ಭದ್ರೆ ಬಯಲುಸೀಮೆಗೆ ಹರಿದು ಬಂದಿರುವುದು ರೈತರ ಪಾಲಿಗೆ ಹೊಸ ಆಶಾಕಿರಣ: ಅಪ್ಸರ್ ಕೊಡ್ಲಿಪೇಟೆ

2 months ago

ಚಿತ್ರದುರ್ಗ: ದಶಕಗಳಿಂದ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ನೀರಾವರಿ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಬಯಲುಸೀಮೆಯ ಜನರ ಪಾಲಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿದು ಬಂದಿರುವುದು ಅತ್ಯಂತ ಸಂತಸದ ಹಾಗೂ ಐತಿಹಾಸಿಕ ಬೆಳವಣಿಗೆಯಾಗಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹರ್ಷ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ನಾಯಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭದ್ರಾ ಜಲಾಶಯದಿಂದ ಬಯಲುಸೀಮೆಯತ್ತ ನೀರು ಹರಿಯಲು ಆರಂಭವಾಗಿರುವುದು ಕೇವಲ ಒಂದು ಯೋಜನೆಯ ಅನುಷ್ಠಾನವಲ್ಲ; ಹಲವು ದಶಕಗಳಿಂದ ರೈತರು ಹಾಗೂ ಜನಸಾಮಾನ್ಯರು ನಡೆಸಿಕೊಂಡು ಬಂದ ಹೋರಾಟ, ನಿರಂತರ ಒತ್ತಾಯ ಮತ್ತು ನೀರಿಗಾಗಿ ಕಾಯುತ್ತಿದ್ದ ಜನರ ನಿರೀಕ್ಷೆಗೆ ದೊರೆತ ಫಲವಾಗಿದೆ ಎಂದರು.

ಭದ್ರಾ ನೀರು ಚಿತ್ರದುರ್ಗ ಸೇರಿದಂತೆ ಬಯಲುಸೀಮೆಯ ಹಲವು ಭಾಗಗಳನ್ನು ತಲುಪುತ್ತಿರುವುದು ಈ ಭಾಗದ ಕೃಷಿ ಮತ್ತು ಜನಜೀವನದಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದೆ. ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಸೇರಿದಂತೆ ವಿವಿಧ ಭಾಗಗಳಿಗೆ ನೀರು ತಲುಪುವ ಮೂಲಕ ಕೆರೆಗಳು ತುಂಬಿದರೆ ಅಂತರ್ಜಲ ಮಟ್ಟ ಸುಧಾರಿಸಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಭದ್ರೆ ಬಯಲುಸೀಮೆಗೆ ಬಂದಿರುವ ಈ ಕ್ಷಣ ರೈತರ ಪಾಲಿಗೆ ಜಲ ಸಂಭ್ರಮದ ಕ್ಷಣ. ಆದರೆ ನೀರು ಹರಿಯುವ ಆರಂಭಿಕ ಹಂತದಲ್ಲೇ ನಿಲ್ಲದೆ, ಯೋಜನೆಯ ಸಂಪೂರ್ಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ನಿಗದಿತ ಎಲ್ಲಾ ಕೆರೆಗಳು ಹಾಗೂ ಅಚ್ಚುಕಟ್ಟು ಪ್ರದೇಶಗಳಿಗೆ ಸಮರ್ಪಕವಾಗಿ ನೀರು ತಲುಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಒತ್ತಾಯಿಸಿದರು.

ನೀರಾವರಿ ಯೋಜನೆಗಳ ಜೊತೆಗೆ ಚಿತ್ರದುರ್ಗ ಜಿಲ್ಲೆಯ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿ, ಚರಂಡಿ ಹಾಗೂ ಮಳೆನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ, ಕಸ ವಿಲೇವಾರಿ ಮತ್ತು ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದರು.

ಅದೇ ರೀತಿ ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಅಗತ್ಯ ಕಟ್ಟಡಗಳು, ಶೌಚಾಲಯ, ಕುಡಿಯುವ ನೀರು, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸೌಲಭ್ಯಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಹಿರಿಯೂರು–ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ಸರ್ಕಾರಿ ಬಸ್ಗಳನ್ನು ನಿಯೋಜಿಸಬೇಕು. ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕು. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಬೆಳಗಿನ ಹಾಗೂ ರಾತ್ರಿ ಬಸ್ ಸೇವೆಗಳನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಜಮೀರ್ ವಹಿಸಿದ್ದರು.

Leave a Reply