ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲ

1 year ago

ಬೆಂಗಳೂರು: ರಾಜ್ಯದ ಮಹಾರಾಷ್ಟ್ರ ಗಡಿಭಾಗದಲ್ಲಿ ಪುಂಡಾಟಿಕೆ ಮಾಡುತ್ತಿರುವ ಎಂಇಎಸ್ ನಿಷೇಧ, ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಳ ಶೀಘ್ರ ಅನುಷ್ಠಾನ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಯೋಜನೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲವಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮೈಸೂರು ಮತ್ತು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಬಲವಂತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಲು ನಡೆದ ಕೆಲವು ಸಣ್ಣಪುಟ್ಟ ಪ್ರಯತ್ನಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಜನಜೀವನ ಎಂದಿನಂತೆ ಮಾಮೂಲಿನಂತೆ ನಡೆಯಿತು.

ಬಂದ್ ಗೆ ಕರೆ ನೀಡಿದ್ದ ಮಾಜಿ ಶಾಸಕ ವಾಟಾಳ್ ನಾಗರಾಜ್, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಸಾರಾ ಗೋವಿಂದು, ಕನ್ನಡ ಸೇನೆಯ ಕುಮಾರ್ ಸೇರಿದಂತೆ ಹಲವರು ಬೆಂಗಳೂರಿನ ಟೌನ್ ಹಾಲ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಮಾಡಲು ಯತ್ನಿಸಿದರು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಇವರನ್ನು ವಶಕ್ಕೆ ಪಡೆದರು.

ಬಂದ್ ನಿಂದ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಎಂದಿಗಿಂತ ಸ್ಪಲ್ಪ ಕಡಿಮೆಯಿತ್ತು. ಸರ್ಕಾರಿ, ಖಾಸಗಿ ಸೇರಿದಂತೆ ಬಸ್ ಇನ್ನಿತರ ವಾಹನಗಳ ಸಂಚಾರ ಸುಗಮವಾಗಿದ್ದು, ಎಲ್ಲಿಯೂ ಬಂದ್ ನಿಂದ ತೊಂದರೆಯಾಗಲಿಲ್ಲ. 

ರಾಜಧಾನಿ ಬೆಂಗಳೂರಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಅಂಗಡಿ ಮುಗ್ಗಟ್ಟುಗಳ ವ್ಯವಹಾರ ಯಾವುದೇ ಅಡೆತಡೆಯಿಲ್ಲದೇ ನಡೆಯಿತು. ಬಂದ್ ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟದ ಮುಖಂಡರು, ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿ ಪ್ರತಿಭಟಿಸಿದರು.

ಮೈಸೂರಿನಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು  ತಡೆದು ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬಸ್ಗಳಿಗೆ ಅಡ್ಡಲಾಗಿ ಪ್ರತಿಭಟನೆ ನಡೆಸಯಿತು. ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಎರಡು ಗಂಟೆ ಬಸ್ ಸಂಚಾರದಲ್ಲಿ ವ್ಯತ್ಯಯವಾಯಿತು. ಈ ಹಿನ್ನೆಲೆ ಪೊಲೀಸರು ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು. 

ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಎರಡು ಭಾಗಗಳಲ್ಲಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು. ಅನಂತರ ಬಸ್ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ.

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು, ಬಿಎಂಟಿಸಿ, ವಿಮಾನ-ರೈಲು ಹಾರಾಟ ಎಂದಿನಂತಿದ್ದು, ಪರೀಕ್ಷೆಗಳು ಯಾವುದೇ ಅಡೆತಡೆಯಿಲ್ಲದೇ ನಡೆದವು.

ಓಲಾ, ಊಬರ್ ಚಾಲಕರಿಂದ ಕೆಲ ಆಟೋ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಅವುಗಳ ಸಂಚಾರ ವಿರಳವಾಗಿತ್ತು. ಅಗತ್ಯ ಸೇವೆಗಳಾದ ಹಾಲು, ಔಷಧ, ದಿನಪತ್ರಿಕೆ, ತರಕಾರಿ ಸೇವೆಗಳು ಎಂದಿನಂತಿದ್ದವು.

ವಿಜಯಪುರದಲ್ಲಿ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ನಗರದ ನಿವಾಸಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದರು. ಕೆಎಸ್ಸಾರ್ಟಿಸಿ ಬಸ್ ಗಳು ಎಂದಿನಂತೆ ಓಡಾಡಿದವು. ಆಟೋಗಳು ಸಹ ರಸ್ತೆಗಿಳಿದಿದ್ದವು. ಅಂಗಡಿ ಮುಂಗಟ್ಟು ಹೋಟೆಲ್ ಗಳು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿದವು.

ಧಾರವಾಡ, ಹಾವೇರಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಎಂದಿನಂತೆ ಬಸ್, ಆಟೋ ಸಂಚಾರ ಮತ್ತು ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಹೊಟೇಲ್ ಗಳು ಕೂಡ ವಹಿವಾಟು ನಡೆಸಿದವು. ಬೆಳಗಾವಿ ಕೂಡ ಇದಕ್ಕೆ ಹೊರತಾಗಿರಲಿಲ್ಲ.

Leave a Reply