ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್

5 days ago

72,000 ಕೋಟಿ ರೂಪಾಯಿಗಳ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದು ಡಾ. ಮನಮೋಹನ್ ಸಿಂಗ್.

2008ನೇ ಇಸವಿಯಲ್ಲಿ ದೇಶದಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ, ಅಂದು ಪ್ರಧಾನಿಗಳಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಮಾಡಿದ್ದ 72,000 ಕೋಟಿ ರೂಪಾಯಿಯ  ಸಾಲವನ್ನು ಮನ್ನಾ ಮಾಡಿ ರೈತರಿಗೆ ಸಂಕಷ್ಟದ ಸಮಯದಲ್ಲಿ ನೆರವು ನೀಡಿದರು.

ಆದರೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಅವರು, 2014 ರಿಂದ ಇಲ್ಲಿಯ ತನಕ 12 ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಒಂದೇ ಒಂದು ಬಾರಿಯೂ ರೈತರ ಸಾಲವನ್ನು ಮನ್ನಾ ಮಾಡುವ ಯೋಚನೆಯನ್ನು ಮಾಡಿಲ್ಲ.

ಡಾ.ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈಗ ಇರುವ ರೀತಿಯ ಅಪಾರ ಪ್ರಮಾಣದ ಜಿಎಸ್‌ಟಿ ತೆರಿಗೆ ಸಂಗ್ರಹಣದ ವ್ಯವಸ್ಥೆಯು ಇರಲಿಲ್ಲ. ಆದರೂ ಇದ್ದಂತಹ ಸಂಪನ್ಮೂಲಗಳ ಅಡಿಯಲ್ಲಿಯೇ ರೈತರ ಸಾಲವನ್ನು ಮನ್ನಾ ಮಾಡಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಐವತ್ತು ಸಾವಿರ ರೂಪಾಯಿ ಒಳಗಿನ ರೈತರ ಸಾಲವನ್ನು ಮನ್ನಾ ಮಾಡಿದರು. ತದನಂತರ 2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಾಯಿತು.

ರೈತರ ಸಾಲ ಮನ್ನಾ ಮಾಡಿ ಎಂದು ಸದನದಲ್ಲಿ ಮಾತನಾಡುವ ಬಿಜೆಪಿ ನಾಯಕರು ಮೊದಲು ಕೇಂದ್ರದ ಸರ್ಕಾರದ ಮೇಲೆ ಒತ್ತಡವನ್ನು ತಂದು ರಾಷ್ಟ್ರೀಯ ಬ್ಯಾಂಕುಗಳಲ್ಲಿ ರೈತರ ಸಾಲವನ್ನು ಡಾ. ಮನಮೋಹನ್ ಸಿಂಗ್ ರವರ ರೀತಿಯಲ್ಲಿ ಮನ್ನಾ ಮಾಡಲು ತಿಳಿಸಿ.

ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ವಿರೋಧಪಕ್ಷಗಳು ಮನವಿ ಮಾಡಿದಾಗ, ನಮ್ಮಲ್ಲಿ ನೋಟು ಪ್ರಿಂಟ್ ಮಾಡುವ ಮಿಷನ್ ಗಳಿಲ್ಲ ಎಂದು ಸಾಲ ಮನ್ನಾ ಮಾಡುವ ವಿಚಾರದಲ್ಲಿ ಹಾರಿಕೆ ಉತ್ತರವನ್ನು ನೀಡಿದ್ದರು.

ರೈತರ ಬಗ್ಗೆ ಅಪಾರವಾದ ಕಾಳಜಿ ಇರುವ ರೀತಿಯಲ್ಲಿ ಮಾತನಾಡುವ ಬಿಜೆಪಿ ನಾಯಕರು ಗೊಬ್ಬರವನ್ನ ಕೇಳಿದ ರೈತರ ಮೇಲೆ ಹಾವೇರಿಯಲ್ಲಿ ಗೋಲಿಬಾರ್ ಮಾಡಿದ್ದನ್ನು ಇನ್ನೂ ಯಾರೂ ಮರೆತಿಲ್ಲ.

ರೈತರ ಬಗ್ಗೆ ಕೇವಲ ಮಾತನಾಡುವುದಲ್ಲ .ಕೇಂದ್ರ ಸರಕಾರದಿಂದ ರಾಜ್ಯಕ್ಕೆ ವಿವಿಧ ಮೂಲಗಳಿಂದ ಬರಬೇಕಾಗಿರುವ ಬಾಕಿ ಮೊತ್ತವನ್ನು ಕೊಡಿಸುವಂತಹ ಕೆಲಸವನ್ನು ಮೊದಲು ಮಾಡಿ.

ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಯಾವುದೇ ರೀತಿಯ ಹೆಚ್ಚಿನ ಅನುದಾನವನ್ನು ಅಥವಾ ನ್ಯಾಯ ಸಮ್ಮತವಾಗಿ ನಮಗೆ ಕೊಡಬೇಕಾದ ಅನುದಾನವನ್ನು ಕೊಡಿಸುವಲ್ಲಿ ಪ್ರಯತ್ನವನ್ನೇ ಮಾಡದೆ, ಕೇವಲ ಮಾತನಾಡುವುದೇ ಬಿಜೆಪಿಯವರ ಹವ್ಯಾಸವಾಗಿದೆ.

