ಜಿಲ್ಲೆಯ ಅಭಿವೃದ್ಧಿಯಲ್ಲಿ ಬಿಜೆಪಿ ಪಾಲು ಶೂನ್ಯ: ಸುನಿಲ್ ಕುಮಾರ್ ಬಜಾಲ್

2 years ago

ಮಂಗಳೂರು: ದ.ಕ.ಜಿಲ್ಲೆಯ ಪ್ರಪ್ರಥಮ ಸಂಸದರಾದ ಉಳ್ಳಾಲ ಶೀನಿವಾಸ ಮಲ್ಯರವರು ತನ್ನ 18 ವರ್ಷಗಳ ಕಾಲಾವಧಿಯಲ್ಲಿ ದೂರದೃಷ್ಟಿಕೋನದಿಂದ ತಮ್ಮ ಸ್ವಪ್ರಯತ್ನದ ಭಾಗವಾಗಿ ಸುರತ್ಕಲ್ NITK ಇಂಜಿನಿಯರಿಂಗ್ ಕಾಲೇಜ್, NMPT, MCF, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಪುರಭವನ, ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಡಿಸೆಂಬರ್ 19ರಂದು ನಡೆಯಲಿರುವ ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟದ ಪ್ರಚಾರಾರ್ಥವಾಗಿ ಮಂಗಳೂರು ನಗರ ಮಟ್ಟದ ವಾಹನ ಪ್ರಚಾರ ಜಾಥಾವನ್ನು ಉದ್ಘಾಟಿಸಿ ಮಾತಾಡಿದ ಅವರು, 80ರ ದಶಕದಲ್ಲಿ ಕೊಂಕಣ ರೈಲ್ವೇ, MRPL ಈ ಜಿಲ್ಲೆಗೆ ಬರುವ ಮೂಲಕ ಅಭಿವ್ರದ್ದಿಗೆ ಅಪಾರ ಕೊಡುಗೆ ನೀಡಲಾಗಿದೆ. ಇದೇ ಅವಧಿಯಲ್ಲಿ ಜನ್ಮ ತಾಳಿದ ಬ್ಯಾಂಕುಗಳು ಜಿಲ್ಲೆಯ ಆರ್ಥಿಕತೆಗೆ ಶಕ್ತಿ ನೀಡಿದವು. ಆದರೆ 1989ರ ಬಳಿಕ ನಡೆದ 9 ಮಹಾಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಬರುವ ಮೂಲಕ ಕಳೆದ 35 ವರ್ಷಗಳಲ್ಲಿ ಅಭಿವೃದ್ಧಿಗೆ ಎಳ್ಳಷ್ಟೂ ಕಾಳಜಿ ವಹಿಸದೆ ಜಿಲ್ಲೆಯನ್ನು ಅಧೋಗತಿಗೆ ತಳ್ಳಿದೆ ಎಂದರು.

ಶಿಕ್ಷಣ,ಉದ್ಯೋಗ ಆರೋಗ್ಯಕ್ಕೆ ಗಮನ ನೀಡದ ಬಿಜೆಪಿ ಎಲ್ಲಾ ಕ್ಷೇತ್ರದಲ್ಲೂ ಮಾಫಿಯಾಗಳು ಬೆಳೆಯಲು ಕುಮ್ಮಕ್ಕು ನೀಡಿದೆ. ಜಿಲ್ಲೆಯ ಬ್ಯಾಂಕುಗಳು ಉತ್ತರ ಭಾರತದ ಪಾಲಾಗುವಂತೆ, NMPT, ವಿಮಾನ ನಿಲ್ದಾಣಗಳು ಅದಾನಿಯ ಕೈಸೇರುವಂತೆ, ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು ಖಾಸಗಿಯವರ ಕಪಿಮುಷ್ಠಿಯಲ್ಲಿರುವಂತೆ ಮಾಡುವಲ್ಲಿ ಇಲ್ಲಿನ ಬಿಜೆಪಿ ಸಂಸದರ ಪಾತ್ರ ಮಹತ್ತರವಾಗಿದೆ. ಇಂತಹ ಜನವಿರೋಧಿ,ಅಭಿವೃದ್ಧಿ ವಿರೋಧಿ ಬಿಜೆಪಿಯ ಹುನ್ನಾರಗಳನ್ನು ಬಯಲಿಗೆಳೆಯಲು ಜೆಲ್ಲೆಯ ಸರ್ವ ಧರ್ಮದ ಜನತೆ ಒಂದಾಗಬೇಕು ಎಂದು ಮಂಗಳೂರಿನ ಜನತೆಗೆ ಕರೆ ನೀಡಿದರು.

