ಒಂದು ಕೋಟಿ 20 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಹೊಂದಿರುವಂತಹ ಬೆಂಗಳೂರು ನಗರಕ್ಕೆ ಇಂದು ಟ್ರಾಫಿಕ್ ಸಮಸ್ಯೆ ಅತ್ಯಂತ ದೊಡ್ಡದಾದಂತಹ ಸಂಗತಿಯಾಗಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ರಸ್ತೆಗಳು ಮತ್ತು ವಾಹನ ಸಂಚಾರದ ಸಮಸ್ಯೆಗಳ ವಿಚಾರದಲ್ಲಿ ಹೇಳಿರುವ ಮಾತುಗಳಲ್ಲಿ ಯಾವುದೇ ರೀತಿಯ ತಪ್ಪು ಇರುವುದಿಲ್ಲ. ಅವರ ಹೇಳಿಕೆ ಅತ್ಯಂತ ಪ್ರಾಮಾಣಿಕವಾದಂತಹ ಅಭಿಪ್ರಾಯವಾಗಿರುತ್ತದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಪ್ರತಿದಿನವೂ ಸಾವಿರಾರು ವಾಹನಗಳು ನೋಂದಣಿಯಾಗಿ ರಸ್ತೆಗೆ ಇಳಿದರೆ ಯಾವ ರಸ್ತೆಯು ಸಹ ವಾಹನದ ಒತ್ತಡವನ್ನ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಅನೇಕ ರಸ್ತೆಗಳನ್ನು ವೈಟ್ ಟಾಪಿಂಗ್ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಕಾಂಕ್ರೀಟ್ ಬಳಸಿ ಅಭಿವೃದ್ಧಿಪಡಿಸುತ್ತಿರುವ ಈ ರಸ್ತೆಗಳು ಕನಿಷ್ಠಪಕ್ಷ 25 ವರ್ಷದ ಕಾಲ ಬಾಳಿಕೆ ಬರುತ್ತದೆ ಮತ್ತು ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೂ ಅನುಗುಣವಾಗಿ ರಸ್ತೆಗಳು ಹಾಳಾಗದಂತೆ ಉಳಿದುಕೊಳ್ಳುತ್ತದೆ ಎನ್ನುವ ಉದ್ದೇಶವಾಗಿರುತ್ತದೆ.
ಕಳೆದ ಎರಡು ವರ್ಷದ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ದೂರದೃಷ್ಟಿತ್ವದ ಮುಂದಾಲೋಚನೆಯ ಶಾಶ್ವತವಾದಂತಹ ಹಲವಾರು ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ಸದಾ ಕಾಲ ಕ್ರಿಯಾಶೀಲರಾಗಿದ್ದಾರೆ. ಇವರ ಕನಸಿನ ಸುರಂಗ ಮಾರ್ಗದ ರಸ್ತೆ ಕಾರ್ಯರೂಪಕ್ಕೆ ಬಂದರೆ ಬೆಂಗಳೂರು ನಗರದ ವಾಹನ ಸಾಂಧ್ರತೆಗೆ ದೊಡ್ಡ ರೀತಿಯಲ್ಲಿ ಪರಿಹಾರ ದೊರೆಯುತ್ತದೆ.
ಮೆಟ್ರೋ ಕಾಮಗಾರಿಗಳು ಸಹ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇದರ ಜೊತೆಗೆ ರಾಮಲಿಂಗಾರೆಡ್ಡಿರವರ ಮಾಡೆಲ್ ಎಂದು ಕರೆಸಿಕೊಳ್ಳುವ ರಸ್ತೆಗಳು ಮೆಟ್ರೋ ಮಾರ್ಗದಲ್ಲಿ ಅಭಿವೃದ್ಧಿಪಡಿಸುವಂತಹ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಸಾರ್ವಜನಿಕರು ಸಹ ಹೆಚ್ಚು ಹೆಚ್ಚು ಸಮೂಹ ಸಾರಿಗೆ ಸಂಸ್ಥೆಗಳಾದ ಮೆಟ್ರೋ ಮತ್ತು ಬಿಎಂಟಿಸಿ ಬಸ್ ಗಳನ್ನು ಬಳಸುವಂತಹ ಮನಸ್ಸು ಮಾಡಬೇಕು. ಪ್ರತಿಯೊಬ್ಬರೂ ಸಹ ಒಬ್ಬೊಬ್ಬರ ಪ್ರಯಾಣಕ್ಕೆ ಕಾರುಗಳನ್ನ ಬಳಸುತ್ತಾ ಹೋದರೆ ಬೆಂಗಳೂರು ನಗರದ ರಸ್ತೆಗಳನ್ನ 500 ಅಡಿ ಅಗಲಕ್ಕೆ ವಿಸ್ತಾರ ಮಾಡಿದರು ಸಮಸ್ಯೆ ಪರಿಹಾರವಾಗುವುದಿಲ್ಲ.