ಬೆಂಗಳೂರು ನಗರಕ್ಕೆ ಕಳೆದ 12 ವರ್ಷದಲ್ಲಿ ಕೇಂದ್ರದಿಂದ ಯಾವುದೇ ಹೆಚ್ಚಿನ ನೆರವು, ವಿಶೇಷ ಕಾರ್ಯಕ್ರಮಗಳ ಅಡಿಯಲ್ಲಿ ಬಂದಿರುವುದಿಲ್ಲ. ಮೆಟ್ರೋ ಯೋಜನೆ ಅಡಿಯಲ್ಲಿ ಅನ್ಯ ರಾಜ್ಯಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಪಾಲನ್ನು ಕೊಡುವ ಕೇಂದ್ರ ಸರ್ಕಾರ, ಬೆಂಗಳೂರು ನಗರದ ಅಭಿವೃದ್ಧಿಗೆ ಯಾವ ಕೊಡುಗೆಯನ್ನು ಕೊಟ್ಟಿಲ್ಲ. ಇನ್ನು ಬೆಂಗಳೂರು ನಗರದ ಲೋಕಸಭಾ ಸದಸ್ಯರು ಕೇಂದ್ರದಿಂದ ಯಾವುದೇ ಹೊಸ ಯೋಜನೆಯನ್ನು ಅಥವಾ ಹೊಸ ಅನುದಾನವನ್ನ ತರುವಂತಹ ಶಕ್ತಿ ಇಲ್ಲದಿದ್ದರೂ, ಎಲ್ಲದಕ್ಕೂ ವಿರೋಧ ಮಾಡುವುದು, ಎಲ್ಲ ಯೋಜನೆಗಳಿಗೂ ಅಡ್ಡಿಪಡಿಸುವುದು, ಎಲ್ಲ ವಿಚಾರದಲ್ಲೂ ರಾಜಕಾರಣವನ್ನು ಮಾಡುತ್ತಾ, ಜನರಲ್ಲಿ ಸುಳ್ಳು ಮಾಹಿತಿಯನ್ನು ಕೊಟ್ಟು ತಮ್ಮ ನಾಯಕತ್ವವನ್ನ ಬೆಳೆಸಿಕೊಳ್ಳುವಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿಯವರು ಮಂತ್ರಕ್ಕಿಂತ ಉಗುಳು ಹೆಚ್ಚು ಎನ್ನುವ ರೀತಿಯಲ್ಲಿ, ಯಾವ ಅನುದಾನವನ್ನು ಕೇಂದ್ರದಿಂದ ಕೊಡಿಸದಿದ್ದರೂ ಮಾತನಾಡುವುದಕ್ಕೆ ಏನು ಕಡಿಮೆ ಇಲ್ಲ. ಕೇವಲ ಉಪದೇಶ, ಸಲಹೆಗಳು, ಬೇಕಿಲ್ಲ. ಮೊದಲು ರಾಜ್ಯದ ಜನರ ಮೇಲೆ ಕಾಳಜಿ ಇದ್ದರೆ ಇಷ್ಟೊಂದು ಜನ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಇರುವ ಬಿಜೆಪಿಯವರು ಮೊದಲು ಕೇಂದ್ರದ ಮೇಲೆ ಒತ್ತಡವನ್ನು ತಂದು ರಾಜ್ಯ ಸರ್ಕಾರ ಕಟ್ಟುವ ಜಿಎಸ್‌ಟಿಯ ಪ್ರಮಾಣಕ್ಕೆ ಅನುಗುಣವಾಗಿ, ನಮ್ಮ ಪಾಲನ್ನು ತಂದುಕೊಟ್ಟು ನಂತರ ಸಲಹೆ ಉಪದೇಶವನ್ನು ಕೊಡಲು ಮುಂದಾಗಿ.

ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ, ಸಾಲದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಮೊದಲು, ದೇಶದ ಸಾಲದ ಪ್ರಮಾಣದ ಬಗ್ಗೆ ಮಾತನಾಡಿ. 2014ರಲ್ಲಿ ಈ ದೇಶದ ಸಾಲ 57 ಲಕ್ಷ ಕೋಟಿ ಇತ್ತು. ಇಂದು ದೇಶದ ಸಾಲದ ಮೊತ್ತ 200 ಲಕ್ಷ ಕೋಟಿಯನ್ನು ದಾಟಿದೆ. ಸಾಲದ ಮಿತಿಯು ಮೀರಿ ಬೆಳೆಯುತ್ತಿದೆ. ರಾಜ್ಯದಲ್ಲಿರುವ ಬಿಜೆಪಿಯ ಆರ್ಥಿಕ ತಜ್ಞರು, ಮೊದಲು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ಕೊಟ್ಟು ಸಾಲದ ಪ್ರಮಾಣವನ್ನ ಇಳಿಸಲು ಮತ್ತು ಮಾಡಿರುವ ಸಾಲವನ್ನು ತೀರಿಸಲು ಸೂಕ್ತವಾದಂತಹ ಮಾರ್ಗದರ್ಶನವನ್ನು ಮಾಡುವುದು ಹೆಚ್ಚು ಅವಶ್ಯಕತೆ ಇದೆ.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply