗವಾಗಿ  ಸರಕು ಮತ್ತು ಸೇವೆಗಳ ತೆರಿಗೆ 2024 ವಿಧೇಯಕಕ್ಕೆ ಎರಡನೇ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಸರಕು ಮತ್ತು ಸೇವೆಗಳ ತೆರಿಗೆ 2024ನೇ ಸಾಲಿನ ಎರಡನೇ ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ಅವರು, ಎಲ್ಲೆಲ್ಲಿ ತೆರಿಗೆದಾರರ ಹಾಗೂ ತೆರಿಗೆ ಅಧಿಕಾರಿಗಳ ನಡುವೆ ಗೊಂದಲ ಇದೆ, ಈ ಗೊಂದಲಗಳಿಗೆ ತೆರೆ ಎಳೆಯುವ ಹಾಗೂ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶ. ಕಳೆದ ನಾಲ್ಕೈದು ವರ್ಷಗಳ ಅನುಭವದಲ್ಲಿ ಎಲ್ಲೆಲ್ಲಿ ಕಾನೂನುಗಳ ಅಗತ್ಯ ಇದೆ ಅದನ್ನು ಅನುಭವದ ಆಧಾರದಲ್ಲಿ ಗುರುತಿಸಲಾಗಿದೆ. ಹಾಗೂ ಕೆಲವು ವಿಚಾರಗಳನ್ನು ವ್ಯಾಕ್ಯಾನ ಮಾಡುವಾಗ ಒಂದಕ್ಕೊಂದು ತದ್ವಿರುದ್ಧವಾಗಿದ್ದ ವಿಚಾರಗಳನ್ನು ಸರಳೀಕರಣಗೊಳಿಸುವ ಕೆಲಸ ಈ ತಿದ್ದುಪಡಿಯಲ್ಲಿ ಮಾಡಲಾಗಿದೆ ಎಂದರು.

ತಿದ್ದುಪಡಿಯಿಂದ ಖಜಾನೆಗೆ 15,000 ತೆರಿಗೆ ಸಾಧ್ಯತೆ: ಸರ್ಕಾರ ಹಾಗೂ ತೆರಿಗೆದಾರರ ನಡುವೆ 80,000 ಸಾವಿರ ವ್ಯಾಜ್ಯ ಪ್ರಕರಣಗಳಿಗೆ. ಇಷ್ಟು ಪ್ರಕರಣಗಳ ಕಾರಣದಿಂದ ರೂ.15,000 ಕೋಟಿ ತಕರಾರಿನಲ್ಲಿದೆ. ಈಗಿನ ತಿದ್ದುಪಡಿಯಿಂದ ಎಲ್ಲಾ ಪ್ರಕರಣಗಳೂ ಇತ್ಯರ್ಥವಾದರೆ ಖಜಾನೆಗೆ ರೂ.15,000 ಕೋಟಿ ಹಣ ಹರಿದು ಬರುವ ಸಾಧ್ಯತೆ ಇದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಈ ಬಗ್ಗೆಯೂ ಸದನದ ಗಮನ ಸೆಳೆದ ಅವರು, “ಅಧಿಕಾರಿಗಳ ಹಾಗೂ ತೆರಿಗೆ ಪಾವತಿದಾರರ ನಡುವೆ ಒಪ್ಪಂದಕ್ಕೆ ಬರದೆ ನಾವು ಅವರು ಎದುರು-ಬದುರು ಪ್ರಕರಣಗಳನ್ನು ನಡೆಸುವಂತಾಗಿದೆ. ಸುಮಾರು 80,000 ವ್ಯಾಜ್ಯ ಪ್ರಕರಣ ನ್ಯಾಯಾಲಯಗಳಲ್ಲಿವೆ. ಆರಂಭದಿಂದಲೂ ಕಾನೂನಲ್ಲಿ ಅವರೊಂತರಾ ವ್ಯಾಖ್ಯಾನ ಮಾಡಿದ್ದಾರೆ, ನಾವೊಂತರಾ ವ್ಯಾಖ್ಯಾನ ಮಾಡಿದ್ದೇವೆ. ಈ ಎಲ್ಲಾ ಪ್ರಕರಣಗಳೂ ಕಾನೂನು ಪ್ರಕ್ರಿಯೆಯಲ್ಲಿರುವ ಕಾರಣ ಬರುತ್ತಿರುವ ತೆರಿಗೆ ಸಹ ನಿಂತುಹೋಗಿದೆ” ಎಂದು ವಿಷಾದಿಸಿದರು.

