ವಿದ್ಯುತ್ ದರ ಹೆಚ್ಚಳ ವಿರೋಧಿಸಿ ವಾಣಿಜ್ಯ ಸಂಸ್ಥೆ ಕರೆ ನೀಡಿದ್ದ ಕರ್ನಾಟಕ ಬಂದ್ ಸಂಪೂರ್ಣ ವಿಫಲ

3 years ago

ಬೆಂಗಳೂರು: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಹುಬ್ಬಳ್ಳಿಯ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ ಕರೆ ನೀಡಿದ್ದ ಕರ್ನಾಟಕ ಬಂದ್ ಸಂಪೂರ್ಣ ವಿಫಲಗೊಂಡಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಈ ಬಂದ್ ಕರೆಗೆ ಯಾರೊಬ್ಬರೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಂದೆರಡು ಕಡೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.

ಧಾರವಾಡ, ಬೆಳಗಾವಿ, ಹೊಸಪೇಟೆ ಮತ್ತು ಕಾರವಾರದ ಕೆಲವು ವಾಣಿಜ್ಯ ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದ ಯಾವುದೇ ಪ್ರದೇಶದಲ್ಲಿ ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲ ಕೆಲವು ವ್ಯಾಪಾರಿಗಳನ್ನು ಹೊರತುಪಡಿಸಿದರೆ ಸಾರ್ವಜನಿಕರು ಈ ಬಂದ್ ಕರೆಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡದ ಪರಿಣಾಮ ಸಂಪೂರ್ಣ ವಿಫಲವಾಗಿದೆ.

ತಾವು ನೀಡಿದ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಎಚ್ಚೆತ್ತುಕೊಂಡ ಸಂಘದ ಪದಾಧಿಕಾರಿಗಳು ತಮ್ಮ ಎಲ್ಲಾ ಸದಸ್ಯರನ್ನು ಸಂಪರ್ಕಿಸಿ ಬಂದ್ ಆಚರಿಸುವ ಬದಲಿಗೆ ತಮ್ಮ ಪ್ರವೇಶದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ನೀಡುವಂತೆ ಸೂಚಿಸಿದರು.

ಇದರ ಬೆನ್ನಲ್ಲೇ ಧಾರವಾಡದಲ್ಲಿ ಸಂಘದ ಪ್ರತಿನಿಧಿಗಳು ಸರ್ಕಾರದ ಹಣಕ್ಕೂ ಶವ ಯಾತ್ರೆ ಮಾಡಿ ಪ್ರತಿಭಟನೆ ಮಾಡಿದರೆ ಕಾರವಾರ, ಶಿವಮೊಗ್ಗ, ಬೀದರ್, ಬೆಳಗಾವಿ, ಅಥಣಿ, ರಾಯಬಾಗ, ದಾವಣಗೆರೆಯಲ್ಲಿ ಬೆರಳೆಣಿಕೆಯಷ್ಟು ವಾಣಿಜ್ಯೋದ್ಯಮಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹುಬ್ಬಳ್ಳಿಯ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ ಬಂದ್ ಕರೆ ರಾಜಕೀಯ ಪ್ರೇರಿತವಾಗಿದೆ. ವಿದ್ಯುತ್ ದರ ಹೆಚ್ಚಳ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವಿಲ್ಲ. ಇದು ಕೆಇಆರ್‌ಸಿ ಆದೇಶದ ಅನ್ವಯ ಜಾರಿಗೊಂಡಿರುವ ನಿರ್ಧಾರ. ಹೀಗಾಗಿ, ಇದರ ವಿರುದ್ಧ ಕಾನೂನು ಹೋರಾಟ ಮಾಡಬೇಕೆ ಹೊರತು ಪ್ರತಿಭಟನೆ ಸೂಕ್ತ ಮಾರ್ಗವಲ್ಲ ಎಂದು ಹೇಳಿದ ಎಫ್ ಕೆ ಸಿ ಸಿ ಐ ಬಂದ್ ನಲ್ಲಿ ಪಾಲ್ಗೊಳ್ಳದಂತೆ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಸಲಹೆ ಮಾಡಿತ್ತು.

ಇದರ ಜೊತೆಯಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಅವರು ದರ ಹೆಚ್ಚಳದಲ್ಲಿ ಸರ್ಕಾರದ ಪಾತ್ರವಿಲ್ಲ. ಈಗ ಜಾರಿಗೊಂಡಿರುವ ಕೆಇಆರ್‌ಸಿ ಆದೇಶದ ವಿರುದ್ಧ ಮನವಿ ಸೇರಿದಂತೆ ಎಲ್ಲ ಕಾನೂನು ಮಾರ್ಗಗಳನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಹೀಗಾಗಿ ಯಾರೂ ಕೂಡ ಬಂದ್ ನಲ್ಲಿ ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿದ್ದರು.

Leave a Reply