ಶಿವಮೊಗ್ಗ: ದೇಶದ ಎರಡನೇ ಅತಿ ದೊಡ್ಡ ತೂಗು ಸೇತುವೆ ಎಂದು ಬಣ್ಣಿಸಲಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಲ್ಲಿ ನಿರ್ಮಿಸಿದ ನೂತನ ತೂಗು ಸೇತುವೆಯನ್ನು ಕೇಂದ್ರದ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶಿಷ್ಟಾಚಾರ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ಸಿನ ಎಲ್ಲ ಆಹ್ವಾನಿತ ಗಣ್ಯರು ಕಾರ್ಯಕ್ರಮವನ್ನು ಬಹಿಷ್ಕರಿಸಿದರು.
ಉಳಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಸಮಾರಂಭದಲ್ಲಿ ಹಾಜರಿದ್ದರು.
ರಾಜ್ಯದ ಬಹುನಿರೀಕ್ಷಿತ ಈ ತೂಗು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಭೂಸಾರಿಗೆ ಇಲಾಖೆಯ ಯಾವುದೇ ಅಧಿಕಾರಿಗಳು ತಮ್ಮನ್ನು ಆಹ್ವಾನಿಸಿಲ್ಲ. ತಮ್ಮ ಅಭಿಪ್ರಾಯ ಕೇಳದೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರುಗಳನ್ನು ಮುದ್ರಿಸಲಾಗಿದೆ. ತಾವು ಪೂರ್ವ ನಿಗದಿಯಂತೆ ವಿಜಯಪುರದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಹೀಗಾಗಿ ಬೇರೊಂದು ದಿನ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುವಂತೆ ಸಿದ್ದರಾಮಯ್ಯ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು.
ಈ ಪತ್ರಕ್ಕೆ ನಿತಿನ್ ಗಡ್ಕರಿ ಅವರ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ನಿಗದಿಯಂತೆ ಕಾರ್ಯಕ್ರಮ ನಡೆಯಿತು. ಆದರೆ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಿದ್ಯುಕ್ತವಾಗಿ ಆಹ್ವಾನಿಸಿಲ್ಲ ಎಂದು ಆರೋಪಿಸಿ ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಎಲ್ಲ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಿಂದ ದೂರ ಉಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಸಾಗರಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಪಕ್ಷ ಕಾರ್ಯಕ್ರಮವನ್ನು ಬಹಿಷ್ಕರಿಸಲು ತೀರ್ಮಾನಿಸಿದೆ ಎಂಬ ನಿರ್ಧಾರ ಕೇಳಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಬೆಂಗಳೂರಿನತ್ತ ಪ್ರಯಾಣಿಸಿದರು.
ಮತ್ತೊಂದೆಡೆ ತೂಗು ಸೇತುವೆ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಲೋಕಾರ್ಪಣೆಗೂ ಮುನ್ನ ಸೇತುವೆಯ ಸುರಕ್ಷತೆಗೆ ಪ್ರಾರ್ಥಿಸಿ ಸ್ಥಳೀಯರು ಗಣ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಿದರು.
ಸೇತುವೆಯನ್ನು ಸ್ಥಳೀಯರು ಮಾವಿನ ತೋರಣ-ತಳಿರುಗಳಿಂದ ಅಲಂಕರಿಸಿದ್ದು, ತುಮರಿ, ಬ್ಯಾಕೋಡು, ಸಿಗಂದೂರು, ಕಳಸವಳ್ಳಿ ಭಾಗದ ದ್ವೀಪದ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ರಾತ್ರಿಗಳನ್ನು ಹಿಡಿದು, ರೇನ್ ಕೋಟ್, ಜರ್ಕಿನ್ ಧರಿಸಿ ಬಂದು ಲೋಕಾರ್ಪಣೆಯ ಕ್ಷಣವನ್ನು ಕಣ್ತುಂಬಿಕೊಂಡರು. ತಮ್ಮ ದಶಕಗಳ ಸಂಕಷ್ಟ ಪರಿಹಾರವಾಗಿದ್ದು, ಕಂಡು ಪುಳಕಗೊಂಡರು. ಸೇತುವೆಯ ಎರಡೂ ಬದಿಯಲ್ಲಿ ಛತ್ರಿ ಹಿಡಿದು ಓಡಾಡಿ ಸಂತಸಪಟ್ಟರು.
