ಪ್ರಧಾನಿ Narendra Modi ಅವರೇ, ಎದೆ ಮೇಲೆ ಕೈಯಿಟ್ಟು ಆತ್ಮಸಾಕ್ಷಿಗೆ ಕಿವಿಕೊಟ್ಟು ಹೇಳಿ, ನೀವು ನಿಜವಾಗಿ ರೈತರ ಹಿತೈಷಿಗಳಾ? ಹಿತಶತ್ರುಗಳಾ? ರೈತರ ಪಾಲಿನ ಮರಣ ಶಾಸನದಂತಿದ್ದ ಕೃಷಿ ಕ್ಷೇತ್ರದ ಐದು ಕರಾಳ ಕಾಯ್ದೆಗಳನ್ನು ಬಲವಂತವಾಗಿ ಜಾರಿಗೊಳಿಸಲು ಪ್ರಯತ್ನಿಸಿದವರು ಯಾರು? ಮಳೆ-ಚಳಿ-ಗಾಳಿಯನ್ನು ಲೆಕ್ಕಿಸದೆ ಪ್ರತಿಭಟನೆಗಿಳಿದ ರೈತರು ದೆಹಲಿಗೆ ಬರದಂತೆ ರಸ್ತೆ ಮೇಲೆ ಮುಳ್ಳು ನೆಟ್ಟು, ಗುಂಡಿ ತೋಡಿ ಹಿಂದಕ್ಕೆ ಓಡಿಸುವ ಕುಟಿಲ ಕಾರಸ್ತಾನಗಳನ್ನು ಮಾಡಿದ್ದು ಯಾರು?
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಲ್ಲಿ ಸುಮಾರು 700 ಅಮಾಯಕರು ಪೊಲೀಸರ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಾಗ ಕನಿಷ್ಠಾ ಸಂತಾಪವನ್ನೂ ಸೂಚಿಸದ ನಿಮಗೆ ರೈತರ ಸಮ್ಮಾನ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?
ನಮ್ಮ ರಾಜ್ಯದಲ್ಲಿ ನೆರೆ ಬಂದಾಗ ಬರಲಿಲ್ಲ, ಬರ ಬಿದ್ದಾಗ ಬರಲಿಲ್ಲ, ಬೆಳೆ ಕಳೆದುಕೊಂಡ ಬರಗಾಲ ಪೀಡಿತ ಪ್ರದೇಶದ ರೈತರಿಗೆ ಪರಿಹಾರ ನೀಡಲಿಲ್ಲ. ನಾನೇ ಖುದ್ದಾಗಿ ದೆಹಲಿಗೆ ಬಂದು ಭೇಟಿ ಮಾಡಿ ಮನವಿ ಕೊಟ್ಟರೂ ಇಲ್ಲಿಯ ವರೆಗೆ ಪೈಸೆ ಹಣ ನೀಡಿಲ್ಲ. ಈ ರೀತಿಯ ರೈತ ವಿರೋಧಿ ಧೋರಣೆ ಇಟ್ಟುಕೊಂಡ ನೀವು ಚುನಾವಣೆಯ ಕಾಲದಲ್ಲಿ ಮಾತ್ರ ತಪ್ಪದೆ ಹಾಜರಾಗಿ ರೈತರ ಪರ ಪ್ರೀತಿ-ಕಾಳಜಿಯ ಮಳೆ ಸುರಿಸಿದರೆ ರಾಜ್ಯದ ರೈತರು ನಿಮ್ಮನ್ನು ನಂಬುತ್ತಾರೆ ಎಂದು ತಿಳಿದುಕೊಂಡಿದ್ದಿರಾ?
ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನನ್ನಾಗಿ ಮಾಡಬೇಕೆಂಬ ರೈತರ ಬೇಡಿಕೆಯನ್ನು ಇನ್ನೂ ಈಡೇರಿಸಲು ನೀವು ಸಿದ್ಧರಿಲ್ಲ. ರಸಗೊಬ್ಬರದ ಬೆಲೆಯನ್ನು ಏರಿಸುತ್ತಲೇ ಇದ್ದೀರಿ, ಬೀಜ-ಗೊಬ್ಬರಗಳ ಮೇಲೆ ಜಿಎಸ್ಟಿ ಹೇರಿಕೆ ಮಾಡಿದ್ದೀರಿ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರ ಭೂಮಿಯನ್ನು ಕಾರ್ಪೋರೇಟ್ ಕುಳಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸಿರುವ ನಿಮ್ಮನ್ನು ಯಾವ ರೈತ ತಮ್ಮ ಹಿತಚಿಂತಕ ಎಂದು ನಂಬುತ್ತಾರೆ ಹೇಳಿ?
