ಮಹರ್ಷಿ ವಾಲ್ಮೀಕಿ ಜಯಂತಿ ಅದ್ಧೂರಿ ಆಚರಣೆ
ಬೆಳಗಾವಿ: ಮನುಷ್ಯ ಮನುಷ್ಯನಾಗಿ ಬದುಕಲು ಮಹರ್ಷಿ ವಾಲ್ಮೀಕಿಯವರ ಆಚಾರ-ವಿಚಾರಗಳು ಅನುಸರಣೆ ಅಗತ್ಯವಾಗಿವೆ. ಇಂದಿನ ಯುವ ಸಮುದಾಯ ವಾಲ್ಮೀಕಿಯವರ ತತ್ವಾದರ್ಶಗಳನ್ನು ಅನುಸರಿಸುವುದರ ಮೂಲಕ ಸಧೃಡ ಸಮಾಜ, ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಜರುಗಿದ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮಿಕಿ ಅವರು ರಾಮಾಯಣ ರಚಿಸಿದಂತಹ ಮಹಾನ್ ವ್ಯಕ್ತಿಯಾಗಿದ್ದು, ಅವರು ರಚಿಸಿದ ಇನ್ನೂ ಅನೇಕ ಸಾಹಿತ್ಯಗಳ ಕುರಿತು ಅಧ್ಯಯನವಾಗಬೇಕಾಗಿದೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಮಹನೀಯರ ಆಚಾರ ವಿಚಾರಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜ, ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅತೀ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ. ಸರಕಾರ ಪರಿಶಿಷ್ಟರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಬೇಕು. ಮಹರ್ಷಿ ವಾಲ್ಕೀಕಿ ಅವರ ತತ್ವ ಸಿದ್ಧಾಂತ ಹಾಗೂ ವಿಚಾರಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬೆಳಗಾವಿ ಉಪ ಮೇಯರ್, ಆನಂದ ಚೌವ್ಹಾಣ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ವಿಶ್ವಕ್ಕೆ ಮೊಟ್ಟ ಮೊದಲು ಮಹಾಕಾವ್ಯ ನೀಡಿದಂತಹ ಸಮುದಾಯ ವಾಲ್ಮೀಕಿ ಸಮುದಾಯವಾಗಿದ್ದರೂ ಸಹ ನಮ್ಮ ಸಮುದಾಯ ಸಮಾಜದ ಮುಂಚೂಣಿಗೆ ಬರಲಾಗುತ್ತಿಲ್ಲ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವದು ಅವಶ್ಯಕವಾಗಿದೆ ಎಂದರು.
ಪುರಾಣ, ಚರಿತ್ರೆ ಕಾಲದಲ್ಲಿಯೂ ನಮ್ಮ ಸಮುದಾಯವಿತ್ತು. ಜಗತ್ತಿನಲ್ಲಿ ಬೇಡರಂತಹ ಶೂರರಿಬಹುದು. ಆದರೆ ಅವರನ್ನು ಮೀರಿಸುವಂತಹವರು ಯಾರು ಇಲ್ಲ ಎಂಬ ವಿಲಿಯಂ ಷೇಕ್ಸಪಿಯರ್ ಅವರ ನುಡಿಗಳನ್ನು ಮೆಲಕು ಹಾಕಿದರು.
ರಾಮಾಯಣ ಮಹಾಕಾವ್ಯ ಸಮೃದ್ಧವಾದಂತಹ ಹಾಗೂ ಬುಡಕಟ್ಟು ಕಾವ್ಯವಾಗಿದೆ. ರಾಮಾಯಣದಲ್ಲಿ ಮನುಷ್ಯ, ವಾನರ ಹಾಗೂ ರಾಕ್ಷಸ ಲೋಕವನ್ನು ಪರಿಚಯಿಸಲಾಗಿದೆ. ವಾಲ್ಮೀಕಿ ಅವರು ಉತ್ತಮ ಬಿಲ್ ವಿದ್ಯೆಗಾರ ಆಗಿದ್ದರು ಎಂದು ಅವರ ಜೀವನ ಹಾಗೂ ಬದುಕಿನ ಕುರಿತು ವಿವರಿಸಿದರು.
ರಾಮಾಯಣವನ್ನು ಬಿಡಿ ಬಿಡಿಯಾಗಿ ಓದುವುದರ ಮೂಲಕ ವಾಲ್ಮೀಕಿ ರಾಮಾಯಣಕ್ಕೆ ಧಕ್ಕೆ ತರುವಂತಹ ಕಾರ್ಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ ಅವರು ನೀಡಿರುವ ಸಂವಿಧಾನದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ. ಜಯಂತಿಗಳ ಸಂದರ್ಭದಲ್ಲಿ ಪ್ರತಿಯೊಬ್ಬರು ಸುಶಿಕ್ಷತರಾಗುವ ಸಂಕಲ್ಪವನ್ನು ತೋಡಬೇಕಾಗಿದೆ.
