ನಿಲ್ಲದ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ: ಅಭ್ಯರ್ಥಿಗಳಲ್ಲಿ ಆತಂಕ

2 years ago

ಬೆಂಗಳೂರು: ಅಕ್ರಮದ ಕಾರಣಕ್ಕೆ ರದ್ದುಗೊಂಡಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿದೆ. ಇದಷ್ಟೇ ಅಲ್ಲ, ಇದರ ಜೊತೆಗೆ ನಡೆಯುತ್ತಿರುವ ಆದಾಯ ತೆರಿಗೆ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ನಡೆಸುತ್ತಿರುವ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಅದನ್ನು ಮಾರಾಟ ಮಾಡಲು ಯತ್ನಿಸಿದ ಗುಪ್ತದಳದ ಪಿ.ಎಸ್.ಐ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಪ್ರಶ್ನೆಪತ್ರಿಕೆಗಳ ಸೋರಿಕೆಯಾಗಿರಬಹುದೆಂಬ ಶಂಕೆ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಪರೀಕ್ಷೆಗೆ ಸಂಬಂಧಪಟ್ಟಂತೆ ಗುಪ್ತದಳದ ಸಬ್ ಇನ್ಸ್ಪೆಕ್ಟರ್ರೊಬ್ಬರು ಪ್ರಶ್ನೆಪತ್ರಿಕೆನೀಡುವುದಾಗಿ ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡುವ ಆಡಿಯೋ ವೈರಲ್ ಆಗಿತ್ತು. ಆಡಿಯೋ ಗಮನಿಸಿದ ಪರೀಕ್ಷಾರ್ಥಿಗಳು ಹಾಗೂ ಕೆಲವು ಪೋಷಕರು ನಿನ್ನೆ ರಾತ್ರಿ ಬೆಂಗಳೂರಿನ ಚಂದ್ರಾ ಲೇ ಔಟ್ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿ ದೂರು ದಾಖಲಿಸಿದರು. ಆ ದೂರನ್ನು ಹೆಚ್ಚಿನ ತನಿಖೆಗಾಗಿ ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾಯಿಸಿದ್ದಾರೆ.

ಆಡಿಯೋ ವೈರಲ್ ಆದ ಬೆನ್ನಲ್ಲೇ ಸಿಸಿಬಿ ಪೊಲೀಸರು ಪಿಎಸ್ಐಯನ್ನು ವಶಕ್ಕೆ ಪಡೆದು ಆಡಿಯೋ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆಯೇ ಅಥವಾ ಯಾವುದಾರೂ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೈರಲ್ ಆಗಿರುವ ಆಡಿಯೋದಲ್ಲಿ ಹಣಕ್ಕೆ ಬೇಡಿಕೆಯಿಟ್ಟಿರುವುದರ ಜೊತೆಗೆ ಪ್ರಶ್ನೆಪತ್ರಿಕೆ ಖುದ್ದಾಗಿ ಕೊಡುವುದಾಗಿ ಹೇಳಿರುವುದು, ಪೋಸ್ಟಿಂಗ್ ಕೊಡಿಸುವುದಾಗಿಯೂ ಪಿಎಸ್ಐ ಆಮಿಷವೊಡ್ಡಿರುವುದು ಅಭ್ಯರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಡಾ. ಪರಮೇಶ್ವರ್, ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯವರು ಪಿಎಸ್ಐ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದಲೂ ಪಿಎಸ್ಐ ಹುದ್ದೆಗಳ ನೇಮಕಾತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ವ್ಯವಸ್ಥೆಯ ಮೇಲೆಯೇ ಜನರಿಗೆ ಅಪನಂಬಿಕೆ ಬರುವಂತಾಗಿದೆ. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನೂ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದರು.

ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದೆ ನಡೆದ ಯಾವುದೇ ಲೋಪಗಳೂ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಗುಪ್ತಚರ ಇಲಾಖೆ ಎಚ್ಚರಿಕೆಯಿಂದ ಮಾಹಿತಿ ಕಲೆ ಹಾಕುತ್ತಿದೆ. ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ತಾವು ಮಾಹಿತಿ ಕಲೆ ಹಾಕುವ ಸಲುವಾಗಿ ನಕಲಿ ಕರೆ ಮಾಡಿದ್ದಾಗಿ ಹೇಳುತ್ತಿದ್ದಾರೆ. ಅದರ ಸತ್ಯಾಸತ್ಯತೆ ಬಗ್ಗೆ ಕೂಡ ಸಿಸಿಬಿಯವರು ವಿಚಾರಣೆ ನಡೆಸುತ್ತಿದ್ದಾರೆ. ಅಣಕು ಕರೆ ಮಾಡಿರುವುದು ನಿಜವೇ ಅಥವಾ ಯಾವುದಾದರೂ ಹಗರಣಗಳು ನಡೆದಿವೆಯೇ ಎಂಬುದರ ಬಗ್ಗೆ ಕೂಡ ಸಿಸಿಬಿ ಪರಿಶೀಲನೆ ನಡೆಸುತ್ತಿದೆ ಎಂದರು.

ಈ ನಡುವೆ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಕಿಂಗ್ಪಿನ್ಗಳು ಸಚಿವ ಸಂಪುಟದಲಿದ್ದಾರೋ ಅಥವಾ ಹೊರಗಡೆ ಇದ್ದಾರೋ ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗ ಮಾಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ನಡೆಯುವ ಮೊದಲೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಹೊರ ಜಗತ್ತಿಗೆ ಗೊತ್ತಾಗಬೇಕು. ಅವರಿಗೆ ರಕ್ಷಣೆ ಯಾರು ಕೊಡುತ್ತಾರೆ, ಇದರ ಹಿಂದಿನ ಪ್ರಭಾವಿ ಶಕ್ತಿಗಳು ಯಾವುವು. ಇದನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.

ಹಿಂದೆ ಇಂಥದ್ದೇ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟಲಾಗಿತ್ತು. ಆದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದು ಗಂಭೀರ ವಿಚಾರ. ಹೀಗಾಗಿ ಹೊರ ಜಗತ್ತಿಗೆ ಇದರ ಕಿಂಗ್ಪಿನ್ಗಳು ಯಾರೆಂಬುದು ಗೊತ್ತಾಗಬೇಕು. ರಾಜಾಶ್ರಯದ ಕೃಪಕಟಾಕ್ಷದ ಮೂಲಕ ಪ್ರಕರಣ ನಡೆಯುತ್ತಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತದೆ ಎಂದರು.

Leave a Reply