ವಿಐಪಿಗಳು ಎಂದರೆ ಯಾರು, ಅದಕ್ಕಿರುವ ಮಾನದಂಡವೇನು?

1 year ago

ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಮಾರಂಭ ಖಾಸಗಿ ಇರಬಹುದು ಇಲ್ಲವೇ ಕೌಟುಂಬಿಕ ಸಮಾರಂಭಗಳಿರಬಹುದು ಎಲ್ಲ ಕಡೆಯಲ್ಲೂ ವಿಐಪಿಗಳ ಸಂಸ್ಕೃತಿ ಹೆಚ್ಚಾಗಿದೆ. ಇಲ್ಲಿ ಯಾರು ಶ್ರೇಷ್ಠರಲ್ಲ ಯಾರು ಕನಿಷ್ಠರಲ್ಲ ಎನ್ನುವ ಕುವೆಂಪುರವರ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತದೆ.

ಆಹ್ವಾನ ಪತ್ರಿಕೆ ಹಂಚುವ ಸಂದರ್ಭದಲ್ಲಿಯೇ ಮುಖ್ಯರು ಮತ್ತು ಸಾಮಾನ್ಯರುಎನ್ನುವ ಎರಡು ವರ್ಗ ಸೃಷ್ಟಿಯಾಗುತ್ತದೆ. ವಿಐಪಿಗಳಿಗೆ ಒಂದು ರೀತಿಯ ಆಹ್ವಾನ ಪತ್ರಿಕೆ ಸಾಮಾನ್ಯರಿಗೆ ಮತ್ತೊಂದು ರೀತಿಯ ಪತ್ರಿಕೆ. ಮುಖ್ಯರು ಎನಿಸಿಕೊಂಡವರಿಗೆ ಮನೆಗೆ ಹೋಗಿ ಆಹ್ವಾನ ಪತ್ರಿಕೆಯನ್ನು ಉಡುಗೊರೆಯೊಂದಿಗೆ ನೀಡುವುದು, ಸಾಮಾನ್ಯರಿಗೆ ಸಿಕ್ಕಿದ ಕಡೆಯಲ್ಲಿ ಪತ್ರಿಕೆ ಕೊಡುವುದು. ಇನ್ನು ಮತ್ತೆ ಕೆಲವರಿಗೆ ಅವರ ಅನುಯಾಯಿಗಳ ಮೂಲಕ ಹಂಚಿಸುವುದು. ಕೊನೆಯದಾಗಿ ವಾಟ್ಸಪ್ ಗಳಲ್ಲಿ ಕಳುಹಿಸಿಕೊಡುವುದು.

ಇನ್ನು ಸಮಾರಂಭದಲ್ಲಿ ವಿಐಪಿಗಳು ನೇರವಾಗಿ ವೇದಿಕೆಯನ್ನು ಹತ್ತಬಹುದು. ಸಾಮಾನ್ಯರು ಸರತಿಯ ಸಾಲಿನಲ್ಲಿ ನಿಂತು ಬರಬೇಕು. ಅಸಮಾನ್ಯರಿಗೆ ಊಟದ ವ್ಯವಸ್ಥೆಯಲ್ಲೂ ಪ್ರತ್ಯೇಕವಾದಂತಹ ಜಾಗವಿರುತ್ತದೆ. ಸಾಮಾನ್ಯರಿಗೆ ಸಾಮಾನ್ಯವಾದಂತಹ ರೀತಿಯಲ್ಲಿ ವ್ಯವಸ್ಥೆ ಇರುತ್ತದೆ.

ಇನ್ನು ನೆಂಟರಲ್ಲಿ ಶ್ರೀಮಂತರಾಗಿದ್ದು ದೂರದ ಸಂಬಂಧಿಯಾದರು ಸಮಾರಂಭದಲ್ಲಿ ಹತ್ತಿರದವರಾಗುತ್ತಾರೆ. ಆರ್ಥಿಕವಾಗಿ ದುರ್ಬಲರಾದವರು ಹತ್ತಿರದ ಬಂಧುಗಳಾದರು ದೂರದವರಾಗುತ್ತಾರೆ. ಪ್ರಭಾವ ಇರುವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳವಣಿಗೆಯಾಗಿದ್ದರೆ ಅವರು ಬಂಧುಗಳಿಗಿಂತ ಹೆಚ್ಚು ಆತ್ಮೀಯರಾಗುತ್ತಾರೆ.