ಜ್ಞಾನ, ಶಿಕ್ಷಣ ಹಾಗೂ ಸಂಘಟನೆ ಮೂಲಕ ಗುರಿ ತಲುಪಬಹುದಾಗಿದ್ದು, ಎಲ್ಲ ಮಹಿಳೆಯರಿಗೂ ಉತ್ತಮ ಶಿಕ್ಷಣ ನೀಡುವುದರ ಮೂಲಕ ಸಮಾಜ ಹಾಗೂ ರಾಷ್ಟ್ರವನ್ನು ಸದೃಢ ಮಾಡಬಹುದಾಗಿದೆ. ಡಾ.ಬಿ.ಆರ್.ಅಂಬೇಡ್ಕರ ರಚಿಸಿದಂತಹ ಸಂವಿಧಾನ ಶಕ್ತಿಶಾಲಿಯಾಗಿದ್ದು, ಸಂವಿಧಾನದ ಬೆಳಕಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಸಮಾಜದ ಮುಖಂಡರಾದ ಯಲ್ಲಪ್ಪ ಕೊಲೇಕರ ಅವರು ಮಾತನಾಡಿ, ವಾಲ್ಮೀಕಿ ಸಮಾಜ ಧೈರ್ಯಕ್ಕೆ ಹೆಸರು ವಾಸಿಯಾದಂತಹ ಹಾಗೂ ಕೊಟ್ಟ ಮಾತನ್ನು ನಡೆಸಿ ಕೊಡುವಂತಹ ಸಮುದಾಯವಾಗಿದೆ. ಕಿತ್ತೂರು ರಾಣಿ ಚನ್ನಮ್ಮಾಜಿಗೆ ಕುದುರೆ ಸವಾರಿ ಕಲಿಸಿರುವುದು ನಮ್ಮ ವಾಲ್ಕೀಕಿ ಸಮುದಾಯವಾಗಿದೆ ಎಂದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ ಮಾತನಾಡಿ, ಸಮಾಜದಲ್ಲಿ ಸಮುದಾಯವನ್ನು ಮುಂಚೂಣಿಗೆ ತರುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆಯುವಂತೆ ತಿಳಿಸಿದರು.
ಪ್ರತಿಭಾವಂತರಿಗೆ ಸನ್ಮಾನ: ಮಹರ್ಷಿ ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ, ಪಿ.ಹೆಚ್.ಡಿ. ಪದವಿ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಗಣ್ಯರುಗಳು ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಗರ ಸೇವಕರು, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿ.ಪಂ.ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ, ಸಾಹಿತಿಗಳಾದ ಸರಜೂ ಕಾಟ್ಕರ, ಮಲ್ಲೇಶಿ ಚೌಗುಲೆ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು, ಗಣ್ಯರುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಜಿಲ್ಲಾ ಅಧಿಕಾರಿ ಬಸವರಾಜ ಕುರಿಹುಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ಮೊರೆ ಹಾಗೂ ತಂಡದವರು ನಾಡಗೀತೆ ಪ್ರಸ್ತುತಿಸಿದರು. ಕು.ಜ್ಯೋತಿ ಪ್ರಾರ್ಥಿಸಿದರು.
ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ: ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಜರುಗಿದ ಮೆರವಣಿಗೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಗರದ ಕೋಟೆ ಆವರಣದಲ್ಲಿ ಚಾಲನೆ ನೀಡಿದರು.
ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಪ್ರಾರಂಭವಾದ ಮೆರವಣಿಗೆಯು ಕೋಟೆ ಕೆರೆ, ಅಶೋಕ ವೃತ್ತದ ಮೂಲಕ ಕುಮಾರ ಗಂಧರ್ವ ರಂಗ ಮಂದಿರಕ್ಕೆ ಬಂದು ಮುಕ್ತಾಯಗೊಂಡಿತು. ಮೆರವಣಿಗೆಗೆ ಪೂರ್ಣ ಕುಂಬ ಹೊತ್ತ ಮಹಿಳೆಯರು ಹಾಗೂ ವಿವಿಧ ಜಾನಪದ ಕಲಾತಂಡಗಳು ಮೆರಗು ತಂದವು.
ಈ ಸಂದರ್ಭದಲ್ಲಿ ಪೊಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ನಬ್ಯಾಂಗ್, ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ, ಶಿಂಧೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಜಿಲ್ಲಾ ಅಧಿಕಾರಿ ಬಸವರಾಜ ಕುರಿಹುಲಿ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರು ಹಾಜರಿದ್ದರು.




