ದೆಹಲಿ ಮಾದರಿಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮ್ಯೂಸಿಯಂ ಸ್ಥಾಪನೆಯಾಗಲಿ

1 year ago

ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯದ ರೀತಿಯಲ್ಲಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳ ಸಂಗ್ರಹಾಲಯವನ್ನು ನಿರ್ಮಿಸಿ.

ಭಾರತ ದೇಶದ ಮಾಜಿ ಪ್ರಧಾನಿಗಳ ಸಾಧನೆಗಳನ್ನು ಪರಿಚಯಿಸುವ ವಸ್ತು ಸಂಗ್ರಹಾಲಯವನ್ನು ನವದೆಹಲಿಯಲ್ಲಿ ಸ್ಥಾಪಿಸಿರುವ ರೀತಿಯಲ್ಲಿ ಕರ್ನಾಟಕದಲ್ಲಿ ಸಹ ಮಾಜಿ ಮುಖ್ಯಮಂತ್ರಿಗಳ ಸಾಧನೆ ಮತ್ತು ಬದುಕನ್ನು ಪರಿಚಯಿಸುವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಇದು ಸಕಾಲವಾಗಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆಯನ್ನು ಮಾಡಿ ನಿಧನರಾದಂತಹ ಬಹಳಷ್ಟು ಮಾಜಿ ಮುಖ್ಯಮಂತ್ರಿಗಳ ಬದುಕಿನ ಪರಿಚಯ ಮತ್ತು ಸಾಧನೆಗಳ ಅರಿವು ಯಾರಿಗೂ ಇರುವುದಿಲ್ಲ. ಇವುಗಳನ್ನು ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಯಾವುದೇ ದಾರಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ವಸ್ತು ಸಂಗ್ರಹಾಲಯ ಹೆಚ್ಚು ಉಪಯುಕ್ತವಾಗುತ್ತದೆ.

ಯಾವುದೇ ಒಬ್ಬ ಮಾಜಿ ಮುಖ್ಯಮಂತ್ರಿ ನಿಧನರಾದ ಸಂದರ್ಭದಲ್ಲಿ ಸದನದಲ್ಲಿ ಅವರ ಬಗ್ಗೆ ಸಂತಾಪವನ್ನು ಸೂಚಿಸುತ್ತ ಅವರ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಘೋಷಿಸುತ್ತಾರೆ. ನಂತರದ ದಿನಗಳಲ್ಲಿ ಅವುಗಳ ಕಡೆ ಯಾರೂ ಗಮನಹರಿಸುವುದಿಲ್ಲ. ಇಂತಹ ಉದಾಹರಣೆಗೆ ಶ್ರೀರಾಮಕೃಷ್ಣ ಹೆಗಡೆಯವರ ವಿಚಾರದಲ್ಲಿ ಸರ್ಕಾರಗಳು ನಡೆದುಕೊಂಡಿರುವುದೇ ಸಾಕ್ಷಿಯಾಗಿದೆ.

2004ರಲ್ಲಿ ಅವರು ನಿಧನರಾದ ಸಂದರ್ಭದಲ್ಲಿ ಸದನದಲ್ಲಿ ಸಂತಾಪ ಸಭೆಯ ಸಂದರ್ಭದಲ್ಲಿ ಘೋಷಿಸಿರುವಂತಹ ಒಂದೇ ಒಂದು ಕಾರ್ಯಕ್ರಮವು ಅವರ ಹೆಸರಿನಲ್ಲಿ ಜಾರಿಯಾಗಿರುವುದಿಲ್ಲ.

ಅವರು ನಿಧನರಾಗಿ 20 ವರ್ಷಗಳಾದರೂ ಅವರ ಹೆಸರಿನಲ್ಲಿ ಯಾವುದೇ ಒಂದು ಕಾರ್ಯಕ್ರಮವನ್ನು ಯಾವ ಸರ್ಕಾರವೂ ಜಾರಿಗೊಳಿಸಿರುವುದಿಲ್ಲ. ಆದರೆ ವೇದಿಕೆಗಳು ಸಿಕ್ಕಿದ ಸಂದರ್ಭದಲ್ಲಿ ಅವರ ಹುಟ್ಟಿದ ಮತ್ತು ನಿಧನದ ನೆನಪಿನ ಕಾರ್ಯಕ್ರಮಗಳಲ್ಲಿ ಸರ್ಕಾರದ ಪಾಲುದಾರರು ಆಡುವ ಮಾತುಗಳಿಗೆ ಮಿತಿಯೇ ಇರುವುದಿಲ್ಲ.

ಪ್ರಭಾವವಿದ್ದರೆ, ಇಲ್ಲವೇ ಅವರ ಕುಟುಂಬದವರಿಂದ ಒಂದಷ್ಟು ಮತಗಳು ಚುನಾವಣೆಗಳಲ್ಲಿ ದೊರೆಯುವ ಹಾಗಿದ್ದರೆ ಮಾತ್ರವೇ ನಾಯಕರುಗಳಿಗೆ ಸತ್ತ ನಂತರ ಮನ್ನಣೆ ದೊರೆಯುತ್ತದೆ. ಅವರ ಕುಟುಂಬದವರು ರಾಜಕಾರಣದಲ್ಲಿ ಇಲ್ಲದಿದ್ದರೆ, ಅವರ ಪ್ರಭಾವ ಮತಗಳನ್ನು ತರಿಸುವ ಶಕ್ತಿ ಇಲ್ಲದಿದ್ದರೆ ಅವರುಗಳನ್ನು ನೆನಪಿಸಿಕೊಳ್ಳುವವರು ಯಾರೂ ಇರುವುದಿಲ್ಲ.

ಇಂತಹ ತಾರತಮ್ಯವನ್ನು ಹೋಗಲಾಡಿಸಲು ಮಾಜಿ ಮುಖ್ಯಮಂತ್ರಿಗಳ ಮ್ಯೂಸಿಯಂ ದೆಹಲಿ ಮಾದರಿಯಲ್ಲಿ ಸ್ಥಾಪನೆಯಾಗಿ ನಮ್ಮನ್ನು ಅಗಲಿರುವ ಎಲ್ಲ ಮಾಜಿ ಮುಖ್ಯಮಂತ್ರಿಗಳು ಗೌರವ ದೊರೆಯುವಂತಾಗಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply