ಬೆಂಗಳೂರು: ಹಿರಿಯ ಅಧಿಕಾರಿಗಳ ನಡುವಿನ ಸಂಘರ್ಷದಿಂದ ಆರೋಗ್ಯ ಇಲಾಖೆ ಅನಾರೋಗ್ಯಕ್ಕೆ ಈಡಾಗಿದೆ. ಇದರಿಂದಲೇ ಇಲಾಖೆಯಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ಮೊದಲು ಅಧಿಕಾರಿಗಳ ಒಳಜಗಳವನ್ನು ಸರಿ ಮಾಡಿ ಆರೋಗ್ಯ ಇಲಾಖೆಯನ್ನು ಸುಧಾರಣೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
ಆರೋಗ್ಯ ಇಲಾಖೆಯ ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗೃಹ, ಕಂದಾಯ ಹಾಗೂ ಆರೋಗ್ಯ ಇಲಾಖೆಯನ್ನು ಜನರು ಹೆಚ್ಚು ಅವಲಂಬಿಸಿದ್ದಾರೆ. ಈ ಪೈಕಿ ಆರೋಗ್ಯ ಇಲಾಖೆ ಅನಾರೋಗ್ಯಕ್ಕೀಡಾಗಿದೆ. ಔಷಧಿಗಳ ಕೊರತೆ ಬಗ್ಗೆ ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಮಾತಾಡಿದಾಗ, ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ಔಷಧಿ ಖರೀದಿಗೆ ಕೂಡಲೇ ಟೆಂಡರ್ ಕರೆಯುತ್ತೇವೆ ಎಂದು ತಿಳಿಸಿದ್ದರು. ಇತ್ತೀಚೆಗೆ ವೈದ್ಯಾಧಿಕಾರಿಗಳ ಸಂಘ ಸರ್ಕಾರಕ್ಕೆ ಪತ್ರ ಬರೆದಿದೆ. ಔಷಧಿ ಕೊರತೆಯನ್ನು ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದಿದ್ದು, ಇದರಿಂದಲೇ ರೋಗಿಗಳು ಹಾಗೂ ವೈದ್ಯರ ನಡುವೆ ಸಂಘರ್ಷ ಹೆಚ್ಚಿದೆ ಎಂದು ಸಂಘ ಹೇಳಿದೆ. ಇದೇ ಸಂಘ ಪ್ರತಿಭಟನೆ ಕೂಡ ಮಾಡಿದೆ ಎಂದರು.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸುಮಾರು 8 ತಿಂಗಳಿಂದ ಕಚೇರಿಗೆ ಬಂದಿಲ್ಲ. ಅವರು ವರ್ಕ್ ಫ್ರಂ ಹೋಮ್ ಮಾಡುತ್ತಾರೆಯೇ? ಹರ್ಷ ಗುಪ್ತ ಅವರೇ ಕಡತ ಸಿದ್ಧ ಮಾಡಿಕೊಂಡು ಅದಕ್ಕೆ ಸಹಿ ಹಾಕಿ ಕಳಿಸುತ್ತಾರೆ. ಅಂದರೆ ಇಲ್ಲಿ ಏಕ ಕಡತದ ಪ್ರಕ್ರಿಯೆ ನಡೆಯುತ್ತಿದೆ. ಅವರು ಅಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ಆರೋಗ್ಯ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಪರಿಶೀಲನೆ ನಡೆಸದೆ ಕಡತಗಳನ್ನು ಕಳುಹಿಸುತ್ತಿದ್ದಾರೆ, ಉಪ ಕಾರ್ಯದರ್ಶಿ-1 ಮೇಲ್ವಿಚಾರಣೆ ಮಾಡುತ್ತಿಲ್ಲ, ಸಮಗ್ರ ಪುನರ್ರಚನೆಯ ಅಗತ್ಯವಿದೆ, ಉನ್ನತ ಸ್ಥಾನದ ಅಧಿಕಾರಿಗಳ ಹುದ್ದೆಗೆ ನೇರ ನೇಮಕ ಮಾಡಿ ಎಂದು ಕೋರಿದ್ದಾರೆ. ನಂತರ ಹರ್ಷ ಗುಪ್ತ ವಿರುದ್ಧ ಕಾರ್ಯದರ್ಶಿ ಪತ್ರ ಬರೆದಿದ್ದಾರೆ ಎಂದರು.