ಇನ್ನು ಸರ್ಕಾರಿ ಸಮಾರಂಭದಲ್ಲಿ ಹೇಳುವುದೇ ಬೇಡ. ನಾಯಕರು ಅವರ ಹಿಂದೆ ಬರುವ ಹಿಂಬಾಲಕರು ವಿಐಪಿಗಳಾಗುತ್ತಾರೆ. ಕುರ್ಚಿಗಳನ್ನ ತುಂಬಲು ಬರುವ ಮಂದಿ ಸಾಮಾನ್ಯರಾಗುತ್ತಾರೆ. ಇಲ್ಲಿಯೂ ಎಲ್ಲದರಲ್ಲೂ ಬಹಳಷ್ಟು ಅಂತರವಿರುತ್ತದೆ.

ಇವುಗಳನ್ನು ಗಮನಿಸಿದಾಗ ವಿಐಪಿ ಎನಿಸಿಕೊಳ್ಳಲು ನಮ್ಮ ಮನಸ್ಸುಗಳು ನಿರ್ಣಯಿಸಿರುವ ಮಾನದಂಡವೇನು ಎನ್ನುವುದು ಪ್ರಶ್ನೆಯಾಗಿದೆ. ಯಾವುದೋ ರೂಪದಲ್ಲಿ ಹಣವನ್ನ ಗಳಿಸಿ ಶ್ರೀಮಂತಿಕೆಯನ್ನ ಹೊಂದಿದ್ದರೆ ಅವರು ವಿಐಪಿಗಳು. ಯಾವುದೋ ರೂಪದಲ್ಲಿ ಅಧಿಕಾರವನ್ನು ಪಡೆದಿದ್ದರೆ ಅವರು ವಿಐಪಿಗಳು. ಮಾರ್ಗ ಯಾವುದಾದರು ಸರಿ, ಜನಪ್ರಿಯತೆ ಪಡೆದುಕೊಂಡಿದ್ದರೆ ಅವರು ವಿಐಪಿಗಳು.

ಸಮಾಜದಲ್ಲಿ ನಿಜವಾದ ವಿಐಪಿಗಳನ್ನ ನಮ್ಮ ಮನಸ್ಸುಗಳು ಗುರುತಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಹತ್ತಾರು ವರ್ಷಗಳ ಕಾಲ ಬಿದ್ದಾಗ ಕೈಹಿಡಿದು ಎತ್ತುವವರು, ಸಂಕಷ್ಟದ ಸಮಯದಲ್ಲಿ ಜೊತೆಯಲ್ಲಿ ನಿಂತವರು, ಯಾವುದೇ ಅಪೇಕ್ಷೆಗಳಿಲ್ಲದೆ ಪ್ರೀತಿಯನ್ನ ಸದಾ ನೀಡುವವರು, ಎಲ್ಲ ಸಂದರ್ಭಗಳಲ್ಲೂ ಶ್ರೇಯಸ್ಸನ್ನ ಬಯಸುವ ಎಲ್ಲ ಜೊತೆಗಾರರು ಅವರು ಏನೂ ಅಲ್ಲದಿದ್ದರೂ ಅವರಷ್ಟ ವಿಐಪಿಗಳು.

ಗೌರವದಿಂದ ದುಡಿದು ಬದುಕನ್ನು ನಡೆಸುವ ಶ್ರಮದ ಬದುಕಿನ ಪರಿಚಯಸ್ಥರೆಲ್ಲರೂ ವಿಐಪಿ ಗಳು. ಯಾರಿಗೂ ಕೇಡನ್ನು ಬಯಸದೆ ಯಾರ ಮನಸ್ಸಿಗೂ ನೋವು ಮಾಡದೆ ಯಾರಿಗೂ ಕಣ್ಣೀರು ಬರಲು ಕಾರಣಕರ್ತರಾಗದೆ ತಮ್ಮ ಪಾಡಿಗೆ ತಾವು ಪ್ರಾಮಾಣಿಕವಾಗಿ ಬದುಕುತ್ತಾ ತಮ್ಮ ಇತಿಮಿತಿಯಲ್ಲಿ ಸಮಾಜಕ್ಕೆ ಸ್ಪಂದಿಸುವ ಸದ್ದು ಗದ್ದಲವಿಲ್ಲದೆ ಇರುವ ಮಂದಿ ವಿಐಪಿಗಳು.

