ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ವಿರುದ್ಧದ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ.
ಸ್ಯಾಂಟ್ರೋ ರವಿ ವಿರುದ್ದದ ಅತ್ಯಾಚಾರ, ವೇಶ್ಯಾವಾಟಿಕೆ, ವರ್ಗಾವಣೆ ದಂಧೆ ಪತ್ನಿಗೆ ವಂಚನೆ ಇನ್ನಿತರ ಪ್ರಕರಣಗಳು ಸಂಬಂಧಿಸಿದ ದೂರುಗಳನ್ನು ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.
ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ಜವಾಬ್ದಾರಿಯನ್ನ ಸಿಐಡಿಗೆ ವರ್ಗಾಯಿಸಲಾಗಿದ್ದು ಎಲ್ಲಾ ಅಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಂಚನೆ ಸಂಬಂಧಿಸಿದಂತೆ ಪತ್ನಿ ನೀಡಿದ ದೂರು ನಗರದಲ್ಲಿ ಬಂದಿರುವ ದೂರು ಆರೋಪಗಳು ಸೇರಿದಂತೆ ಎಲ್ಲವನ್ನೂ ಕ್ರೂಢಿಕರಿಸಿ ಸಿಐಡಿ ಅಧಿಕಾರಿಗಳು ಸ್ಯಾಂಟ್ರೋ ರವಿಯನ್ನು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ವಂಚನೆಗೆ ಸಂಬಂಧಿಸಿದಂತೆ ಪತ್ನಿ ನೀಡಿದ ದೂರಿನ ಬೆನ್ನಲ್ಲೇ ಒಂದರಿಂದ ಒಂದರಂತೆ ಆರೋಪಿಗಳು ಕೇಳಿಬಂದ ಬಳಿಕ ಬಂಧನ ಭೀತಿಯಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಕಳೆದ ಜ.13ರಂದು ರಾಜ್ಯ ಪೊಲೀಸರು ಪತ್ತೆ ಮಾಡಿ ಬಂಧಿಸಿ ಮೈಸೂರಿಗೆ ಕರೆತಂದಿದ್ದರು.
14 ದಿನ ನ್ಯಾಯಾಂಗ ಬಂಧನ: ಪ್ರಾಥಮಿಕ ವಿಚಾರಣೆ ನಡೆಸಿ ಜ.14ರಂದು
ಬಿಗಿ ಭದ್ರತೆಯಲ್ಲಿ ಮೈಸೂರಿನ ವಿಜಯನಗರ ಠಾಣೆಯಿಂದ ವಿವಿ ಮೊಹಲ್ಲಾದಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಸ್ಯಾಂಟ್ರೋ ರವಿಯನ್ನು ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರು, ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದರು.
ಅಲ್ಲಿಂದ ಸ್ಯಾಂಟ್ರೋ ರವಿಯನ್ನು ವಶಕ್ಕೆ ತೆಗೆದುಕೊಂಡಿರುವ ಮೈಸೂರು ಪೊಲೀಸರು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.
ಹಲವು ಪ್ರಕರಣ: ಮಂತ್ರಾಲಯಕ್ಕೆ ಬಂದಿದ್ದ ಸ್ಯಾಂಟ್ರೋ ರವಿ ಆಪ್ತ ಲಷ್ಮಿತ್ ಅಲಿಯಾಸ್ ಚೇತನ್ ನನ್ನು ರಾಯಚೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತ ನೀಡಿದ ಮಾಹಿತಿಯನ್ನು ಆಧರಿಸಿ ಗುಜರಾತ್ ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು
ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು.
ಸ್ಯಾಂಟ್ರೋ ಟ ರವಿ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಐಪಿಸಿ 506 (ಉದ್ದೇಶಪೂರ್ವಕ ಅವಹೇಳನ, ಮನಶಾಂತಿ ಕೆಡಿಸುವ ಪ್ರಯತ್ನ), 504 (ಕ್ರಿಮಿನಲ್ ಪಿತೂರಿ), 376 (ಅತ್ಯಾಚಾರ), 270 (ಪ್ರಾಣ ಹಾನಿಕರವಾದ ಸೋಂಕು ಹರಡುವ ಯತ್ನ), ಬಲವಂತದ ಗರ್ಭಪಾತ (313) ಹಾಗೂ 323 (ಹಲ್ಲೆ), 498ಎ (ಕೌಟುಂಬಿಕ ದೌರ್ಜನ್ಯ) ಅಡಿ ಪ್ರಕರಣಗಳು ದಾಖಲಾಗಿವೆ.
ಸಿಸಿಬಿಗೆ ವರ್ಗಾವಣೆ: ಸ್ಯಾಂಟ್ರೋ ರವಿಯು ಪತ್ನಿ ವಿರುದ್ಧ ಷಡ್ಯಂತ್ರ ನಡೆಸಿ ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗುವಂತೆ ಮಾಡಿರುವ ಆರೋಪವಿದೆ. ಪ್ರಕರಣದಲ್ಲಿ ಈಗಾಗಲೇ ಕಾಟನ್ ಪೇಟೆ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಪ್ರವೀಣ್ ಅಮಾನತ್ತಾಗಿದ್ದು ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು ಅದನ್ನು ಕೂಡ ಸಿಐಡಿ ಅಧಿಕಾರಿಗಳು ನಡೆಸಲಿದ್ದಾರೆ.
ಸ್ಯಾಂಟ್ರೋ ರವಿ ವೇಶ್ಯಾವಾಟಿಕೆಯಿಂದ ಹಿಡಿದು ವರ್ಗಾವಣೆ ದಂಧೆವರೆಗೆ ಪಳಗಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ ಬಗ್ಗೆ ವಿಚಾರಣೆ ನಡೆಯಲಿದೆ.
ಈತನ ಮೇಲೆ 1995ರಿಂದ ಇಲ್ಲಿಯವರೆಗೆ ಮೈಸೂರು, ಬೆಂಗಳೂರು, ಮಂಡ್ಯ ಮೊದಲಾದ ಕಡೆ 22 ಪ್ರಕರಣಗಳು ದಾಖಲಾಗಿವೆ. 2005ರಲ್ಲಿ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲಿಗೆ ಹೋಗಿ ಬಂದಿದ್ದ. ಈತನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಜೈಲಿನಲ್ಲಿರುವಾಗಲೇ ಹಲವಾರು ಪಾತಕಿಗಳ ಸಂಪರ್ಕ ಬೆಳೆಸಿಕೊಂಡು. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ, ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ ಬಗೆಗಿನ ವಿಚಾರಣೆ ನಡೆಯಲಿದೆ.