ಈ ಪತ್ರದಲ್ಲಿ, ಹರ್ಷ ಗುಪ್ತ ತಮ್ಮ ವ್ಯಾಪ್ತಿ ಮೀರಿ ಉದ್ಧಟತನದಿಂದ ಪತ್ರ ಬರೆದಿದ್ದಾರೆ, ಈ ಪತ್ರವನ್ನು ಹಿಂಪಡೆಯಬೇಕು, ಈ ರೀತಿ ಅಪಮಾನ ಹಾಗೂ ನಿಂದನೆಯ ಪದ ಬಳಸಿ ನೌಕರರ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನವು ಅವರ ವಿಚಿತ್ರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಇದು ಸಮರ್ಥ ಅಧಿಕಾರಿಯ ಲಕ್ಷಣವಲ್ಲ ಎಂದು ಬರೆದಿದ್ದಾರೆ. ಅಂದರೆ ಇಬ್ಬರು ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದರಿಂದ ಆರೋಗ್ಯ ಇಲಾಖೆಯ ಸುಧಾರಣೆ ಹೇಗಾಗುತ್ತದೆ? ಎಂದು ಪ್ರಶ್ನಿಸಿದರು.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರನ್ನು ತೆಗೆದು ಬೇರೆ ಕಡೆ ನೇಮಿಸಿರುವುದರ ಬಗ್ಗೆ ಸದನದಲ್ಲಿ ಚರ್ಚೆಯಾದಾಗ ವೈದ್ಯಕೀಯ ಶಿಕ್ಷಣ ಸಚಿವರು ಉತ್ತರ ನೀಡಿದ್ದರು. ಯಾವುದೇ ವೈದ್ಯರನ್ನು ಬೇರೆ ಕಡೆ ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಅದಾದ ಮೇಲೂ ವೈದ್ಯರನ್ನು ಬೇರೆ ಕಡೆ ಕಳಿಸಲಾಗಿದೆ. ಅಂದರೆ ಸದನಕ್ಕೆ ಸಚಿವರು ತಪ್ಪು ಉತ್ತರ ನೀಡಿದ್ದಾರೆ ಎಂದು ಭಾವಿಸಬೇಕೇ? ಎಂದು ಪ್ರಶ್ನಿಸಿದರು.
ಅನುದಾನ ಕೊರತೆ: ಪಿಆರ್ಎಸ್ ಎಂಬ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ದೇಶದ ಬಜೆಟ್ನಲ್ಲಿ ಆರೋಗ್ಯಕ್ಕಾಗಿ ಖರ್ಚು ಮಾಡುವ ಮೊತ್ತ ಸರಾಸರಿ 6.2% ಇದೆ. ಕರ್ನಾಟಕದ ಪಾಲು 4.9% ಇದೆ. ದೆಹಲಿ ಸರ್ಕಾರ 14.5%, ರಾಜಸ್ಥಾನ ಸರ್ಕಾರ 8.4% ಖರ್ಚು ಮಾಡುತ್ತಿದೆ. ಆರೋಗ್ಯಕ್ಕಾಗಿ ಹೆಚ್ಚು ಹಣ ಕೊಡುತ್ತಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದರೂ, ಖರ್ಚು ಮಾಡುವ ಮೊತ್ತ ಕಡಿಮೆಯಾಗಿದೆ. ಸರ್ಕಾರದ ಪ್ರಕಾರ ಔಷಧಿ ಖರೀದಿಯಾಗಿದೆ, ಟೆಂಡರ್ ಆಗಿದೆ. ಹಾಗಾದರೆ ಎಷ್ಟು ಹಣ ಖರ್ಚು ಮಾಡಲಾಗಿದೆ? ಎಷ್ಟು ಔಷಧಿ ಖರೀದಿಯಾಗಿದೆ? ಎಷ್ಟು ಪೂರೈಕೆಯಾಗಿದೆ? ಎಂದು ಸ್ಪಷ್ಟೀಕರಣ ನೀಡಬೇಕು. ಮೊದಲು ಅಧಿಕಾರಿಗಳ ನಡುವಿನ ಜಗಳ ತಪ್ಪಿಸಿ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಬರುವಂತೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಸಮುದಾಯ ಆರೋಗ್ಯ ಕೇಂದ್ರಗಳ ಸ್ತ್ರೀ ರೋಗ ತಜ್ಞ ವೈದ್ಯರು ನನ್ನನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ. 228 ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು ಹಿಂಪಡೆಯಲಾಗಿದೆ. ಹೆರಿಗೆ ಮಾತ್ರವಲ್ಲದೆ, ಬೇರೆ ರೋಗಿಗಳನ್ನೂ ನೋಡಬೇಕು, ಮಕ್ಕಳಿಗೂ ಚಿಕಿತ್ಸೆ ನೀಡಬೇಕು, ಕೇಂದ್ರ ಸರ್ಕಾರಿ ಯೋಜನೆಗಳನ್ನು ಜಾರಿ ಮಾಡಬೇಕು, ಇದರಿಂದಾಗಿ ಹೆರಿಗೆ ಸಂಖ್ಯೆ ಕಡಿಮೆಯಾಗಿದೆ ಎಂದು ವೈದ್ಯರು ದೂರು ಹೇಳಿಕೊಂಡಿದ್ದಾರೆ. ಆದ್ದರಿಂದ ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಆಸ್ಪತ್ರೆಗಳಲ್ಲಿ ಸಣ್ಣ ಖರ್ಚುಗಳಿಗೆ ಬಳಕೆದಾರರ ಮೊತ್ತ ಬಳಸಲಾಗುತ್ತದೆ. ಇದನ್ನೇ ಬಳಸಿ ಔಷಧಿ ಖರೀದಿ ಮಾಡಿ ಎಂದು ಸರ್ಕಾರ ಸೂಚಿಸಿದೆ. ಇದರಿಂದಲೇ ಸರ್ಕಾರ ಪಾಪರ್ ಆಗಿದೆ ಎಂದು ತಿಳಿದುಬರುತ್ತದೆ. ಇಲಾಖೆಯಲ್ಲಿ ಸುಧಾರಣೆ ತರದೇ ಇದ್ದರೆ ಕಚೇರಿಗಳಿಗೆ ಬೀಗ ಹಾಕಬೇಕಾಗುತ್ತದೆ. ಆದ್ದರಿಂದ ಕೂಡಲೇ ಸುಧಾರಣೆ ತನ್ನಿ ಎಂದು ಆಗ್ರಹಿಸಿದರು.




