ಬೆಳಗಾವಿ: ಮುಂದಿನ ಸಾಲಿನಲ್ಲಿ ರಾಜ್ಯದ ಪ್ರತಿ ಕೃಷಿ ವಿ.ವಿ.ಗಳ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಒಂದೆರೆಡು ಕೃಷಿ ಡಿಪ್ಲೋಮಾ ಕಾಲೇಜುಗಳ ಪುನಾರಂಭದ ಬಗ್ಗೆ ಪರಿಶೀಲಿಸಲಾಗುವುದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಹುಕ್ಕೇರಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಿರ್ಮಿದಲಾದ ಕೃಷಿ ಡಿಪ್ಲೊಮಾ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ರಾಜ್ಯದಲ್ಲಿ ಕೃಷಿ ಡಿಪ್ಲೊಮಾ ಕಾಲೇಜು ಸ್ಥಗಿತಗೊಳಿಸಿದೆ. ಆದರೆ ಅದರ ಪುನಾರಂಭಕ್ಕೆ ಸಾಕಷ್ಟು ಬೇಡಿಕೆ ಕೇಳಿಬರುತ್ತಿದೆ. ಅದರ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಪ್ರತಿ ವಿವಿ ವ್ಯಾಪ್ತಿಯಲ್ಲಿ ಒಂದೆರೆಡು ಡಿಪ್ಲೊಮಾ ಕಾಲೇಜು ಪ್ರಾರಂಭಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಸುಸಜ್ಜಿತ ಕಟ್ಟಡ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎನ್ ಚಲುವರಾಯಸ್ವಾಮಿ ಹುಕ್ಕೇರಿಯ ಮೆಚ್ಚಿನ ನಾಯಕರಾಗಿದ್ದ ಉಮೇಶ್ ಕತ್ತಿ ಅವರೊಂದಿಗಿನ ತಮ್ಮ ಒಡನಾಟ, ಅವರಿಗಿದ್ದ ಸಾಮಾಜಿಕ ಕಳಕಳಿ ನೇರವಂತಿಕೆ ಸ್ಮರಿಸಿಕೊಂಡರು.
ರಾಜ್ಯದಲ್ಲಿ ತೀವ್ರ ಬರ ಇದೆ. ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದೆ. ತಕ್ಷಣದ ಪರಿಹಾರವಾಗಿ ತಲಾ 2000 ರೂ. ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಕೇಂದ್ರದ ನೆರವನ್ನೂ ನಿರೀಕ್ಷಿಸಲಾಗಿದೆ. ಇದಲ್ಲದೆ ಗ್ಯಾರಂಟಿ ಯೋಜನೆಗಳ ಮೂಲಕವೂ ರಾಜ್ಯ ಸರ್ಕಾರ ಜನರಿಗೆ ನೆರವಾಗುತ್ತಿದೆ ಎಂದರು.
ಶಾಸಕ ನಿಖಿಲ್ ಕತ್ತಿ, ಧಾರವಾಡ ವಿಶ್ವವಿದ್ಯಾಲಯದ ಕುಲಪತಿ ಡಾ ಪಿ.ಎಲ್ ಪಾಟೀಲ್ ಮೊದಲಾದವರು ಹಾಜರಿದ್ದರು.




