ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ ಕುರಿತ ಸಂಪೂರ್ಣ ವಿವರ

3 years ago

#Complete #details #Bengaluru #bandh #Cauvery #water

ಬೆಂಗಳೂರು ಬಂದ್ ಗೆ ರಾಜ್ಯ ಕಾಂಗ್ರೆಸ್ ಬೆಂಬಲ: ಡಿ.ಕೆ.ಶಿವಕುಮಾರ್

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ರೈತರು, ವಿವಿಧ ಪಕ್ಷಗಳ ಮುಖಂಡರು ಕಾವೇರಿ ಕಣಿವೆಯ ವಿವಿಧ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿರುವ ಬೆನ್ನಲ್ಲೇ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ಕರೆ ಕೇಳಿಬಂದಿದೆ.

ರೈತ ನಾಯಕರು, ಕನ್ನಡ ಪರ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಈ ಬಂದ್ ಕರೆಗೆ ಬೆಂಬಲ ಘೋಷಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಕೂಡ ಬಂದ್ ಗೆ ಸಹಕಾರ ನೀಡುವುದಾಗಿ ತಿಳಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಮ್ಮ ನೆಲ, ಜಲ, ಭಾಷೆ ವಿಚಾರದಲ್ಲಿ ಪಕ್ಷಾತೀತ ಹೋರಾಟ ಅಗತ್ಯ. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ. ಪ್ರತಿಭಟನೆ ಮಾಡೋಕೆ, ರಾಜ್ಯದ ಹಿತ ಕಾಪಾಡೋಕೆ ಸಹಕಾರ ಕೊಡ್ತೀವಿ ಎಂದು ಹೇಳಿದ್ದಾರೆ.

ನೀರು ಬಿಡುಗಡೆ ವಿರೋಧಿಸಿ ನಾಳೆ ಕರೆ ನೀಡಿರುವ ಬೆಂಗಳೂರು ಬಂದ್ ಗೆ 150ಕ್ಕೂ ಹೆಚ್ಚು ಸಂಘಟನೆಗಳು ಕರೆಕೊಟ್ಟಿದೆ. ಖಾಸಗಿ ಸಾರಿಗೆ ಒಕ್ಕೂಟದ 32 ಸಂಘಟನೆಗಳಿಂದಲೂ ಬೆಂಬಲ ಸಿಕ್ಕಿದೆ. ಈಗಾಗಲೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ನಾಳೆ ರಜೆ ಘೋಷಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಧಾನ್ಯ ವರ್ತಕರು, ಬಟ್ಟೆ ವ್ಯಾಪಾರಿಗಳು, ಚಿನ್ನ, ಬೆಳ್ಳಿ ಮಾರಾಟಗಾರರು, ಓಲಾ, ಉಬರ್ ಕೂಡ ಬಂದ್ ಬೆಂಬಲಿಸಿವೆ. ಹೀಗಾಗಿ ನಾಳೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸ್ತಬ್ಧವಾಗಲಿದೆ.

ಇದರ ಜೊತೆಯಲ್ಲಿ ರಾಮನಗರ ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ತಾಲ್ಲೂಕಿನಲ್ಲೂ ಬಂದ್ ನಡೆಸಲು ಸ್ಥಳೀಯ ಸಂಘಟನೆಗಳು ನಿರ್ಧರಿಸಿವೆ.

ಪ್ರಮುಖ ಬೇಡಿಕೆ: ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ಕೂಡಲೇ ವಿಧಾನಸಭೆ ಅವೇಶನ ಕರೆದು ಸಮಗ್ರ ಚರ್ಚಿಸಿ, ಸಂಕಷ್ಟ ಸೂತ್ರ ಜಾರಿ ಮಾಡುವ ತನಕ ನೀರು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ನೀಡಬೇಕು.

ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೂಡಲೇ ರದ್ದುಪಡಿಸಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ಪರಿಣಿತರು ನೀರಾವರಿ ತಜ್ಞರು, ರೈತ ಪ್ರತಿನಿಗಳು ಎಲ್ಲರನ್ನು ಒಳಗೊಂಡಂತೆ ಮಂಡಳಿ ರಚನೆ ಮಾಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು ಎಂಬುದು ಹೋರಾಟಗಾರರ ಒತ್ತಾಯವಾಗಿದೆ.

ಆಂಬುಲೆನ್ಸ್ ಸೇವೆ, ತರಕಾರಿ, ಹಾಲು, ಮೆಡಿಕಲ್ಸ್, ಆಸ್ಪತ್ರೆ, ಬ್ಯಾಂಕ್, ನಮ್ಮ ಮೆಟ್ರೋ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಇರುವುದಿಲ್ಲ.

Leave a Reply