ಬೆಂಗಳೂರು ಎಂದರೆ ಬರಿ ವಾಹನಗಳು ಅಲ್ಲ

6 months ago

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದ ವಿಚಾರದಲ್ಲಿ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಕೇವಲ ರಸ್ತೆಯ ಸಮಸ್ಯೆ ಮತ್ತು ಇಲ್ಲಿ ಒಂದು ಕೋಟಿ 40 ಲಕ್ಷ ವಾಹನಗಳನ್ನು ಹೊಂದಿರುವ ವಾಹನ ಸವಾರರ ಸಂಚಾರಕ್ಕೆ ಬೇಕಾದ ರಸ್ತೆಗಳು ಮತ್ತು ಇವುಗಳ ವಿಚಾರದಲ್ಲಿ ಹೆಚ್ಚು ಮಾತನಾಡುತ್ತಿದ್ದಾರೆ.

ಬೆಂಗಳೂರು ಎಂದರೆ ಕೇವಲ ರಸ್ತೆಗಳು ಅಲ್ಲ, ಇದು ಒಂದು ಭಾಗವಷ್ಟೇ. ಎಲ್ಲಿಂದಲೋ ಬಂದಿರುವ ಲಕ್ಷಾಂತರ ಮಂದಿಯ ವಾಹನಗಳಿಗೆ ಸೌಕರ್ಯ ಸೌಲಭ್ಯವನ್ನು ಕಲ್ಪಿಸಿ ಕೊಡುವುದು ಅಷ್ಟೇ ಅಲ್ಲ, ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಇದನ್ನು ಮೀರಿದಂತಹ ನಗರದ ನಾಗರೀಕರ ಸಮಸ್ಯೆಗಳಿಗೆ ಎನ್ನುವುದು ಕಲ್ಪನೆಯೂ ಇಲ್ಲವೇನು?

ಈ ಹಿಂದೆ ನಮ್ಮ ಭಾಗದ ಲೋಕಸಭಾ ಸದಸ್ಯರುಗಳು ವಿಶೇಷವಾಗಿ, ವಿ ಎಸ್ ಕೃಷ್ಣ ಅಯ್ಯರ್ ಮತ್ತು ಟಿ ಆರ್ ಶಾಮಣ್ಣನವರು ಬೆಂಗಳೂರು ನಗರದ ನಾಗರೀಕರ ಶಿಕ್ಷಣ ಮತ್ತು ಆರೋಗ್ಯ ಹಾಗೂ ಮೂಲಭೂತ ಸೌಕರ್ಯ ಸೌಲಭ್ಯಗಳು ಇವುಗಳ ಕಡೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರು ಅವಲಂಬಿತರಾಗಿದ್ದ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ವಿಚಾರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು.

ಅಂದಿನ ಸರ್ಕಾರಗಳು ಬೆಂಗಳೂರು ನಗರದ ವಿಚಾರದಲ್ಲಿ ಯಾವುದೇ ಒಂದು ಯೋಜನೆಯನ್ನು ರೂಪಿಸಬೇಕಾದರೆ ಅಥವಾ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬೇಕಾದರೆ ಬೆಂಗಳೂರು ನಗರದ ಚುನಾಯಿತ ಪ್ರತಿನಿಧಿಗಳು, ಮಹಾನಗರ ಪಾಲಿಕೆಯಲ್ಲಿ ಇದ್ದಂತಹ ಮಹಾಪೌರರು ಮತ್ತು ಮಾಜಿ ಮಹಾಪೌರರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಗರದ ಬದುಕಿನ ಬಗ್ಗೆ ಅನುಭವವಿರುವ ಪ್ರಮುಖರನ್ನು ಸಭೆ ಕರೆಸಿ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳುತ್ತಿದ್ದರು.

