ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋಗೆ ಗಂಡಾಂತರ ಬರದಿರಲಿ

2 months ago

ವಿಶ್ವದಲ್ಲಿಯೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಮ್ಮೆಯ ಸಂಸ್ಥೆಯಾಗಿರುವ ಇಸ್ರೋ ಸಂಸ್ಥೆಯ ನೂರಾರು ವಿಜ್ಞಾನಿಗಳು ರಾಜೀನಾಮೆಯನ್ನು ನೀಡಿ ಹೊರ ಬರುತ್ತಿರುವುದು ಗಮನಿಸಿದಾಗ ಆತಂಕವಾಗುತ್ತದೆ. 1962ರಲ್ಲಿ ಶ್ರೇಷ್ಠ ವಿಜ್ಞಾನಿ ವಿಕ್ರಂ ಸಾರಾಭಾಯಿ ಇವರ ಶ್ರಮದಿಂದಾಗಿ, ಅಂದು ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರು ಅವರು ಬಾಹ್ಯಾಕಾಶ ಸಂಶೋಧನೆಗಾಗಿ ಸಂಸ್ಥೆಯನ್ನ ಸ್ಥಾಪಿಸಿದರು. ತದನಂತರ ಆಗಸ್ಟ್ 15 ,1969 ಶ್ರೀಮತಿ ಇಂದಿರಾ ಗಾಂಧಿ ಅವರು ಇದನ್ನು ಇಸ್ರೋ ಎಂದು ಮರುನಾಮಕರಣ ಮಾಡಿ ಇದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತಾರಗೊಳಿಸಿ, ಇದಕ್ಕೆ ಬೇಕಾದಂತಹ ಆರ್ಥಿಕ ಶಕ್ತಿಯನ್ನು ತುಂಬಿದರು.

1920ರಲ್ಲಿಯೇ ಭಾರತ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆಯ ಕನಸುಗಳನ್ನು ಕಂಡಿದ್ದರು. 1945ರಲ್ಲಿ ವಿಕ್ರಂ ಸಾರಾಭಾಯಿ ಮತ್ತು ಅನೇಕರು ಬಾಹ್ಯಾಕಾಶ ಸಂಶೋಧನೆಗಾಗಿ ಸಂಸ್ಥೆಯ ಸ್ಥಾಪನೆಯ ಕನಸುಗಳನ್ನು ಹೊತ್ತು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನ ನಡೆಸುತ್ತಿದ್ದರು. ಅಂತಿಮವಾಗಿ ನೆಹರುರವರು 1962ರಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಥಾಪಿಸಿದರು. 1962ರಿಂದ ಹಿಡಿದು ತದನಂತರ ಇಸ್ರೋ ಆಗಿ 1969ರಲ್ಲಿ ಅಸ್ತಿತ್ವಕ್ಕೆ ಬಂದ ಬಾಹ್ಯಾಕಾಶ ಸಂಸ್ಥೆ, ಅನೇಕ ಪ್ರಯೋಗಗಳು ಮತ್ತು ಸಾಧನೆಗಳ ಮೂಲಕ ಜಗತ್ತಿನ ಗಮನವನ್ನು ಸೆಳೆದಿದೆ.

ಇಸ್ರೋ ಆರ್ಯಭಟ ಮತ್ತು ಎಸ್ ಎಲ್ ವಿ 3 ಉಪಗ್ರಹಗಳನ್ನು ಉಡಾವಣೆ ಮಾಡಿ ಜಗತ್ತಿನ ಗಮನವನ್ನು ಸೆಳೆಯಿತು. ಇತ್ತೀಚಿನ ವರ್ಷಗಳಲ್ಲಿ ಮುಂದುವರಿದ ಅನೇಕ ದೇಶಗಳು ಇಸ್ರೋ ಸಂಸ್ಥೆಯ ತಜ್ಞರ ಮತ್ತು ವಿಜ್ಞಾನಿಗಳ ಸಲಹೆ, ಸಹಕಾರ, ನೆರವನ್ನು ತಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಯೋಜನೆಗಳಿಗೆ ಬಯಸುತ್ತಿದ್ದಾರೆ ಮತ್ತು ನಮ್ಮ ಇಸ್ರೋ ಮೂಲಕ ಅನೇಕ ದೇಶಗಳು ತಮ್ಮ ಉಪಗ್ರಹಗಳ ಉಡಾವಣೆಯನ್ನು ಮಾಡುತ್ತಿದ್ದಾರೆ.

ವಿಕ್ರಂ ಸಾರಾಭಾಯಿಯಂತಹ ದೊಡ್ಡ ಕನಸು ಹೊತ್ತಿದ್ದ ವಿಜ್ಞಾನಿಯ ಶ್ರಮದ ಇಸ್ರೋ, ಇಂದು ಅವನತಿಯ ಹಾದಿಯಲ್ಲಿ ಸಾಗಿರುವುದು ದುಃಖಕರವಾದ ಸಂಗತಿಯಾಗಿದೆ. ಕಳೆದ 12 ವರ್ಷದಲ್ಲಿ ಸ್ವಾತಂತ್ರ್ಯ ಬಂದ ನಂತರ ನೆಹರೂರವರು, ಇಂದಿರಾ ಗಾಂಧಿರವರು, ರಾಜೀವ್ ಗಾಂಧಿರವರು, ಡಾ.ಮನಮೋಹನ್ ಸಿಂಗ್ ರವರು, ಸ್ಥಾಪಿಸಿದಂತಹ ಅನೇಕ ಸಂಸ್ಥೆಗಳನ್ನು ಮಾರಾಟ ಮಾಡಿ ಇಲ್ಲವೇ, ಅಲ್ಲಿನ ಬಂಡವಾಳವನ್ನ ಹಿಂತೆಗೆದುಕೊಂಡು ಖಾಸಗಿ ಅವರಿಗೆ ಒಪ್ಪಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಅನೇಕ ನಿಲುವುಗಳು, ಇಂದು ಇಸ್ರೋ ಸಂಸ್ಥೆಯ ಅವನತಿಗೆ ಕಾರಣವಾಗುತ್ತಿದೆ.

ಸಂಸ್ಥೆಯಲ್ಲಿ ವಿಜ್ಞಾನಿಗಳ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ, ಸರಿಯಾದ ರೀತಿಯ ಸಹಕಾರವಿಲ್ಲದಿರುವುದು ಮತ್ತು ಸಿಬ್ಬಂದಿ ಕೊರತೆ ಹಾಗೂ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ನೇಮಕಾತಿಯಲ್ಲಿನ ನಿರ್ಲಕ್ಷ್ಯದಿಂದ, ಇರುವ ವಿಜ್ಞಾನಿಗಳಿಗೆ ಒತ್ತಡಗಳು ಹೆಚ್ಚಾಗಿ ಅನಿವಾರ್ಯವಾಗಿ ಅವರು ನಿರ್ಗಮಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅನೇಕ ವಿಚಾರಗಳನ್ನು ನಿರ್ಲಕ್ಷಿಸಿದಂತೆ ಮತ್ತು ನಮ್ಮ ಪ್ರಧಾನಮಂತ್ರಿಗಳು ಬಹಳಷ್ಟು ಪ್ರಮುಖ ಸಂಗತಿಗಳ ಬಗ್ಗೆ ಪ್ರತಿಕ್ರಿಯೆ ನೀಡದೆ ಮೌನವಾಗಿ ಇರುವಂತೆ ಇಸ್ರೋ ವಿಚಾರದಲ್ಲೂ ನಡೆದುಕೊಳ್ಳದೆ, ತುರ್ತಾಗಿ ಗಮನವನ್ನು ಹರಿಸಿ ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ.

ಇಸ್ರೋ ಸಂಸ್ಥೆಯಿಂದ ಸಂಬಳ ಮತ್ತು ಸೌಕರ್ಯದ ಕಾರಣಕ್ಕೂ ನಿರ್ಗಮಿಸುತ್ತಿರುವ ವಿಜ್ಞಾನಿಗಳು, ಒಂದು ಬಾರಿ ವಿಕ್ರಂ ಸಾರಾಭಾಯಿರವರಂತಹ, ಅಬ್ದುಲ್ ಕಲಾಂರವರಂತಹ ವ್ಯಕ್ತಿತ್ವಗಳನ್ನು ನಿಮ್ಮ ಕಣ್ಮುಂದೆ ತಂದುಕೊಂಡು, ದೇಶ ಪ್ರೇಮ ಎನ್ನುವುದು ಸೌಲತ್ತು, ಸೌಕರ್ಯ, ಸಂಬಳ ಇವುಗಳ ಮುಂದೆ ಅಂತಹ ದೊಡ್ಡ ಸಂಗತಿಯೇ? ಎನ್ನುವ ವಿಚಾರವನ್ನು, ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವಿವೇಚಿಸಿಕೊಂಡು ನಿರ್ಧರಿಸಿ.

ಇಲ್ಲಿನ ವಿಜ್ಞಾನಿಗಳಿಗೆ ಬೇರೆಬೇರೆ, ದೇಶದ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಹೆಚ್ಚಿನ ಮೊತ್ತವನ್ನು ನೀಡಬಹುದು. ಆದರೆ ನೀವೆಲ್ಲರೂ ಇಂದು ಅನ್ಯರು ಗುರುತಿಸುವ ರೀತಿಯಲ್ಲಿ ಬೆಳೆದದ್ದು, ಬೆಳೆಯಲು, ಕಾರಣವಾದದ್ದು ಈ ಸಂಸ್ಥೆ ಮಾಡಿಕೊಟ್ಟ ಅನುಕೂಲತೆಗಳಿಂದ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿರಿ.

ಕಳೆದ 12 ವರ್ಷದಲ್ಲಿ ನೂರಾರು ಸಂಸ್ಥೆಗಳು ಮಣ್ಣು ಪಾಲಾಗಿದೆ. ಉಳಿದುಕೊಂಡಿರುವ ಬೆರಳೆಣಿಕೆಯಷ್ಟು ಸಂಸ್ಥೆಗಳನ್ನಾದರು ಉಳಿಸಿ. ಕೇವಲ ಭಾಷಣ ಮತ್ತು ಘೋಷಣೆಗಳಿಗೆ ನಿಮ್ಮ ಆಡಳಿತಗಳು ಸೀಮಿತವಾಗಬಾರದು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply