ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ನಿಧಿ ತಿವಾರಿ ನೇಮಕ

1 year ago

ದೆಹಲಿ: ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ ನಿಧಿ ತಿವಾರಿ ಅವರನ್ನು ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಿದೆ.

ಶನಿವಾರ ಈ ನೇಮಕ ಆದೇಶ ಜಾರಿಗೊಳಿಸಲಾಗಿದೆ. ಕ್ಯಾಬಿನೆಟ್‌ ನೇಮಕ ಸಮಿತಿ ಪ್ರಧಾನಿ ಕಾರ್ಯಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ನಿಧಿ ತಿವಾರಿ (IFS 2014ರ ಬ್ಯಾಚ್) ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.

ಯಾರು ಈ ನಿಧಿ ತಿವಾರಿ?: ನಿಧಿ ತಿವಾರಿ ಅವರು 2013 ರ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ 96 ನೇ ರ್ಯಾಂಕ್ ಪಡೆದು ಸೇವೆಗೆ ಸೇರಿದ್ದರು. ಇವರು 2014 ರಿಂದ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಾಣಸಿಯ ಮೆಹಮೂರ್‌ಗಂಜ್‌ನವರು.

2022 ರಲ್ಲಿ ಅವರು ಪ್ರಧಾನಿ ಕಾರ್ಯಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ನೇಮಕವಾದರು. ಜನವರಿ 6, 2023 ರಿಂದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ‘ವಿದೇಶಿ ಮತ್ತು ಭದ್ರತಾ’ ವಿಭಾಗಗಳನ್ನು ನೋಡಿಕೊಂಡಿದ್ದರು. ಈ ಸೇವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಅಡಿಯಲ್ಲಿದೆ.

ತಿವಾರಿ ಅವರು ಪ್ರಧಾನಿ ಕಾರ್ಯಾಲಯಕ್ಕೆ ಸೇರುವ ಮೊದಲು ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡಿದ್ದರು. ಅವರು ನಿರಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಭಾಗವನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ಅಂತರರಾಷ್ಟ್ರೀಯ ಸಂಬಂಧಗಳ ವಿಷಯಗಳನ್ನು ನಿರ್ವಹಿಸುವ ಅವರ ಪರಿಣತಿ ಪ್ರಧಾನಿ ಕಾರ್ಯಾಲಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ, ಅವರು ವಿದೇಶಾಂಗ ವ್ಯವಹಾರಗಳು, ಪರಮಾಣು ಶಕ್ತಿ ಮತ್ತು ಭದ್ರತಾ ವಿಷಯಗಳನ್ನೂ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಡಿಸೆಂಬರ್ 2022ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ ವಿದೇಶಿ ನೀತಿಯಲ್ಲಿ ಅವರ ಸಕ್ರಿಯ ತೊಡಗಿಸಿಕೊಳ್ಳುವಿಕೆ ಅವರ ಪದೋನ್ನತಿಗೆ ಕಾರಣ ಎನ್ನಲಾಗುತ್ತಿದೆ. ಅವರು ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ಹಿಂದೆ ಸೇವೆ ಸಲ್ಲಿಸಿದ ವಿವೇಕ್ ಕುಮಾರ್ ಮತ್ತು ಹಾರ್ದಿಕ್ ಸತೀಶ್ಚಂದ್ರ ಶಾ ಅವರ ಸ್ಥಾನಕ್ಕೆ ಏರಲಿದ್ದಾರೆ.

Leave a Reply