ಈಗ ಸರ್ಕಾರಗಳಿಗೆ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಎಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ, ಕೇವಲ ತಮ್ಮ ಕಂಪನಿ ಉದ್ಯೋಗಿಗಳ ಸಂಚಾರದ ಸಮಸ್ಯೆಯನ್ನೇ ಬೆಂಗಳೂರು ನಗರದ ಜನರ ಮೂಲ ಸಮಸ್ಯೆ ಎಂದು ಭಾವಿಸಿರುವ ಉದ್ಯಮಿಗಳ ಜೊತೆಯಲ್ಲಿ ಮಾತನಾಡುವುದರಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ, ಅವರ ಅಭಿಪ್ರಾಯಗಳೇ ಭಗವದ್ಗೀತೆಯ ಮಾತುಗಳು ಎನ್ನುವ ರೀತಿಯಲ್ಲಿ ನಮ್ಮ ದೃಶ್ಯ ಮಾಧ್ಯಮಗಳು ವೈಭವೀಕರಿಸುತ್ತಿದ್ದಾರೆ.

ಬೆಂಗಳೂರು ನಗರದ ಲಕ್ಷಾಂತರ ಮಹಿಳೆಯರಿಗೆ ಅದರಲ್ಲಿ ದುಡಿಯುವ ಮಹಿಳೆಯರಿಗೆ ಸಾರ್ವಜನಿಕವಾಗಿ ತಮ್ಮ ಪ್ರಕೃತಿಯ ಕರೆಗಳನ್ನ ನಿವಾರಿಸಿಕೊಳ್ಳಲು ಸೂಕ್ತವಾದಂತಹ ಶೌಚಾಲಯದ ವ್ಯವಸ್ಥೆಗಳಿಲ್ಲ.

ಬೆಂಗಳೂರು ನಗರದಲ್ಲಿ ಸರ್ಕಾರಿ ಶಾಲೆಗಳು, ಬಿಬಿಎಂಪಿಯಿಂದ ನಡೆಸುತ್ತಿರುವ ಶಾಲೆಗಳು, ಕನ್ನಡ ಮಾಧ್ಯಮದ ಶಾಲೆಗಳು ಮತ್ತು ಅನುದಾನಿತ ಶಾಲೆಗಳು ಇವುಗಳ ಕಟ್ಟಡದ ಸ್ಥಿತಿಗತಿ, ಇಲ್ಲಿನ ಮಕ್ಕಳಿಗೆ ದೊರೆಯುತ್ತಿರುವ ಮೂಲಭೂತ ಸೌಕರ್ಯ ಸೌಲಭ್ಯಗಳ ವಿಚಾರಗಳು ಯಾರಿಗೂ ಪ್ರಮುಖವೇ ಆಗುತ್ತಿಲ್ಲ. ಕೆಲವೇ ಕೆಲವು ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿಪಡಿಸಿ ಮಾದರಿಯಾಗಿದ್ದಾರೆ.

ನೂರಾರು ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದಂತಹ ವಿಕ್ಟೋರಿಯಾ ಆಸ್ಪತ್ರೆ ಮತ್ತು ವಾಣಿವಿಲಾಸ್ ಆಸ್ಪತ್ರೆ, ನಿಮಾನ್ಸ್, ಕೆಸಿ ಜನರಲ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಕ್ಷಯರೋಗದ ಆಸ್ಪತ್ರೆ, ಇವುಗಳನ್ನು ಹೊರತುಪಡಿಸಿ ಕಳೆದ 77 ವರ್ಷದ ಅವಧಿಯಲ್ಲಿ ಆ ಮಟ್ಟದ ಎಷ್ಟು ಆಸ್ಪತ್ರೆಗಳನ್ನು ಬೆಂಗಳೂರು ನಗರದ ಜನರಿಗಾಗಿ ನಾವು ಕಟ್ಟಿಕೊಟ್ಟಿದ್ದೇವೆ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಬರುವ ರೋಗಿಗಳಿಗೆ ಸೌಲಭ್ಯಗಳಿಲ್ಲ ಸೌಕರ್ಯಗಳಿಲ್ಲ, ಎಷ್ಟೊಂದು ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಬೆಂಗಳೂರು ನಗರದ ಜನಸಂಖ್ಯೆಗೆ ಅನುಗುಣವಾಗಿ ಈಗ ಇರುವಂತಹ ಕಿದ್ವಾಯಿ ಆಸ್ಪತ್ರೆ, ಜಯದೇವ ಆಸ್ಪತ್ರೆಗಳು ಆರೈಕೆಯನ್ನು ಮಾಡಲು ಆಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಪರ್ಯಾಯವಾದಂತಹ ಒಂದಷ್ಟು ವ್ಯವಸ್ಥೆಗಳನ್ನ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಆಲೋಚನೆಗಳು ಯಾರು ಮಾಡುತ್ತಿದ್ದಾರೆ. ಅದರಲ್ಲೂ ಅಂಬುಲೆನ್ಸ್ ಸಂಚಾರಕ್ಕಂತೂ ತುಂಬಾ ತೊಂದರೆಯಾಗಿದೆ. ಆಂಬುಲೆನ್ಸ್ ಗಳ ಸಂಚಾರಕ್ಕೆ ಯಾವುದಾದರೂ ಪರ್ಯಾಯವಾದ ಮಾರ್ಗಗಳನ್ನು ಆಲೋಚಿಸುವ ಪ್ರಯತ್ನವನ್ನು ನಡೆಸಿರುವುದಿಲ್ಲ.

