ಬಸವ ಕಲ್ಯಾಣದ ಸಮಾವೇಶವೂ… ಲಿಂಗಾಯತರ ಪಥ ಸಂಚಲನವೂ…!

3 years ago

ಇದೇನು!? ಮೊದಲೇ ಟೀಕೆಗಳು ಬರುತ್ತಿದ್ದವು. ಅಂತಹವಕ್ಕೆ ಪುಷ್ಠಿ ನೀಡುವಂತೆ ಲಿಂಗಾಯತರಿಂದ ಪಥ ಸಂಚಲನ! ಯಾರು ಇದಕ್ಕೆ ಹೆಸರಿಟ್ಟವರು? ಪಥ ಸಂಚಲನ ಎಂದರೆ ನಮ್ಮ ತಲೆಯಲ್ಲಿ ಬರುವುದು ಬೇರೆಯೇ. ಯಾವುದನ್ನು ನಾವು ಅನುಭವಿಸಿದ್ದೇವೆ, ಯಾರಿಂದ ಹಾಳಾಗಿದ್ದೇವೆ ಅವರದೇ ಹೆಸರು ಬೇಕಿತ್ತೆ? ಕೆಲವರಿಗೆ ರಾಜಕೀಯ ಉದ್ದೇಶವೂ ಇರಬಹುದು. ಕಲ್ಯಾಣದಿಂದ ಟಿಕೆಟ್ ಪಡೆವ ಉಮೇದಿಯೂ ಇದೆ ಎನ್ನುವ ಆರೋಪವೂ ಇದೆ. ಇದು ನೋಡಿದರೆ ನಮಗೆ ನಿಜ ಅನ್ನಿಸಲ್ಲವೆ? ಇನ್ನು ಸಮಾವೇಶದಲ್ಲಿ ನೈಜ ವಿಚಾರವಂತರ, ಲಿಂಗಾಯತ ಸಮುದಾಯದ ಕೆಲಸಗಾರರನ್ನು ಬಿಟ್ಟು ಬರೀ ಅವೇ ಒಂದೆರಡು ಮುಖಗಳ ಉಪನ್ಯಾಸ ಬೇಕಿತ್ತಾ? ಮೊನ್ನೆ ತರಳಬಾಳುವಿನಲ್ಲೂ ಇವರೇ, ನಿನ್ನೆ ಏನೇ ನಡೆದರೂ ಇವರೇ… ಮತ್ತೆ ಇಲ್ಲೂ ಅವರೇ..!

ನಮಗೆ ಯಾರೂ ಸಿಗದಂತ ‘ಬರ’ವೇ? ರಾಜ್ಯದಲ್ಲಿ ನೂರಾರು ಲಿಂಗಾಯತ ಪ್ರಗತಿಪರರು, ಬರಹಗಾರರು, ಪತ್ರಕರ್ತರು, ಸೃಜನಶೀಲರು, ಕಲಾವಿದರು, ಸಾಹಿತಿಗಳು ಇದ್ದಾರೆ. ಅವರನ್ನು ಇಲ್ಲಿ ಗುರುತಿಸುವುದಾಗಲಿ, ಗೌರವಿಸುವುದಾಗಲಿ ಆಗಲಿಲ್ಲ. ಉತ್ತಮ ಗೋಷ್ಠಿಗಳೂ ಇಲ್ಲ. ಅವರ ಊರಲ್ಲಿ ಎರಡು ಜನವೂ ಕಿಮ್ಮತ್ತು ಕೊಡದಿರುವವರನ್ನ, ಶರಣೆಯ ಹೆಸರಲ್ಲಿ ಫೈನಾನ್ಸ್ ಮಾಡಿಕೊಂಡು ಬಡ್ಡಿ ವ್ಯವಹಾರ ಮಾಡುವ, ಲಕ್ಷಗಟ್ಟಲೇ ಸಂಬಳ ಪಡೆದು ಆರಾಮಾಗಿರುವ, ಉಗ್ರವಾಗಿ ಬರೆಯೋದನ್ನೇ ಚಟ ಮಾಡಿಕೊಂಡು ಸಾಮಾನ್ಯ ಲಿಂಗಾಯತರು ನಮ್ಮತ್ತ ಸುಳಿಯದಂತೆ ಕಂದಕ ಸೃಷ್ಟಿಸುವ ಇವರೇ ಸಮಾವೇಶದಲ್ಲಿ ‘ಯುವಕರಿಗೆ’ ವಿಷಯ ಮಂಡಿಸಿ ಪಾಠ ಹೇಳುವುದು ನಮಗೆಲ್ಲ ಮಾದರಿಯೇ?