ಈ ಹಿಂದೆ ವ್ಯಾಟ್‌ ಪದ್ಧತಿ (ಮೌಲ್ಯ ವರ್ಧಿತ ತೆರಿಗೆ) ಜಾರಿಯಲ್ಲಿದ್ದ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ವ್ಯಾಟ್‌ ಬಗೆಗಿನ ವ್ಯಾಜ್ಯಗಳ ಇತ್ಯರ್ಥಕ್ಕೆ ಒನ್‌ ಟೈಮ್‌ ಸೆಟಲ್ಮೆಂಟ್‌ಗೆ ಅವಕಾಶ ಕೊಟ್ಟಿದ್ದರು. ಪ್ರಸ್ತುತ ಇದೇ ಮಾದರಿಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ. 80,000 ಪ್ರಕರಣಗಳಿಗೆ ಒನ್‌ಟೈಮ್‌ ಅವಕಾಶ ಮಾಡಿಕೊಡಲಾಗುತ್ತಿದೆ. ಈಗಲೇ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಂಡರೆ ಬಡ್ಡಿ ಹಾಗೂ ಪೆನಾಲ್ಟಿ ಹೊರತುಪಡಿಸಿ ಮೂಲ ಹಣ ಪಾವತಿ ಮಾಡಿದರೆ ಸಾಕು. 80,000 ಪ್ರಕರಣಗಳಿಂದ ರೂ.15,000 ಕೋಟಿ ಹಣ ತಕರಾರಿನಲ್ಲಿದೆ. ಈ ಸೆಟಲ್‌ಮೆಂಟ್‌ಗೆ ಅವಕಾಶ ನೀಡಿದರೆ, ಹಲವರು ಮುಂದೆ ಬರಬಹುದು. ಇದರಿಂದ ಸರ್ಕಾರದ ಖಜಾನೆಗೆ ಒಂದಷ್ಟು ಹಣ ಹರಿದುಬರಲಿದೆ ಎಂದರು.

ಒಂದು ವೇಳೆ ಕಾನೂನು ಪ್ರಕ್ರಿಯೆ ಮುಂದುವರೆದರೆ ಇಷ್ಟು ಪ್ರಮಾಣದ ಪ್ರಕರಣಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವುದು, ವಕೀಲರ ತಂಡ ಇಡುವುದು ಸರ್ಕಾರಕ್ಕೆ ಕಷ್ಟವಾಗಲಿದೆ. ಹೈಕೋರ್ಟ್‌ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್‌ ಯಾವಾಗ ಮುಗಿಯುತ್ತೆ ಎಂಬುದು ಗೊತ್ತಿಲ್ಲ. ಮುಗಿದರೂ ಮುಂದೆ ನಮಗೆ ಉಳಿಯುವುದೇನು? ಎಂಬ ಬಗ್ಗೆಯೂ ಖಚಿತತೆ ಇಲ್ಲ ಎಂದು ಸದನಕ್ಕೆ ಮಾಹಿತಿ ನೀಡಿದರು.

