ಮೋಹನ್ ಕೊಂಡಜ್ಜಿ ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಹೋರಾಟಕ್ಕೆ ಜಯ

1 year ago

ಮೋಹನ್ ಕೊಂಡಜ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಹೋರಾಟಕ್ಕೆ ಸಂದ ಜಯ

ಎಸ್.ನಿಜಲಿಂಗಪ್ಪನವರ ಮನೆ ಖರೀದಿಗೆ ಸರ್ಕಾರ ಬದ್ಧ

ಮಾಜಿ ಮುಖ್ಯಮಂತ್ರಿ ಮುತ್ಸದ್ಧಿ ದಿವಂಗತ ನಿಜಲಿಂಗಪ್ಪ ಅವರ ಮನೆಯನ್ನು ಸರ್ಕಾರ ಖರೀದಿಸಿ ಅಭಿವೃದ್ಧಿಪಡಿಸಲು ಈವರೆಗೆ ಸುಮ್ಮನೆ ಕುಳಿತಿದ್ದ ಚಿತ್ರದುರ್ಗ ಜಿಲ್ಲಾಡಳಿತ ಇದೀಗ ತನ್ನ ನಡವಳಿಕೆಗೆ ತಾನೇ ವಿಷಾಧ ವ್ಯಕ್ತಪಡಿಸಿ ಸರ್ಕಾರದ ಆದೇಶದನ್ವಯ ಶ್ರೀಯುತರ ಮನೆಯನ್ನು ಕೊಳ್ಳಲು ನಿರ್ಧರಿಸಿ ಅವರ ಕುಟುಂಬಸ್ಥರಿಗೆ ಪತ್ರ ಬರೆದಿದೆ.

ಹಿನ್ನೆಲೆ: ಶ್ರೀ ನಿಜಲಿಂಗಪ್ಪನವರ ಮನೆಯನ್ನು ಕೊಳ್ಳಲು ೨೦೨೦-೨೧ ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಅಧಿಕಾರಿಗಳ ರೆಡ್ ಟೇಪಿಸಂನಿಂದ ಆ ಕೆಲಸ ನೆನೆಗುದಿಗೆ ಬಿದ್ದಿತ್ತು. ಅದರಿಂದ ಬೇಸತ್ತಿದ್ದ ನಿಜಲಿಂಗಪ್ಪನವರ ಮಕ್ಕಳು ಮೊಮ್ಮಕ್ಕಳು ಖಾಸಗಿಯವರಿಗೆ ಮನೆ ಮಾರಲು ಸಿದ್ಧರಾಗಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು ಕೂಡಾ..!

ಕಳೆದ ಐದಾರು ವರ್ಷಗಳಿಂದ ಈ ಕೆಲಸವನ್ನು ಆಗುಮಾಡಲು ಇದರ ಹಿಂದೆಯೇ ಇದ್ದ ಆಗಿನ ವಿಧಾನ ಪರಿಷತ್ ಸದಸ್ಯ ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ತಾವು ಮಾಜಿ ಆದ ನಂತರವೂ ಹಿಡಿದ ಕೆಲಸ ಬಿಡದಂತೆ ಫಾಲೋಅಪ್ ಮಾಡುತ್ತಿದ್ದರು. ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ನಿತ್ಯವೂ ಸರ್ಕಾರವನ್ನು ಎಚ್ಚರಿಸುತ್ತಾ, ಅಧಿಕಾರಿಗಳ ರೆಡ್ ಟೇಪಿಸಮ್ ಬಗ್ಗೆ ಕಟಕಿಯಾಡುತ್ತಾ ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು ಅಷ್ಟೇ ಏಕೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಚೀಫ್ ಸೆಕ್ರೆಟರಿವರೆಗೆ ಈ ವಿಷಯದ ಬಗ್ಗೆ ಗಮನ ಸೆಳೆದದ್ದು ಸಮಕಾಲೀನ ಇತಿಹಾಸ.

ಇನ್ನು ಮುಂದಿನ ದಿನಗಳಲ್ಲಿ ರಾಷ್ಟ್ರನಾಯಕ ನಿಜಲಿಂಗಪ್ಪನವರು ವಾಸವಿದ್ದ ಮನೆಯನ್ನು ಯಾವ ರೀತಿಯಾಗಿ ಅಭಿವೃದ್ಧಿಪಡಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಮತ್ತೂ ಏನಾದರೂ ಸರ್ಕಾರ ಅಥವಾ ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸಿದರೆ ಮೋಹನ್ ಕುಮಾರ್ ಕೊಂಡಜ್ಜಿ ಮತ್ತೆ ತಮ್ಮ ಲೇಖನಿ ಝಳಪಿಸುವುದು ಗ್ಯಾರಂಟಿ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.

ಅದೇನೇ ಇರಲಿ ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಅಭಿನಂದನೆಗಳು. ಈ ಕೆಲಸವನ್ನು ಆಗುಮಾಡಿದ ಮೋಹನ್ ಕುಮಾರ್ ಕೊಂಡಜ್ಜಿ ಅವರಿಗೆ ಕೂಡಾ. ಇನ್ನೂ ವಿಶೇಷವಾಗಿ ದುಬಾರಿ ಬೆಲೆಯ ಈ ಆಸ್ತಿಯನ್ನು ಅತ್ಯಂತ ಕಡಿಮೆ ಬೆಲೆಗೆ ಸರ್ಕಾರಕ್ಕೆ ಒಪ್ಪಿಸುವ ಅವರ ಕುಟುಂಬದ ಕುಡಿ ವಿನಯ್ ಅವರು ಕೂಡಾ ಅಭಿನಂದನಾರ್ಹರು.

– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು

Leave a Reply