‘ದೊಡ್ಡ’ವರು ಯೋಚಿಸಬೇಕು. ಆಯಕಟ್ಟಿನ ಪದಾಧಿಕಾರಿ ಹುದ್ದೆ ಪಡೆವ, ಕೆಲಸ ಮಾಡದೇ ಹೆಸರು ಗಿಟ್ಟಿಸುವ ಇನ್ನಷ್ಟು ಜನರದ್ದು ಬೇರೆ ವರಸೆ. ತಮ್ಮನ್ನು ತಾವು ತೇಯ್ದುಕೊಳ್ಳುತ್ತಿರುವ ನಿಜ ಬಸವಾದಿಶರಣರ ಆಶಯದ ಎಷ್ಟೋ ಜನರಿದ್ದಾರೆ. ಅವರನ್ನು ಮುನ್ನೆಲೆಗೆ ತನ್ನಿ.

ಆಮಂತ್ರಣ ಪತ್ರಿಕೆ ನೋಡಿದರೆ ನೂರಾರು ಸ್ವಾಮೀಜಿಗಳ ಹೆಸರುಗಳನ್ನೇ ಅದರಲ್ಲಿ ತುಂಬಲಾಗಿದೆ. ಮಠಗಳಿಂದ ಮಹಾಮನೆಗೆ ಹೋಗಬೇಕಾದ ನಾವು, ಬಸವಣ್ಣನವರ ಹೆಸರೇ ಹೇಳದ ಮಠಗಳ ಕಡೆ ಹೋಗುತ್ತಿದ್ದೇವೆ ಈಗ! ಎಲ್ಲರನ್ನು ಒಟ್ಟುಗೂಡಿಸಬೇಕು, ಆದರೆ ಅದರ ಹೆಸರಲ್ಲಿ ಅಪಸವ್ಯ ಎದ್ದು ಕಾಣಬಾರದು.

ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲರಿಗೂ ಮಾತಾಡುವ ಪ್ರಜಾತಾಂತ್ರಿಕ ವ್ಯವಸ್ಥೆ ಇತ್ತು. ಆ ಕಾರಣಕ್ಕೆ ನಾನೂ ಇಲ್ಲಿ ಇದನ್ನು ಹೇಳುತ್ತಿರುವೆ. ಈ ಚುನಾವಣೆ ಸಂದರ್ಭ ಸಮಾವೇಶ ಬೇಡ, ಬೇರೆ ಅರ್ಥ ಬರುತ್ತದೆ ಅಂತ ಕೆಲವರು ಮೊದಲೇ ಹೇಳಿದ್ದರು. ಇಲ್ಲಿ ನೋಡಿದರೆ ಇವತ್ತು ಅಮಿತ್ ಶಾ ಕಾರ್ಯಕ್ರಮ, ಊರ ತುಂಬ ಕಟೌಟ್, ಧ್ವಜಗಳು. ಮೊನ್ನೆ ಒಬ್ಬರು ದೂರಿದಂತೆ ನಾಳೆ ಅದೇ ಟೆಂಟಲ್ಲಿ ನಮ್ಮ ಸಮಾವೇಶ, ಪಥ ಸಂಚಲನ! ಇಂತಹ ವೈರುಧ್ಯ ಬೇಕಿತ್ತಾ?

ಬೇಸರವಿದ್ದರೂ ನಮ್ಮದೇ ಕೆಡುತ್ತದೆ ಎಂದು ಸುಮ್ಮನಿದ್ದೆ, ಈಗ ಈ “ಪಥ ಸಂಚಲನ” ನೋಡಿ ಇದನ್ನು ಬರೆಯಬೇಕಾಯಿತು. ಪಥ ಸಂಚಲನ ಬಸವ ದಳದವರು ಈ ಹಿಂದೆಯೂ ಮಾಡಿದ್ದರು. ಆದರೆ ಈಗಿನ ಸ್ಥಿತಿ, ಸಮಯವೇ ಬೇರೆ ಇದೆ. ಯಾವ ಸ್ವಾರ್ಥವೂ ಪುರುಷಾರ್ಥವೂ ನನಗಿಲ್ಲ. ಕ್ಷಮೆ ಇರಲಿ ದೊಡ್ಡವರೇ…
– ಶಿವಕುಮಾರ್ ಉಪ್ಪಿನ, ಪತ್ರಕರ್ತ

Leave a Reply