ಸೇತುವೆಯ ಹಾದಿಯಲ್ಲಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಲ್ಹಾದ ಜೋಶಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಭಾವಚಿತ್ರ ಇರುವ ಬ್ಯಾನರ್ ಗಳು ರಾರಾಜಿಸಿದವು.
ಮತ್ತೊಂದೆಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ವಿಷಯದಲ್ಲಿ ತಮ್ಮ ಇಲಾಖೆ ಯಾವುದೇ ರೀತಿಯಲ್ಲೂ ಶಿಷ್ಟಾಚಾರ ಉಲ್ಲಂಘಿಸಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು.
ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರ ಯಾವುದೇ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ. ಕರ್ನಾಟಕ ಸರ್ಕಾರದ ಸಹಕಾರವನ್ನು ಕೇಂದ್ರ ನಿರಂತರವಾಗಿ ಶ್ಲಾಘಿಸುತ್ತದೆ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಎಲ್ಲಾ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಕೇಂದ್ರವು ಬದ್ಧವಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವಂತೆ ಕೋರಿ ಸಿದ್ದರಾಮಯ್ಯ ಅವರಿಗೆ ಜುಲೈ 11ರಂದು ಅಧಿಕೃತ ಆಹ್ವಾನ ನೀಡಲಾಗಿತ್ತು. ಖುದ್ದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ವಿಡಿಯೊ ಕಾನ್ಫೆರೆನ್ಸ್ ಮೂಲಕ ಭಾಗಿಯಾಗುವಂತೆ ಸಿದ್ದರಾಮಯ್ಯ ಅವರಿಗೆ ವಿನಂತಿಸಲಾಗಿತ್ತು ಎಂದರು.
ಸೇತುವೆ ಉದ್ಘಾಟಿಸಿ ಮಾತನಾಡಿದ ನಿತಿನ್ ಗಡ್ಕರಿ, ನೂತನ ತೂಗು ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಲಾಗುವುದು ಎಂದರು.
ಸೇತುವೆ ನಿರ್ಮಾಣದ ಕೆಲಸ ನನ್ನಿಂದ ಆಗಿಲ್ಲ. ಬದಲಿಗೆ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಆಗಿದೆ. ಹೀಗಾಗಿ ಆ ತಾಯಿಯ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಆ ಮೂಲಕ ಈ ಭಾಗದ ಜನರ ಭಾವನೆಗಳನ್ನು ಗೌರವಿಸಲಾಗುತ್ತಿದೆ ಎಂದರು.
ಇಲ್ಲಿಯವರೆಗೂ ಸ್ಥಳೀಯರು 100 ಕಿ.ಮೀನಷ್ಟು ದೂರ ಕ್ರಮಿಸಿ ಹೊರಗಿನ ಜಗತ್ತಿನ ಸಂಪರ್ಕ ಪಡೆಯಬೇಕಿತ್ತು. ಸೇತುವೆ ನಿರ್ಮಾಣದಿಂದ ಅಲ್ಲಿನ ಜನರ ಬವಣೆಗಳನ್ನು ಶಾಶ್ವತವಾಗಿ ನೀಗಿಸಿದ ತೃಪ್ತಿ ಇದೆ. ಅದಕ್ಕೆ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದ ಕಾರಣ ಎಂದರು.
ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆಯಿಂದ 2030ರ ಡಿಸೆಂಬರ್ ವೇಳೆಗೆ ಕರ್ನಾಟಕದಲ್ಲಿ ₹5 ಲಕ್ಷ ಕೋಟಿ ಮೊತ್ತದ ಹೆದ್ದಾರಿ ಹಾಗೂ ಮೂಲಸೌಕರ್ಯ ನಿರ್ಮಾಣ ಕಾರ್ಯದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.
ಇದೇ ಸಂದರ್ಭದಲ್ಲಿ ನಿತಿನ್ ಗಡ್ಕರಿ ರಾಜ್ಯದ ವಿವಿಧೆಡೆ 2056 ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.