ತೆರಿಗೆದಾರರು ಜಿಎಸ್‌ಟಿ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ದಾಖಲಿಸುವಾಗ ಭದ್ರತಾ ಠೇವಣಿ ರೂಪದಲ್ಲಿ ರೂ.50 ಕೋಟಿ ಹಣ ಠೇವಣಿ ಇಡಬೇಕು. ತೆರಿಗೆದಾರರ ಪಾಲಿಗೆ ಇದು ದೊಡ್ಡ ಹೊರೆ. ಹೀಗಾಗಿ ಈ ಪ್ರಮಾಣವನ್ನು ರೂ.20 ಕೋಟಿಗೆ ಇಳಿಸಬೇಕು ಎಂದು ಹಲವು ವ್ಯವಹಾರಸ್ಥರು ನನ್ನ ಬಳಿ ಕೇಳಿಕೊಂಡಿದ್ದರು. ಅದರಂತೆ ಇದೀಗ ಭದ್ರತಾ ಠೇವಣಿ ಹಣವನ್ನು ರೂ.20 ಕೋಟಿ ರೂಪಾಯಿಗೆ ಉಳಿಸಲಾಗಿದೆ. ಇಲ್ಲದಿದ್ದರೆ, ತೆರಿಗೆದಾರರು ಸುಪ್ರೀಂ ಕೋರ್ಟ್‌ಗೆ ಹೋಗ್ತಾರೆ . ಇದರಿಂದ ಸರ್ಕಾರಕ್ಕೂ ಕಷ್ಟ, ತೆರಿಗೆದಾರರಿಗೂ ಕಷ್ಟ ಎಂದು ವಿವರಿಸಿದರು.

ಈ ಕಾನೂನುಗಳನ್ನು ಸರಳೀಕರಿಸುವ ಸಂಬಂಧ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಎಲ್ಲಾ ರಾಜ್ಯಗಳೂ ಒಪ್ಪಿಗೆ ಸೂಚಿಸಿವೆ. ಅಕ್ಟೋಬರ್‌.01 ರಿಂದಲೇ ಜಾರಿ ಮಾಡಲೂ ಸಹ ಎಲ್ಲಾ ರಾಜ್ಯಗಳೂ ಸಮ್ಮತಿಸಿವೆ. ಕರ್ನಾಟಕದಲ್ಲಿ ಅದಕ್ಕೂ ಮೊದಲೇ ಜಾರಿಗೆ ತರಲಾಗಿದೆ. ಕ್ಯಾಬಿನೆಟ್‌ ಅನುಮತಿ ಪಡೆದು ರಾಜ್ಯಪಾಲರ ಒಪ್ಪಿಗೆಯೊಂದಿಗೆ ಸುಗ್ರೀವಾಜ್ಷೆ ಮೂಲಕ ಈ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಪ್ರಸ್ತುತ ಸದನದಲ್ಲಿ ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಸ್ಪಿರಿಟ್‌ ಮೇಲಿಲ್ಲ ಜಿಎಸ್‌ಟಿ: ಮಧ್ಯ ಮಾಡಲು ಉಪಯೋಗವಾಗುವ ಸ್ಪಿರಿಟ್‌ಗೆ ತೆರಿಗೆ ವಿಧಿಸುವ ಅಧಿಕಾರದ ನಡುವೆ ರಾಜ್ಯ-ಕೇಂದ್ರ ಸರ್ಕಾರಗಳ ನಡುವೆ ತಕರಾರು ಈ ಹಿಂದಿನಿಂದಲೂ ಇತ್ತು. ಆದರೆ, ಇದೀಗ ಸ್ಪಿರಿಟ್‌ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇದರ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಬಾರದು ಎಂದು ಜಿಎಸ್‌ಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಸ್ಪಿರಿಟ್‌ ಅನ್ನು ಜಿಎಸ್‌ಟಿಯಿಂದ ತೆಗೆದು ಹಾಕುತ್ತಿದ್ದೇವೆ ಎಂದು ಅವರು ಸದನಕ್ಕೆ ಖಚಿತಪಡಿಸಿದರು.

Leave a Reply