ಚಪ್ಪರದ ವೇಳೆಯಲ್ಲಿ ಬರುವ ವಿಐಪಿಗಳು ಚಟ್ಟ ಬಿದ್ದಾಗ ಅದೆಷ್ಟೋ ಮಂದಿ ಕಾಣೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಬಂದರೂ ಸಹ ಕ್ಷಣ ಕಾಲವಿದ್ದು ಮಾಯವಾಗುತ್ತಾರೆ ಶಿವ ಕಾಯುವ ಜಾಗಕ್ಕೆ ಬರುವುದಿಲ್ಲ.

ಹುಟ್ಟುವ ಭೂಮಿಯಲ್ಲಿ ಸಾಮಾನ್ಯರು ಅಸಮಾನ್ಯರೆಂಬ ಜಾಗಗಳಿಲ್ಲ, ಹುಟ್ಟುವ ಸ್ಥಳದಲ್ಲೂ ಅವರಿಗೊಂದು ಇವರಿಗೊಂದು ಎಂಬ ಪ್ರತ್ಯೇಕ ಜಾಗವಿಲ್ಲ, ಅಂತಿಮವಾಗಿ ಸುಡುವ ಹೂಳುವ ಭೂಮಿಯಲ್ಲೂ ಸಾಮಾನ್ಯರಿಗೂ ಒಂದು ಅಸಮಾನ್ಯರಿಗೊಂದು ಎಂಬ ಸ್ಥಳಗಳಿಲ್ಲ.

ಉಸಿರಾಡುವ ಗಾಳಿ ಎಲ್ಲರಿಗೂ ಒಂದೇ, ಕುಡಿಯುವ ನೀರು ಎಲ್ಲರಿಗೂ ಒಂದೇ, ಚಂದ್ರ ಎಲ್ಲರಿಗೂ ಒಂದೇ, ಸೂರ್ಯನು ಎಲ್ಲರಿಗೂ ಒಂದೇ, ಎಲ್ಲರ ದೇಹವು ಅಂಗಾಂಗಗಳು ಕ್ರಿಯಾಶೀಲವಾಗಿ ಇರುವ ತನಕ ಒಂದೇ.

ರೈತ, ಸೈನಿಕ, ಸ್ವಚ್ಛತೆ ಮಾಡುವ ಮಂದಿ, ನಿಜವಾದ ವಿಐಪಿಗಳು ಅವರಿಲ್ಲದಿದ್ದರೆ ಎಲ್ಲವೂ ಅವ್ಯವಸ್ಥೆ. ಆಮಂತ್ರಣದಲ್ಲಿ, ಆತಿಥ್ಯದಲ್ಲಿ, ಸತ್ಕಾರದಲ್ಲಿ, ನೋಟದಲ್ಲಿ, ಊಟದಲ್ಲಿ, ಹುಟ್ಟು ಹಾಕಿಕೊಂಡಿರುವ ವಿಐಪಿ ಸಂಸ್ಕೃತಿಯನ್ನು ಕಡಿತಗೊಳಿಸಿಕೊಳ್ಳುತ್ತಾ ಇಲ್ಲಿ ಎಲ್ಲರೂ ಮುಖ್ಯರೆ ಇಲ್ಲಿ ಯಾರು ಕನಿಷ್ಠರಲ್ಲ ಎಂಬ ಮಾತಿನಂತೆ ಬದುಕುವ ವ್ಯವಸ್ಥೆ ನಮ್ಮ ಸಮಾಜದಲ್ಲಿ ರೂಪಿತವಾಗುವ ರೀತಿಯಲ್ಲಿ ನಮ್ಮ ಮನಸ್ಸುಗಳು ಪರಿವರ್ತನೆ ಆಗುವ ದಿನಗಳು ಬರಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply