2025ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ವಿಧೇಯಕ ಅಂಗೀಕಾರ

8 months ago

ಬೆಂಗಳೂರು: ತೆರಿಗೆ ಸೋರಿಕೆ ತಡೆಯಲು ದುರುಪಯೋಗವಾಗುವುದನ್ನು ನಿಯಂತ್ರಿಸಲು ಅವಕಾಶ ಕಲ್ಪಿಸುವ 2025ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ  ಅಂಗೀಕಾರ ದೊರೆಯಿತು.

ಶಾಸನರಚನಾ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ವಿಧೇಯಕ ಕುರಿತು ಮಾತನಾಡಿ, ದೇಶದಲ್ಲಿ ಏಕರೂಪ ಜಿಎಸ್‌‍ಟಿ ತೆರಿಗೆ ಇದೆ. ಆದರೆ ಜಿಎಸ್‌‍ಟಿ ಸೋರಿಕೆಯಾಗುವುದನ್ನು ದುರುಪಯೋಗವಾಗುವುದನ್ನು  ತಡೆಗಟ್ಟಲು ಪ್ರಯತ್ನ ಮಾಡಲಾಗುತ್ತದೆ ಎಂದಿದ್ದಾರೆ.

ಖರೀದಿ ಮಾಡದಿದ್ದರೂ ಜಿಎಸ್‌‍ಟಿ ಮರುಪಾವತಿ ಮಾಡಿಕೊಳ್ಳುವ ವ್ಯವಸ್ಥಿತ ಜಾಲವಿದೆ. ಅದಕ್ಕೆ ಕಡಿವಾಣ ಹಾಕಬೇಕು. ಈ  ವಿಧೇಯಕದಲ್ಲಿ ಖರೀದಿ ಮಾಡಿರುವ ಬಿಲ್‌ ಆದಾಗ ಮಾರಾಟ ಮಾಡಿದವರೂ   ಒಪ್ಪಬೇಕು. ಉದಾಹರಣೆಗೆ ತಂಬಾಕು ಅಡಿಕೆ ಪದಾರ್ಥಗಳಾದ ಪಾನ್‌ಮಸಾಲ ಮತ್ತು ಗುಟ್ಕಾ ಉತ್ಪನ್ನಗಳಲ್ಲಿ ಭಾರೀ ಪ್ರಮಾಣದ ತೆರಿಗೆ ಸೋರಿಕೆಯಾಗುತ್ತಿದೆ ಎಂದರು.

ಶಿರಸಿ, ಹೊನ್ನಾಳಿ, ದಾವಣಗೆರೆಯಲ್ಲಿ ನೂರಾರು ಲೋಡ್‌ ಅಡಿಕೆ ಮಾರಾಟವಾಗುತ್ತದೆ.  ಅವೆಲ್ಲ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ವ್ಯವಸ್ಥಿತ ಜಾಲದ ಮೂಲಕ ಉತ್ತರಪ್ರದೇಶ ತಲುಪುತ್ತದೆ. ಟ್ರಾಕ್‌ ಅಂಡ್‌ ಟ್ರೇಸ್‌‍  ಎಂಬ  ಪ್ರಯೋಗವನ್ನು ಮಾಡಲಾಗುತ್ತಿದೆ. ಮುಂದಿನ ವಾರ ಜಿಎಸ್‌‍ಟಿ ಮಂಡಳಿ ಸಭೆ ಇರುವುದರಿಂದ ಈ  ವಿಧೇಯಕ ತುರ್ತಾಗಿದೆ ಎಂದರು.

ಬಿಜೆಪಿಯ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಒಂದು ಕ್ವಿಂಟಾಲ್‌ ಅಡಿಕೆಗೆ 3 ಸಾವಿರ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಪ್ರಮಾಣವನ್ನು ಶೇ.1ರಿಂದ  2ರಷ್ಟು  ವಿಧಿಸಿದರೆ ಸಾಕು.  ಅಡಿಕೆ ಸಾಗಾಣಿಕೆ ಸಂದರ್ಭದಲ್ಲಿ 50 ಸಾವಿರ ರೂ. ವ್ಯವಹಾರವೇ ನಡೆಯುತ್ತದೆ. ಅಲ್ಲದೆ ಹೆಚ್ಚು  ಬೆಲೆಗೆ ಖರೀದಿಸಿ  ಕಡಿಮೆ ಬೆಲೆಗೆ ಬಿಲ್‌ ಹಾಕುತ್ತಾರೆ. ಬಿಲ್‌ ಇಲ್ಲದೆ ಅಡಿಕೆ ಸಾಗಾಣಿಕೆಯಾಗುತ್ತದೆ. ಈ ರೀತಿ ತೆರಿಗೆ ಸೋರಿಕೆಯಾಗುತ್ತದೆ ಎಂದರು.

ನಂತರ ಮಾತನಾಡಿದ ಕೃಷ್ಣ ಭೈರೇಗೌಡ,  ಈ ಎಲ್ಲ ಸಂಗತಿಗಳು ನಿಜ. ಸಹಕಾರ ಸಂಘಕ್ಕೂ ತೊಂದರೆಯಾಗುತ್ತದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ವಿಧೇಯಕ ತರಲಾಗಿದೆ. ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿಗಿದರು.  ಆಗ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.

Leave a Reply