ಜಿಲ್ಲೆಯ ಅಭಿವೃದ್ಧಿಯನ್ನು ಪ್ರಜ್ಞಾಪೂರ್ವಕವಾಗಿ ಕಡೆಗಣಿಸುತ್ತಾ ಬಂದಿರುವ ಬಿಜೆಪಿ, ಜಿಲ್ಲೆಯನ್ನು ಧರ್ಮದ್ಚೇಷ ರಾಜಕಾರಣದ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಿ ಜನತೆಯಲ್ಲಿ ಪ್ರಶ್ನೆ ಮಾಡುವ ಗುಣವನ್ನೇ ಸರ್ವನಾಶಗೊಳಿಸಿದೆ. ಜಿಲ್ಲೆಯ ಯುವಜನರನ್ನು ಉದ್ಯೋಗ ವಂಚಿತರನ್ನಾಗಿಸಿದ್ದು, ಇಲ್ಲಿನ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿರನ್ನಾಗಿಸಿದ್ದು ಹಾಗೂ ಜಿಲ್ಲೆಯ ಜನತೆಯನ್ನು ಆರೋಗ್ಯವಂಚಿತರನ್ನಾಗಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CPIM ಜಿಲ್ಲಾ ಯುವನಾಯಕ ಯೋಗೀಶ್ ಜಪ್ಪಿನಮೊಗರು, ಜಿಲ್ಲೆಯ ಜನತೆಯ ಬದುಕಿನ ಬಗ್ಗೆ ಚಕಾರಶಬ್ದವೆತ್ತದ ಸಂಸದ ನಳೀನ್ ಕುಮಾರ್ ಕಟೀಲುರವರು ಸದಾ ಅಭಿವೃದ್ಧಿಯ ಬಗ್ಗೆ ಮಾತನಾಡೋದು ಬಿಟ್ಟು ಜಿಲ್ಲೆಗೆ ಬೆಂಕಿ ಕೊಡುವುದಾಗಿ ಬಹಿರಂಗವಾಗಿ ಹೇಳಿರುವುದು ಮಾತ್ರವಲ್ಲದೆ ಜಿಲ್ಲೆಯ ಯುವಜನತೆಗೆ ಉದ್ಯೋಗ ನೀಡುವ ಬದಲು ಕೋಮು ಹಿಂಸೆಯ ವಿಷವುಣ್ಣಿಸಿ ಅವರ ಬದುಕನ್ನೇ ಹಾಳುಗೆಡವಿದ ಕುಖ್ಯಾತಿ ಹೊಂದಿದ್ದಾರೆ. ಅಂತಹವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಜಿಲ್ಲೆಯ ಜನತೆ ಮುಂದಾಗಬೇಕು ಎಂದು ಕರೆನೀಡಿದರು.

ಜಾಥಾ ತಂಡದ ಕಾರ್ಯಕ್ರಮದಲ್ಲಿ CPIM ನಾಯಕರಾದ ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಜಗದೀಶ್ ಬಜಾಲ್, ಸಾಧಿಕ್ ಮುಲ್ಕಿ, ಆಸಿಫ್ ಭಾವ, ಅಸುಂತ ಡಿಸೋಜ ಮುಂತಾದವರು ಭಾಗವಹಿಸಿದ್ದರು.

Leave a Reply