ಬಿಜೆಪಿಯವರು 2008 ರಿಂದ 2013ರ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶೂನ್ಯ. ಅದೇ ರೀತಿಯಲ್ಲಿ 2019 ರಿಂದ 23ರ ಅವಧಿಯಲ್ಲೂ ಸಹ ಇವರ ಕೊಡುಗೆ ಶೂನ್ಯ. ಇವರ ಕಾಲದಲ್ಲಿ ಬೆಂಗಳೂರು ನಗರ ಗಾರ್ಬೇಜ್ ಸಿಟಿ ಎಂಬ ಹೆಸರು ಗಳಿಸಿತ್ತು. ಆಗಲೂ ಸಹ ಗುಂಡಿ ತುಂಬಿದ ರಸ್ತೆಗಳಿದ್ದವು. ವಾಹನಗಳ ಒತ್ತಡವಿತ್ತು, ಎಲ್ಲವೂ ಇತ್ತು. ಆದರೂ ಇವರು ಯಾವುದೇ ಒಂದೇ ಒಂದು ಮೇಲ್ಸೇತುವೆಗಳನ್ನಾಗಲಿ ಸುರಂಗ ಮಾರ್ಗದ ರಸ್ತೆಗಳನ್ನಾಗಲಿ ನಿರ್ಮಾಣ ಮಾಡಿರುವುದಿಲ್ಲ. ಬಿಬಿಎಂಪಿಯಲ್ಲಿ ಹಣ ಇಲ್ಲದಿದ್ದರೂ ಹತ್ತಾರು ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗೆ ಕಾರ್ಯಾದೇಶವನ್ನ ನೀಡಿ ಬಿಬಿಎಂಪಿಯ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ಕಾರಣಕರ್ತರಾದರು. ಇವರ ಕಾಲದಲ್ಲಿ ನಡೆದಿರುವ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಹಣ ನೀಡದ ಕಾರಣದಿಂದ ಈಗ ಈ ಸರ್ಕಾರ ಅವರ ಬಿಲ್ ಪಾವತಿಸಬೇಕಾಗಿದೆ. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆಯಾಗಿದೆ. ಜೊತೆಗೆ ಬಿಜೆಪಿ ಸರ್ಕಾರದಲ್ಲಿ ನಡೆದಂತಹ ಬಹಳಷ್ಟು ಕಾಮಗಾರಿಗಳು ಕಳಪೆ ಮಟ್ಟದಿಂದ ತುಂಬಿದೆ.
ಡಿ ಕೆ ಶಿವಕುಮಾರ್ ಅವರು ಈಗಾಗಲೇ ಬೆಂಗಳೂರಿನ ಹೊರವಲಯದಲ್ಲಿ 300 ಅಡಿ ರಸ್ತೆಗಳ ಕಾಮಗಾರಿಯನ್ನು ವೇಗವಾಗಿ ಮುಗಿಸುತ್ತಿದ್ದಾರೆ. ವರ್ತುಲ ರಸ್ತೆಗೆ ಚಾಲನೆಯನ್ನು ನೀಡುತ್ತಿದ್ದಾರೆ. ಹೊಸ ಹೊಸ ಬಡಾವಣೆಗಳಿಗೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಏಕಕಾಲದಲ್ಲಿ ಬಹಳಷ್ಟು ಕಡೆ ವೈಟ್ ಟಾಪಿಂಗ್ ರಸ್ತೆಗಳು ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಿರುವುದು ನಿಜ. ಮುಂದಿನ ಕೆಲವೇ ತಿಂಗಳಲ್ಲಿ ಕಾಮಗಾರಿಗಳು ಮುಗಿದ ನಂತರ ಸಾರ್ವಜನಿಕರಿಗೆ ಈ ರಸ್ತೆಗಳು ನಿಜಕ್ಕೂ ಸಹ ವಾಹನ ಸವಾರರಿಗೆ ಅತ್ಯಂತ ಗುಣಮಟ್ಟದ ರಸ್ತೆಗಳಾಗಿ ಉಪಯೋಗವಾಗುತ್ತದೆ. ಮೆಟ್ರೋ ಕಾಮಗಾರಿಯು ಸಹ ಹಲವಾರು ಹಂತದಲ್ಲಿ ನಡೆಯುತ್ತಿರುವುದರಿಂದ ಸಹಜವಾಗಿ ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿದೆ. ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಭೂಮಿಯ ಒಳಗಡೆ ಬಂಡೆಗಳು ಸಿಕ್ಕ ಸಂದರ್ಭದಲ್ಲಿ ಕಾಮಗಾರಿಯ ವೇಗ ಕುಂಠಿತವಾಗುತ್ತದೆ.