ಉಳ್ಳವರ ಮಕ್ಕಳು ಪ್ರತಿಷ್ಠಿತ ಅಕಾಡೆಮಿಗಳಲ್ಲಿ ತಮ್ಮ ಕ್ರೀಡಾ ಕೌಶಲ್ಯವನ್ನು ಮೆರೆಯಲು ಬೇಕಾದಂತಹ ತರಬೇತಿಯನ್ನು ಪಡೆಯುತ್ತಾರೆ ಅವರುಗಳು ಆಟ ಆಡಲು ಸಾಕಷ್ಟು ಒಳಾಂಗಣ ಕ್ರೀಡಾಂಗಣಗಳು ಮತ್ತು ವ್ಯವಸ್ಥೆಗಳಿವೆ ಆದರೆ ಬಡವರ ಮನೆಯ ಮಕ್ಕಳು ಆಟವನ್ನು ಆಡಲು ಎಷ್ಟು ಆಟದ ಮೈದಾನಗಳನ್ನು ನಾವು ನಿರ್ಮಿಸಿ ಕೊಟ್ಟಿದ್ದೇವೆ.

ಒಂದು ಕೋಟಿಗೂ ಹೆಚ್ಚು ಜನರಿರುವ ಬೆಂಗಳೂರು ನಗರದಲ್ಲಿ ಅಂದೇ ದುಡಿದು ಅಂದೇ ತಿನ್ನುವಂತಹ ಲಕ್ಷಾಂತರ ಮಂದಿ ಕೂಲಿ ಕಾರ್ಮಿಕರಿದ್ದಾರೆ. ಕೆಲವು ವರ್ಷದ ಹಿಂದೆ ಆರಂಭಿಸಿದಂತಹ ಕಡಿಮೆ ಬೆಲೆಗೆ ಊಟ ಮತ್ತು ತಿಂಡಿ ನೀಡುವಂತಹ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆ ಸರಿಯಾಗಿ ಇಲ್ಲದೆ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನ ಎಷ್ಟು ಜನ ಗಮನಿಸಿದ್ದೇವೆ.

ಬೆಂಗಳೂರು ನಗರದ ಅನೇಕ ಬಡಾವಣೆಗಳಲ್ಲಿ ಶುದ್ಧವಾದ ಗಾಳಿಯನ್ನು ಪಡೆಯಲು ಮರ ಗಿಡಗಳಿಲ್ಲ, ಇರುವ ಉದ್ಯಾನಗಳ ನಿರ್ವಹಣೆಯೂ ಇಲ್ಲ ಮತ್ತು ಅವುಗಳ ಅಭಿವೃದ್ಧಿಯಾಗಿಲ್ಲ.