ನಿಮ್ಮ Bharatiya Janata Party (BJP) ಪಕ್ಷ ಹುಟ್ಟಿನಿಂದಲೇ ರೈತ ವಿರೋಧಿ. ಅದು ಬಂಡವಾಳಿಗರು, ಉದ್ಯಮಿಗಳು ಮತ್ತು ವರ್ತಕರ ಪಕ್ಷ. ಈ ಪಕ್ಷದ ಡಿಎನ್ಎ ನಲ್ಲಿಯೇ ರೈತ ವಿರೋಧಿ ವಿಷ ಇದೆ. ನರೇಂದ್ರ ಮೋದಿ ಅವರೇ? ನೀವು ಪ್ರಧಾನಿಯಾದ ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದ ರೈತರಿಗೆ ನೀವು ನೀಡಿರುವ ಕೊಡಗೆ ಏನು? ಕಾವೇರಿ-ಕೃಷ್ಣ ನದಿನೀರು ಹಂಚಿಕೆಯಲ್ಲಿ ದ್ರೋಹ, ಮಹದಾಯಿ-ಮೇಕೆದಾಟು ಯೋಜನೆಗಳಲ್ಲಿ ಮೋಸ, ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ನೀಡುವ ಭರವಸೆ ನೀಡಿ ವಂಚನೆ, ಬರಪರಿಹಾರಕ್ಕೆ ಹಣ ನೀಡಲು ನಿರಾಕರಣೆ. ಇದೇನಾ ನಿಮ್ಮ ರೈತ ಪ್ರೀತಿ? ಇದೇನಾ ಕಿಸಾನ್ ಸಮ್ಮಾನ್?
ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಪಕ್ಷದ ರಾಜ್ಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳೊಳಗೆ ಹಾವೇರಿಯಲ್ಲಿ ಬೀಜ-ಗೊಬ್ಬರ ಕೇಳಿದ ರೈತರಿಗೆ ಗುಂಡಿಟ್ಟು ಸಾಯಿಸಿದರು. ಸಾಲ ಮನ್ನಾ ಮಾಡಿ ಎಂದು ರೈತರು ಕೇಳಿದರೆ “ನಾನೇನು ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದೇನಾ?” ಎಂದು ವಿಧಾನಮಂಡಲದಲ್ಲಿ ಕೇಳಿದ್ದರು. ಇದೇನಾ ನಿಮ್ಮ ಪಕ್ಷದ ರೈತರ ಬಗೆಗಿನ ಕಾಳಜಿ?
ರಾಜ್ಯದಲ್ಲಿ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ತಿದ್ದುಪಡಿ, ಭೂಸುಧಾರಣಾ ಕಾಯ್ದೆಗೂ ತಿದ್ದುಪಡಿ ತರುವ ಪ್ರಯತ್ನ ಮಾಡಿತ್ತು. ಇದೇನಾ ನಿಮ್ಮ ರೈತ ಪರ ಸರ್ಕಾರ?
2017ರಲ್ಲಿಯೂ ರಾಜ್ಯದಲ್ಲಿ ಬರಗಾಲ ಇತ್ತು. ಇದರಿಂದ ಕಷ್ಟ-ನಷ್ಟಕ್ಕೀಡಾಗಿದ್ದ ರೈತರನ್ನು ರಕ್ಷಿಸಲಿಕ್ಕಾಗಿ ನಾನು ರೈತರ 50,000 ರೂಪಾಯಿ ವರೆಗಿನ ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದ್ದೆ. ಇದರಿಂದ ರಾಜ್ಯದ 22.27 ಲಕ್ಷ ರೈತರ ರೂ. 8,165 ಕೋಟಿಯಷ್ಟು ಸಾಲ ಮನ್ನಾ ಆಗಿದೆ.
ತಾವು ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಸಹಕಾರಿ ಬ್ಯಾಂಕುಗಳು ಮಾತ್ರವಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಂದು ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ತೀರ್ಮಾನ ಕೈಗೊಳ್ಳುತ್ತೇವೆ ಎಂದು 2018ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಡುಗಡೆ ಮಾಡಿದ್ದ ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದ ಬಿಜೆಪಿ ಘೋಷಿಸಿತ್ತು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಡಬಲ್ ಎಂಜಿನ್ ಸರ್ಕಾರ ಕೊನೆಗೂ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡಲಿಲ್ಲ. ನರೇಂದ್ರ ಮೋದಿ ಅವರೇ ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿದೆ? ಯಾವ ರೈತ ಸಮ್ಮಾನದ ತುತ್ತೂರಿ ಊದುತ್ತಿದ್ದೀರಿ ನೀವು?
ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ 76,000 ಕೋಟಿ ರೂಪಾಯಿಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಿತ್ತು. ಆದರೆ ನೀವು ನಿಮ್ಮ ಸ್ನೇಹಿತರಾದ ವಂಚಕ ಉದ್ಯಮಿಗಳಿಗೆ ಸೇರಿರುವ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದಿರಿ. ಆದರೆ ಅದೇ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕೆಂದು ನಿಮಗೆ ಅನಿಸಲೇ ಇಲ್ಲವೇ?
ರೈತ ಚಳುವಳಿಯ ತವರು ಕರ್ನಾಟಕ. ನಮ್ಮ ರೈತರು ಪ್ರಜ್ಞಾವಂತರಿದ್ದಾರೆ. ಯಾರು ರೈತರ ಹಿತಶತ್ರುಗಳು? ಯಾರು ರೈತರ ಹಿತಚಿಂತಕರು ಎನ್ನುವುದನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಜ್ಞಾವಂತಿಕೆ ಅವರಿಗೆ ಇದೆ. ಈ ಚುನಾವಣೆಯಲ್ಲಿ ರೈತ ವಿರೋಧಿಗಳಿಗೆ ಅವರು ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ನಮಗಿದೆ.
– ಸಿದ್ದರಾಮಯ್ಯ, ಸಿಎಂ