ಬೆಂಗಳೂರು ನಗರದ ಅಭಿವೃದ್ಧಿಗೆ ಡಿ ಕೆ ಶಿವಕುಮಾರ್ ಅವರು ಕನಸು ಕಂಡಿರುವುದು ನಿಜ. ಆ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ದುಡಿಯುತ್ತಿರುವುದು ಅಷ್ಟೇ ಸತ್ಯ. ಡಿ ಕೆ ಶಿವಕುಮಾರ್ ಅವರಿಗೆ ಅಥವಾ ಸರ್ಕಾರಕ್ಕೆ ಮೋಹನ್ ದಾಸ್ ಪೈರವರ ಪ್ರಮಾಣ ಪತ್ರ ಬೇಕಿಲ್ಲ. ಮೋಹನ್ ದಾಸ್ ಪೈರವರು ಎಲ್ಲ ಸಂದರ್ಭದಲ್ಲಿ ಸಹ ಕಾಂಗ್ರೆಸ್ ಸರ್ಕಾರವಿದ್ದ ವೇಳೆಯಲ್ಲಿ ಟೀಕಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಏನೆಲ್ಲಾ ಅನಾಹುತಗಳು ನಡೆದರೂ ಇವರಿಗೆ ಕಾಣುವುದೇ ಇಲ್ಲ. ಇವರ ಮಾತುಗಳು ಇವರ ಮನಸ್ಥಿತಿಯನ್ನು ತೋರಿಸುತ್ತದೆ. ಮೋಹನ್ ದಾಸ್ ಪೈ ರವರು ಆಕಾಶದಿಂದ ಇಳಿದು ಬಂದಿಲ್ಲ. ಅವರು ಹೇಳುವ ಮಾತೇನು ದೊಡ್ಡದಲ್ಲ. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಮಾತನಾಡಿದಷ್ಟು ರಸ್ತೆಯ ಮೇಲೆ ಇಳಿದು ಕಾಮಗಾರಿಗಳನ್ನ ನಡೆಸುವುದು ಸುಲಭವಲ್ಲ.
ಬೆಂಗಳೂರು ನಗರ ಕೇವಲ ಮಾಹಿತಿ ತಂತ್ರಜ್ಞಾನದ ಉದ್ಯಮಿಗಳಿಗಾಗಿ ಅಭಿವೃದ್ಧಿಪಡಿಸಬೇಕಾಗಿಲ್ಲ. ಬೆಂಗಳೂರು ಎಂದರೆ ಅವರೊಬ್ಬರೇ ಅಲ್ಲ ಬೆಂಗಳೂರಿಗೆ ತನ್ನದೇ ಆದ ಇತಿಹಾಸವಿದೆ. ಬೆಂಗಳೂರನ್ನ ಪ್ರೀತಿಸುವ ಜನರು ಇದ್ದಾರೆ. ಬೆಂಗಳೂರನ್ನ ಉಳಿಸಿ ಬೆಳೆಸಿರುವ ಅದೆಷ್ಟೋ ಮಂದಿ ಬೆಂಗಳೂರಿನ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಯೋಚಿಸಿ ವಾಸ್ತವ ನೆಲೆಯಲ್ಲಿ ಮಾತನಾಡುತ್ತಾರೆ. ಆದರೆ ಕೆಲವು ಬಿಜೆಪಿ ಬೆಂಬಲಿತ ಉದ್ಯಮಿಗಳು ಸದಾ ಕಾಲ ಕಾಂಗ್ರೆಸ್ ಸರ್ಕಾರಗಳು ಯಾವುದೇ ಒಳ್ಳೆ ಕೆಲಸವನ್ನು ಮಾಡಿದರು ಅದನ್ನು ಟೀಕಿಸುವುದು ಮತ್ತು ಲಘುವಾಗಿ ಮಾತನಾಡುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂಥವರ ಮಾತುಗಳಿಗೆ ಯಾರೋ ಒಂದಷ್ಟು ಮಾಧ್ಯಮದವರು ಬೆಲೆ ಕೊಡಬಹುದೇ ಹೊರತು ಜನಸಾಮಾನ್ಯರು ಮಹತ್ವದ ಮಾತು ಎಂದು ಭಾವಿಸುವುದಿಲ್ಲ.
ಮುಂದಿನ ಕೆಲವೇ ವರ್ಷಗಳಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಆದ ಮೇಲೆ ಇದೇ ಜನ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಒಳ್ಳೆಯ ಮಾತುಗಳನ್ನಾಡುವ ಕಾಲ ಬಂದೇ ಬರುತ್ತದೆ. ತಾತ್ಕಾಲಿಕವಾದ ಯೋಜನೆಗಳನ್ನು ರೂಪಿಸಿ ಜನರಿಗೆ ಮೋಸ ಮಾಡುವುದಕ್ಕಿಂತ ಶಾಶ್ವತವಾದ ದೂರದೃಷ್ಟಿತ್ವದ ಪರಿಣಾಮಕಾರಿಯಾದ ಹೆಚ್ಚು ಬಾಳಿಕೆ ಬರುವ ಕಾಮಗಾರಿಗಳು ಮಾಡುವ ನಿಟ್ಟಿನಲ್ಲಿ ಡಿ ಕೆ ಶಿವಕುಮಾರ್ ಅವರು ಇಟ್ಟಿರುವ ಹೆಜ್ಜೆಗಳ ಬಗ್ಗೆ ಯಾವುದೇ ಕಳವಳಬೇಡ ಅವರ ಪ್ರಯತ್ನ ಮತ್ತಷ್ಟು ಗಟ್ಟಿಯಾಗಿ ಸಾಗಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