ಬೆಂಗಳೂರು ನಗರದಲ್ಲಿ ಸಹಸ್ರಾರು ಮನೆಗಳಿಗೆ ಇಂದಿಗೂ ಸಹ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕೊಳವೆ ಬಾವಿಗಳು ಕೆಟ್ಟು ಎಷ್ಟೋ ವರ್ಷಗಳಾಗಿವೆ, ಅವುಗಳಿಗೆ ಹಾಕಿರುವಂತಹ ನೀರು  ಸರಬರಾಜು ವೈಫ್ ಗಳು ಹಾಳಾಗಿದೆ. ಇವುಗಳ ಕಡೆ ಎಷ್ಟು ಗಮನವನ್ನು ಹರಿಸಿದ್ದೇವೆ.

ನಗರದ ನಾಗರಿಕರು ಆಸಕ್ತಿ ಹೊಂದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಸಂಘ ಸಂಸ್ಥೆಗಳಿಗೆ ಮತ್ತು ನಾಟಕ ತಂಡಗಳಿಗೆ ಎಷ್ಟು ರಂಗಮಂದಿರಗಳನ್ನ ಮತ್ತು ಬಯಲು ರಂಗಮಂದಿರಗಳನ್ನ ಎಷ್ಟು ಬಡಾವಣೆಗಳಲ್ಲಿ ನಾವು ನಿರ್ಮಿಸಿ ಕೊಟ್ಟಿದ್ದೇವೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ರಸ್ತೆ ಸಮಸ್ಯೆ ಗಿಂತ ಮಿಗಿಲಾದಂತಹ ಜನರ ಬದುಕಿನ ಸಮಸ್ಯೆ ಬಹಳ ದೊಡ್ಡದಾಗಿದೆ.

ಸರ್ಕಾರಗಳು ಯಾವುದೇ ಯೋಜನೆಯನ್ನು ರೂಪಿಸಬೇಕಾದರೆ ಕೇವಲ ಯಾರೋ ಒಂದಿಬ್ಬರು ವ್ಯಕ್ತಿಗಳ ಅಭಿಪ್ರಾಯವನ್ನು ಕೇಳುವುದಲ್ಲ ಬದಲಿಗೆ ನಾಗರೀಕ ಸಮಾಜದ ಪ್ರತಿನಿಧಿಗಳನ್ನು ಸಭೆ ಸೇರಿಸಿ ಅಭಿಪ್ರಾಯವನ್ನು ಪಡೆದು ಯೋಜನೆಗಳನ್ನು ರೂಪಿಸುವುದರಿಂದ ಜನರ ಸಹಭಾಗಿತ್ವದಲ್ಲಿ ನಡೆದಂತಾಗುತ್ತದೆ.

ಬೆಂಗಳೂರು ಎಂದರೆ ಕೇವಲ ಮಾಹಿತಿ ತಂತ್ರಜ್ಞಾನದ ಸಂಗತಿಯಲ್ಲ, ಬೆಂಗಳೂರಿನ ಜನರ ಸಮಸ್ಯೆ ಎಂದರೆ ಮಾಹಿತಿ ತಂತ್ರಜ್ಞಾನ ವಿಭಾಗದ ಉದ್ಯೋಗಿಗಳ ಸಮಸ್ಯೆಗಳೊಂದೇ ಅಲ್ಲ. ಕೆಲವೇ ಕೆಲವು ಉದ್ಯಮಿಗಳ ಬದುಕೇ ಅಲ್ಲ, ಇದನ್ನು ಮೀರಿದಂತಹ ಜನರ ಸಮಸ್ಯೆಗಳಿಗೆ ಮತ್ತು ಜನರು ಇದ್ದಾರೆ ಎನ್ನುವುದನ್ನು ನಮ್ಮ ಚುನಾಯಿತ ಪ್ರತಿನಿಧಿಗಳು ಅರಿತು ಮಾತನಾಡಬೇಕು. ನಾಗರಿಕರು ಹೆಚ್ಚು ಹೆಚ್ಚು ಕಾರುಗಳನ್ನ ಬಳಸುವುದನ್ನ ಕಡಿಮೆ ಮಾಡಿ ಸಮೂಹ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯನ್ನು ಬಳಕೆ ಮಾಡಿದರೆ ತಾನಾಗಿಯೇ ಬೆಂಗಳೂರು ನಗರದ ವಾಹನಗಳ ದಟ್ಟಣೆಯ ಸಮಸ್ಯೆ ಪರಿಹಾರ ಆಗುತ್ತದೆ. ಪ್ರತಿದಿನವೂ ಎರಡು ಸಾವಿರಕ್ಕೂ ಹೆಚ್ಚು ವಾಹನಗಳು ರಸ್ತೆಗೆ ಇಳಿಯುತ್ತಿದ್ದರೆ ಯಾವ ರೀತಿಯಲ್ಲಿ ತಾನೆ ಪರಿಹಾರವನ್ನ ಕಾಣಲು ಸಾಧ್ಯವಾಗುತ್ತದೆ. ಇಂದು ರೂಪಿಸುವ ಯೋಜನೆಗಳು ಮುಂದಿನ ಮತ್ತಷ್ಟು ಕೆಲವು ವರ್ಷಗಳಿಗೆ ಸಾಲದಾಗುತ್ತದೆ.

ಎಷ್ಟು ಜನ ನಮ್ಮ ಚುನಾಯಿತ ಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಗಳು ಮತ್ತು ಸರಕಾರಿ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ಎಷ್ಟು ಬಾರಿ ಅಲ್ಲಿಗೆ ಭೇಟಿಕೊಟ್ಟು ಸಮಸ್ಯೆಗಳನ್ನ ಕೇಳಿದ್ದೀರಿ ,ಅದೇ ರೀತಿಯಲ್ಲಿ ಬೆಂಗಳೂರು ನಗರದ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಯಲ್ಲಿ ಎಷ್ಟು ಬಾರಿ ಸಂವಾದವನ್ನು ನಡೆಸಿದ್ದೀರಿ.

ಎಲ್ಲ ಯೋಜನೆಗಳಿಗೆ ಇಲ್ಲಿ ಸದಾ ವಿರೋಧಿಸುವವರು ಮತ್ತು ಟೀಕಿಸುವ ಒಂದಷ್ಟು ಪ್ರತಿನಿಧಿಗಳಿದ್ದಾರೆ,, ಅಂತವರಿಗೆ  ಸಮಸ್ಯೆಯ ಪರಿಹಾರಕ್ಕೆ ಬೇಕಾದಂತಹ ಪರ್ಯಾಯವಾದ ಮಾರ್ಗವೂ ಇಲ್ಲ.

ಬೆಂಗಳೂರು ಬೆಳೆಯುವುದಕ್ಕೆ ಕಡಿವಾಣ ಹಾಕಿ, ಇನ್ನು ಮುಂದಾದರು ಉದ್ಯಮಗಳನ್ನು ಮತ್ತು ಬೃಹತ್ ಕಂಪನಿಗಳನ್ನ ಬೇರೆ, ಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸುವಂತಹ ನಿಟ್ಟಿನಲ್ಲಿ ಆಲೋಚನೆಯನ್ನು ಮಾಡಿ. ಇದೇ ಪ್ರಮಾಣದಲ್ಲಿ ಬೆಂಗಳೂರಿನ ಬೆಳವಣಿಗೆಯಾಗಿ ವಾಹನಗಳ ಸಂಖ್ಯೆಯು ಬೆಳೆಯುತ್ತಾ ಹೋದರೆ ಇನ್ನೆಷ್ಟು ಕಿಲೋಮೀಟರ್ ಮೆಟ್ರೋ ಯೋಜನೆ ವಿಸ್ತರಿಸಿದರೂ ಸಹ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ದುರಂತವೆಂದರೆ ನಗರದ ನಾಗರೀಕರ ಬದುಕಿನ ಪರಿಚಯವಿಲ್ಲದ, ಇಲ್ಲಿನ ಸಾಂಸ್ಕೃತಿಕ ಮತ್ತು ಸಾಮಾಜಿಕ, ಸ್ಥಿತಿಗತಿ ಬಗ್ಗೆ ಅರಿವು ಇಲ್ಲದ, ಒಂದಷ್ಟು ಮಂದಿ ಬೆಂಗಳೂರು ನಗರದ ಬಗ್ಗೆ ಮಾತನಾಡುತ್ತಿರುವುದು ಸಹ ವಿಪರ್ಯಾಸವೇ ಸರಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply