ಬೆಂಗಳೂರು: ಪೊಲೀಸ್ ಪೇದೆಗಳ ಸುಲಿಗೆಯ ಕತೆಯಿದು. ಹಣಕ್ಕಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬ್ಯಾಗ್ ನಲ್ಲಿ ಗಾಂಜಾ ಇರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಪೇದೆಗಳಿಬ್ಬರು ಸೇವೆಯಿಂದ ಅಮಾನತುಗೊಂಡಿದ್ದಾರೆ
ಖಾಸಗಿ ಕಂಪನಿ ಉದ್ಯೋಗಿ ವೈಭವ್ ಪಾಟೀಲ್ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ನೋವಿನಿಂದ ಟ್ವಿಟರ್ ನಲ್ಲಿ ತಮ್ಮ ಅನುಭವ ಬರೆದುಕೊಂಡಿದ್ದರು. ಅನಗತ್ಯವಾಗಿ ನನ್ನನ್ನು ಮಾದಕ ವಸ್ತು ಕಾಯ್ದೆ ಪ್ರಕರಣಕ್ಕೆ ಸಿಲುಕಿಸಲಾಗುತ್ತಿದೆ ಎಂದು ದೂರಿದ್ದರು.
ಇದನ್ನು ಆಧರಿಸಿ ಉನ್ನತ ಮಟ್ಟದ ತನಿಖೆ ನಡೆಸಲಾಗಿತ್ತು. ನಂತರ ವಿಚಾರಣೆ ನಡೆಸಿ ಬಂಡೇಪಾಳ್ಯ ಠಾಣೆಯ ಇಬ್ಬರು ಪೊಲೀಸ್ ಪೇಸೆಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದೆ. ವಿಚಾರಣಾಧಿಕಾರಿ ನೀಡಿದ ವರದಿ ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಬಾಬಾ ಹೇಳಿದ್ದಾರೆ
ಸಂತ್ರಸ್ತ ಪಾಟೀಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜ.13ರಂದು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ನನ್ನ ಹೇಳಿಕೆ ದಾಖಲಿಸಿದೆ. ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಗುರುತಿಸಿದೆ. ನನ್ನ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ನೀಡಿದ್ದೇನೆ. ಮರುದಿನವೂ ಪೊಲೀಸ್ ಠಾಣೆಗೆ ಭೇಟಿ ನೀಡಿ ನನ್ನ ಕಾಯಂ ವಿಳಾಸ ಮತ್ತಿತರ ವಿವರಗಳನ್ನು ಕೊಟ್ಟೆ ಎಂದು ವಿವರಿಸಿದರು.
ನನ್ನ ದೂರು ನಿರಾಕರಿಸಿದ್ದ ಪೇದೆಗಳು ‘ನಾನು ತಪಾಸಣೆಗೆ ಒಳಪಡಲು ನಿರಾಕರಿಸಿದ್ದಾಗಿ ಹಾಗೂ ನನ್ನಿಂದ ಹಣ ಪಡೆಯಲಿಲ್ಲ’ ಎಂದು ಹೇಳಿದರು. ಇದನ್ನು ನಾನು ಇದನ್ನು ಒಪ್ಪಲಿಲ್ಲ. ಆಗಲೂ ನನ್ನನ್ನು ತಪಾಸಣೆಗೆ ಒಳಪಡಿಸಬಹುದು. ಒಂದು ವೇಳೆ ನನ್ನ ಬಳಿ ಮಾದಕವಸ್ತು ಇದ್ದಿದ್ದೇ ಆದರೆ ನನ್ನನ್ನು ಇವರು ಮುಂದೆ ಹೋಗಲು ಬಿಟ್ಟಿದ್ದಾದರೂ ಹೇಗೆ ಎಂದು ಪ್ರಶ್ನಿಸಿದೆ’ ಎಂದು ಹೇಳಿದರು.
ಆರು ತಿಂಗಳ ಹಿಂದೆ ಹಿಮಾಚಲ ಪ್ರದೇಶದಿಂದ ನಗರಕ್ಕೆ ಪಾಟೀಲ್ ಬಂದಿದ್ದು, ಎಚ್ಎಸ್ಆರ್ ಲೇಔಟ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅವರು ತಿಂಗಳಿಗೆ ಸುಮಾರು 22 ಸಾವಿರ ವೇತನ ಪಡೆಯುತ್ತಿದ್ದಾರೆ. ಈ ಘಟನೆಯಿಂದ ನನ್ನ ಪೋಷಕರು ಚಿಂತಿತರಾದರು. ವಾಪಸ್ ಬಂದುಬಿಡು ಎಂದು ಹೇಳಿದರು ಎಂದು ಅವರು ನೋವು ತೋಡಿಕೊಂಡರು.
ಎಚ್ಎಸ್ಆರ್ ಲೇಔಟ್ ನಲ್ಲಿ ರಾಪಿಡೊ ಬೈಕ್ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಪೊಲೀಸರು ನನ್ನನ್ನು ತಡೆದರು. ಅವರ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಓರ್ವ ಕಾನ್ಸ್ಟೆಬಲ್ ನನ್ನ ಬ್ಯಾಗ್ ತಪಾಸಣೆ ಮಾಡಬೇಕೆಂದರು. ನಾನು ಕೊಟ್ಟೆ. ಮತ್ತೊಬ್ಬರು ನನ್ನ ಬಳಿಗೆ ಬಂದು ಎಲ್ಲಿ ಕೆಲಸ ಮಾಡುವೆ ಇನ್ನಿತರ ಪ್ರಶ್ನೆಗಳನ್ನು ಕೇಳಿದರು. ‘ನೀನು ಗಾಂಜಾ ಸೇದ್ತೀ ಅಲ್ವಾ’ ಎಂದು ಕೇಳಿದಾಗ ನಾನು ನಿರಾಕರಿಸಿದೆ. ಅವರು ತಾವೇ ನನ್ನ ಬ್ಯಾಗ್ ನಲ್ಲಿ ಗಾಂಜಾ ಪೊಟ್ಟಣ ಇರಿಸಿ, ಅದನ್ನು ಬ್ಯಾಗ್ ನಿಂದ ಹೊರಗೆ ತೆಗೆದಂತೆ ನಾಟಕವಾಡಿದರು. ಗಾಂಜಾ ಸೇದುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು.
ನನ್ನನ್ನು ಬಂಧಿಸುವ ನಾಟಕವಾಡಿ ನನ್ನ ಬಳಿಯಿದ್ದ 2,500 ಕಿತ್ತುಕೊಂಡರು. ಮನೆ ತಲುಪಲು ಕನಿಷ್ಠ 100 ಕೊಡಿ ಎಂದರೂ ಕೇಳಲಿಲ್ಲ. ನಾನು ಕೊನೆಗೆ ಊಬರ್ ಬುಕ್ ಮಾಡಿ ಮನೆ ಸೇರಿಕೊಂಡೆ. ನಂತರ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದೆ. ಪೊಲೀಸ್ ಅಧಿಕಾರಿ ನನ್ನನ್ನು ಗುರುತಿಸಿ, ನೆರವಾದರು. ನನ್ನ ಅಧಿಕೃತ ಹೇಳಿಕೆ ದಾಖಲಿಸಿದ ನಂತರ ಈ ಟ್ವೀಟ್ ಗಳನ್ನು ಡಿಲೀಟ್ ಮಾಡಿದೆ ಎಂದು ಪಾಟೀಲ್ ವಿವರಿಸಿದರು.




