ಕಾಫ್ ಸಿರಪ್ ವಿಷಯದಲ್ಲಿ ಕೆಮ್ಮುತ್ತಿರುವ ರಾಜ್ಯ ಬಿಜೆಪಿ ನಾಯಕರು: ಪ್ರಿಯಾಂಕ್ ಖರ್ಗೆ

9 months ago

ಬೆಂಗಳೂರು: ನಿಷೇಧಿತ ವಸ್ತುಗಳ ಮಾರಾಟ ಯತ್ನ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಘಟನೆ ಇದೀಗ ಭಾರೀ ಸದ್ದು ಮಾಡುತ್ತಿದೆ.

ಕಲಬುರಗಿ ಗ್ರಾಮೀಣ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಎಂಬುವವರನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಈ ವ್ಯಕ್ತಿ 120 ಕೊಡೆನೈನ್ ಸಿರಪ್ ಹೊಂದಿದ್ದಾನೆ ಎಂಬ ಆರೋಪ ಇದೆ. ಬಂಧಿತನ ವಿರುದ್ಧ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಕಲಬುರ್ಗಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಲಿಂಗರಾಜ ಕಣ್ಣಿ ಅವರನ್ನು ವಜಾ ಗೊಳಿಸಲಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತು ಮಾಡಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಕಲಬುರ್ಗಿ ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದರು ನನ್ನ ಆಪ್ತ ಎಂದು ಬಿಂಬಿಸಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಕಾನೂನು ರೀತಿಯಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಇದಕ್ಕೆ ನನ್ನ ಆಪ್ತ ಎಂಬ ಬಣ್ಣ ಕಟ್ಟುವುದು ಬೇಡ ಎಂದರು.

ಸುಮಾರು 27 ಸಾವಿರ ರೂಪಾಯಿ ಮೌಲ್ಯದ ಕಾಫ್ ಸಿರಪ್ ದೊರಕಿದ ಹಿನ್ನೆಲೆಯಲ್ಲಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಪೊಲೀಸರು ಸ್ವತಂತ್ರರಿದ್ದಾರೆ, ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟಿಸಲಾಗಿದೆ. ಕಾಂಗ್ರೆಸ್ ಪಕ್ಷವಾಗಲಿ, ಸರ್ಕಾರವಾಗಲಿ ಇದನ್ನು ಸಮರ್ಥಿಸುವುದಿಲ್ಲ ಎಂದರು.

ಆದರೆ, 27 ಸಾವಿರ ಮೌಲ್ಯದ ಕಾಫ್ ಸಿರಪ್ ವಿಷಯದಲ್ಲಿ ಕೆಮ್ಮುತ್ತಿರುವ ರಾಜ್ಯ ಬಿಜೆಪಿ ನಾಯಕರು ಅದಕ್ಕಿಂತ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ತಮ್ಮ ಪಕ್ಷದವರ ಬಗ್ಗೆ ಕ್ರಮ ಕೈಗೊಳ್ಳುವ ನೈತಿಕತೆ ತೋರುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಪೋಕ್ಸೋ ಪ್ರಕರಣದ ಆರೋಪಿಯನ್ನು ಬಿಜೆಪಿ ಪಕ್ಷ ಉಚ್ಚಾಟನೆ ಮಾಡುವುದು ಯಾವಾಗ? ಪುತ್ತೂರಿನಲ್ಲಿ ಬಿಜೆಪಿ ನಾಯಕನ ಪುತ್ರನೊಬ್ಬ ಯುವತಿಯೊಬ್ಬರಿಗೆ ವಂಚಿಸಿ ಅತ್ಯಾಚಾರವೆಸಗಿದ್ದರ ಬಗ್ಗೆ ಕ್ರಮ ಕೈಗೊಳ್ಳದಿರುವುದು ಯಾವಾಗ? ವಿಧಾನಸೌಧದ ಆವರಣದಲ್ಲೇ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ, ಏಡ್ಸ್ ಇಂಜೆಕ್ಷನ್ ನೀಡಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸುವುದು ಯಾವಾಗ? ಮಹಿಳಾ ಅಧಿಕಾರಿಗಳನ್ನು ಅವಮಾನಕರವಾಗಿ ನಿಂಧಿಸುವುದನ್ನೇ ಕಾಯಕ ಮಾಡಿಕೊಂಡಿರುವ ವಿಧಾನ ಪರಿಷತ್ ಸದಸ್ಯನ ಮೇಲೆ ಕ್ರಮ ಕೈಗೊಳ್ಳುವುದು ಯಾವಾಗ? ಗಣಿ ಹಗರಣದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವವರನ್ನು ಬಿಜೆಪಿ ಉಚ್ಚಾಟನೆ ಮಾಡುವುದು ಯಾವಾಗ? ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಉತ್ತರ ನೀಡಬೇಕಾದ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ.

Leave a Reply