ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್

2 hours ago

ಬಳ್ಳಾರಿ: ಮತದಾರರ ಪಟ್ಟಿಯಲ್ಲಿನ ಅಕ್ರಮಗಳು, ಮತದಾರರ ಹಕ್ಕುಗಳ ರಕ್ಷಣೆ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಂದು ಬಳ್ಳಾರಿಯ ಖಾಸಗಿ ಹೋಟೆಲ್‌ವೊಂದರಲ್ಲಿ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್, ರಾಜ್ಯದಲ್ಲಿ ಸುಮಾರು 80% ಜನರು ಮತದಾನದ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ಕಳ್ಳರು ಊರಿನ ಹೊರಭಾಗದಲ್ಲಿದ್ದ ಬಣವೆಗೆ ಬೆಂಕಿ ಹಚ್ಚಿ, ಜನರು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿರುವ ಸಂದರ್ಭದಲ್ಲಿ ಊರಿನ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಅದೇ ರೀತಿಯಲ್ಲಿ ಜನರ ಗಮನವನ್ನು ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

“ಸಾಯದೆ ಇರುವವರನ್ನು ಯಾಕೆ ಕೊಲೆ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ ಅವರು, ಹರಿಯಾಣ, ದೆಹಲಿ, ಮಹಾರಾಷ್ಟ್ರ ಮತ್ತು ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿದಾಗ ಅದಕ್ಕೆ ಉತ್ತರ ನೀಡುವ ಬದಲು, ಚುನಾವಣಾ ಆಯೋಗದ ಕಚೇರಿಗೆ ಬೆಂಕಿ ಬಿದ್ದಿರುವಂತಹ ಘಟನೆಗಳ ಬಗ್ಗೆ ಚರ್ಚೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆ ಎಂದರು.

ಮಾಧ್ಯಮಗಳು, ದೊಡ್ಡ ದೊಡ್ಡ ಸಿನಿಮಾ ನಟರು ಹಾಗೂ ಅಧಿಕಾರಿಗಳನ್ನು ವ್ಯವಸ್ಥೆಯ ಪ್ರಭಾವಕ್ಕೆ ಒಳಪಡಿಸಲಾಗುತ್ತಿದೆ. ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ಅಗತ್ಯವಿದೆ ಎಂದರು.

ಚುನಾವಣಾ ಆಯೋಗದ ಮುಖ್ಯಸ್ಥರ ಕುರಿತು ಮಾತನಾಡಿದ ಅವರು, “ಗುಲಾಮಗಿರಿ ಮಾಡಬೇಕಾದರೆ ಮಾಡಿ, ಆದರೆ ಆಯೋಗದ ಗೌರವ ಮತ್ತು ಸ್ವಾಯತ್ತತೆಯನ್ನು ಕಾಪಾಡಿ” ಎಂದರು.

ಭಾರತದ ಭಾವಿ ಪ್ರಜೆಗಳು ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳುವುದನ್ನು ನಿಲ್ಲಿಸಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ನಾಗರಿಕರು ಹಲವು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಸಂದರ್ಭದಲ್ಲೂ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವುದು ಅತ್ಯಂತ ಮುಖ್ಯ ಎಂದರು.

‘ಫಾರಂ-7 ಎನ್ನುವುದು ಆಪರೇಷನ್ ಕಮಲದ ಭಾಗವಾಗಿದೆ ಎಂದು ಆರೋಪವನ್ನು ಸಹ ಅವರು ಮಾಡಿದರು. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು ಎಂದು ಆಗ್ರಹಿಸಿದರು.

ಅನಾಥಾಶ್ರಮಗಳಲ್ಲಿರುವ ಯುವಕರ ಮತದಾನದ ಹಕ್ಕಿನ ಪ್ರಶ್ನೆ: ಕಾರ್ಯಕ್ರಮದಲ್ಲಿ ಮಾತನಾಡಿದ ವೀರ ಸಂಗಯ್ಯ, ಭಾರತದಲ್ಲಿ ನೋಂದಾಯಿತವಾಗಿ ಕಾರ್ಯನಿರ್ವಹಿಸುತ್ತಿರುವ ಅನಾಥಾಶ್ರಮಗಳಲ್ಲಿರುವ ಯುವಕರ ಮತದಾನದ ಹಕ್ಕಿನ ಕುರಿತು ಚುನಾವಣಾ ಆಯೋಗ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಅನಾಥಾಶ್ರಮಗಳಲ್ಲಿ ಬೆಳೆಯುತ್ತಿರುವ ಯುವಕರು ಮತದಾನದ ವಯಸ್ಸಿಗೆ ಬಂದಾಗ, ಮತದಾರರ ನೋಂದಣಿಗೆ ಅಗತ್ಯವಿರುವ ತಂದೆ-ತಾಯಿಯ ಹೆಸರು ಸೇರಿದಂತೆ ದಾಖಲೆಗಳನ್ನು ಅವರು ಎಲ್ಲಿಂದ ತರಬೇಕು? ಈ ಕುರಿತು ಚುನಾವಣಾ ಆಯೋಗದ ಬಳಿ ಸ್ಪಷ್ಟ ವ್ಯವಸ್ಥೆ ಇದೆಯೇ? ಎಂದು ಪ್ರಶ್ನಿಸಿದರು.

ತಂದೆ-ತಾಯಿಯ ಮಾಹಿತಿ ಅಥವಾ ನಿರ್ದಿಷ್ಟ ದಾಖಲೆಗಳ ಕೊರತೆಯಿಂದಾಗಿ ಯಾವುದೇ ಅರ್ಹ ಯುವಕನ ಮತದಾನದ ಹಕ್ಕು ಕಳೆದುಹೋಗಬಾರದು. ಇಂತಹ ನಾಗರಿಕರನ್ನು ಅಜ್ಞಾನಿಗಳು ಅಥವಾ ದಾಖಲೆಗಳಿಲ್ಲದವರು ಎಂದು ಪರಿಗಣಿಸದೆ, ಅವರ ಮತದಾನದ ಹಕ್ಕನ್ನು ಖಚಿತಪಡಿಸಲು ಚುನಾವಣಾ ಆಯೋಗ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವಿಕೆ ಹಾಗೂ ಆಕ್ಷೇಪಣೆಗಳ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿರುವ ಮತದಾನದ ಹಕ್ಕನ್ನು ರಕ್ಷಿಸಲು ಎಲ್ಲಾ ನಾಗರಿಕರು ಮತ್ತು ಸಂಘಟನೆಗಳು ಜಾಗೃತರಾಗಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಜನಪರ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು, ಹೋರಾಟಗಾರರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply