ಬೆಂಗಳೂರು: ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಶಕ್ತಿಯಿಂದಲೇ ಇಂದು ನಾನು ಮುಖ್ಯಮಂತ್ರಿಯಾಗಿ ಜನಸೇವೆ ಮಾಡಲು ಸಾಧ್ಯವಾಗಿದೆ. ಅವರು ಕೇವಲ ದಲಿತರ ನಾಯಕರಲ್ಲ, ಇಡೀ ಜಗತ್ತಿಗೇ ದಾರಿದೀಪವಾದ ವಿಶ್ವನಾಯಕ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನ ಮತ್ತು ಸಾಮಾಜಿಕ ವಾಸ್ತವ: 1950ರಲ್ಲಿ ಸಂವಿಧಾನ ಜಾರಿಗೆ ಬಂದಾಗ ಅಂಬೇಡ್ಕರ್ ಅವರು ಹೇಳಿದ್ದ ‘ವೈರುಧ್ಯಗಳ ಸಮಾಜ’ದ ಬಗ್ಗೆ ಸ್ಮರಿಸಿದ ಸಿಎಂ, ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ ಎಂಬ ತತ್ವದ ಮೇಲೆ ನಮ್ಮ ಪ್ರಜಾಪ್ರಭುತ್ವ ನಿಂತಿದೆ. ಆದರೆ ಸಂವಿಧಾನ ಜಾರಿಯಾಗಿ 76 ವರ್ಷಗಳಾದರೂ ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಪೂರ್ಣ ಮೌಲ್ಯ ಬರುತ್ತದೆ ಎಂದರು.
ಬಿಜೆಪಿ-ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ: ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ನಿಲುವುಗಳನ್ನು ಕಟುವಾಗಿ ಟೀಕಿಸಿದ ಮುಖ್ಯಮಂತ್ರಿಗಳು ಕೆಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದರು:
ಸುಳ್ಳು ಪ್ರಚಾರ: ಚುನಾವಣೆಯಲ್ಲಿ ಅಂಬೇಡ್ಕರ್ ಅವರ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಕಮ್ಯುನಿಷ್ಟ್ ಪಕ್ಷದ ಎಸ್.ಎ. ಡಾಂಗೆ ಮತ್ತು ಹಿಂದುತ್ವವಾದಿ ನಾಯಕ ವಿ.ಡಿ. ಸಾರ್ವರ್ಕರ್ ಅವರೇ ಅಂಬೇಡ್ಕರ್ ಸೋಲಿಗೆ ಕಾರಣ ಎಂದು ಸ್ವತಃ ಬಾಬಾಸಾಹೇಬರೇ ಬರೆದುಕೊಂಡಿದ್ದಾರೆ ಎಂದರು.
ಇತಿಹಾಸದ ನೆನಪು: ಅಂದು ಸಂವಿಧಾನವನ್ನು ವಿರೋಧಿಸಿದ್ದ ಆರ್.ಎಸ್.ಎಸ್ ಮುಖವಾಣಿ ‘ಆರ್ಗನೈಸರ್’, ಇಂದು ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಅವರನ್ನು ಹೊಗಳುತ್ತಿದೆ. ಆರ್.ಎಸ್.ಎಸ್ ನಾಯಕ ಹೆಡ್ಗೆವಾರ್ ಅವರು ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎಂದರು
ಸಂವಿಧಾನ ವಿರೋಧಿಗಳು: ಬಿಜೆಪಿಯವರು ಎಂದಿಗೂ ಸಂವಿಧಾನದ ಪರವಾಗಿರಲಿಲ್ಲ. ದೇಶಕ್ಕೆ ಸಿಕ್ಕ ಸ್ವಾತಂತ್ರ್ಯವು ಕಾಂಗ್ರೆಸ್ ಮತ್ತು ಭಾರತೀಯರ ಸುದೀರ್ಘ ಹೋರಾಟದ ಫಲವೇ ಹೊರತು ಇನ್ಯಾರದ್ದೋ ಅಲ್ಲ ಎಂದು ಗುಡುಗಿದರು.
ಮನುಸ್ಮೃತಿ ವರ್ಸಸ್ ಸಂವಿಧಾನ: ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಮನುಸ್ಮೃತಿ ಜಾರಿಯಲ್ಲಿತ್ತು, ಅದು ಚತುರ್ವರ್ಣ ವ್ಯವಸ್ಥೆಯನ್ನು ಪೋಷಿಸುತ್ತಿತ್ತು. ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ಕರಾಳತೆ ಅವರನ್ನು ಮನುಶಾಸ್ತ್ರ ಸುಡುವಂತೆ ಮಾಡಿತು. ಎಲ್ಲ ಶೋಷಿತ ವರ್ಗದವರಿಗೆ ಶಿಕ್ಷಣದ ಹಕ್ಕನ್ನು ನೀಡುವ ಮೂಲಕ ಅವರು ಸಾಮಾಜಿಕ ನ್ಯಾಯದ ರಥವನ್ನು ಚಲಿಸುವಂತೆ ಮಾಡಿದರು ಎಂದು ವಿವರಿಸಿದರು.
ಮುಂದಿನ ಹಾದಿ: ಶಿಕ್ಷಣ ಮತ್ತು ಹೋರಾಟ: ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಅಂಬೇಡ್ಕರ್ ನೀಡಿದ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಮಂತ್ರವೇ ಅಸ್ತ್ರ ಎಂದ ಸಿಎಂ, ಕರ್ಮಸಿದ್ಧಾಂತವನ್ನು ಬದಿಗಿಟ್ಟು ವೈಜ್ಞಾನಿಕತೆ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
ಸಮಾಜದ ಜಡತ್ವವನ್ನು ಬಲಪಡಿಸಲು ಪಟ್ಟಭದ್ರ ಹಿತಾಸಕ್ತಿಗಳು ಸಂಚು ರೂಪಿಸುತ್ತಿವೆ. ನಾವು ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೇ ಹೊರತು ಹಿಂದೆಳೆಯಬಾರದು ಎಂದು ಜನತೆಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.




