ಅಂಬರೀಶ್ ಅಭಿಮಾನಿಯೊಬ್ಬರ ಅಂತರಾಳದ ವಿಶ್ಲೇಷಣೆ
ಅಂಬರೀಷ್ ಮತ್ತು ಅವರ ಕುಟುಂಬದ ಮೇಲೆ ಕುಮಾರಸ್ವಾಮಿಯವರಿಗೆ ಅದೇನಂಥಾ ಸಿಟ್ಟೋ ಗೊತ್ತಿಲ್ಲ. ಅಂಬರೀಷ್ ಅವರ ನಿರ್ಗಮನದ ನಂತರ ಆ ಕುಟುಂಬಕ್ಕೆ ಒಂದಿಲ್ಲೊಂದು ಕಾಟ ಕೊಡುತ್ತಲೇ ಬರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಮಂಡ್ಯದಿಂದ ಸ್ಪರ್ಧಿಸುವ ಏಕೈಕ ಕಾರಣಕ್ಕೆ ಹಠಕ್ಕೆ ಬಿದ್ದು ಸುಮಲತಾ ಅಂಬರೀಷ್ ಅವರಿಗೆ ಟಿಕೇಟ್ ತಪ್ಪಿಸಿದ್ದ ಕುಮಾರಸ್ವಾಮಿ ಇದೀಗ ಚನ್ನಪಟ್ಟಣದ ಉಪಚುನಾವಣೆಯಲ್ಲೂ ಸುಮಲತಾ ಅವರ ಮೇಲಿನ ತಮ್ಮ ಸೇಡಿನ ರಾಜಕಾರಣವನ್ನು ಮುಂದುವರೆಸಿದ್ದಾರೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಜೆಡಿಎಸ್ ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಅಧಿಕೃತವಾಗಿ ನಿಖಿಲ್ ಕುಮಾರಸ್ವಾಮಿ ಎನ್ ಡಿ ಎ ಅಭ್ಯರ್ಥಿ. ಹಾಗಾಗಿ ರಾಜ್ಯ ಬಿಜೆಪಿ ನಾಯಕರೆಲ್ಲರೂ ನಿಖಿಲ್ ಪರವಾಗಿ ಚನ್ನಪಟ್ಟಣಕ್ಕೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಒಳಗೊಳಗೇ, ಇಷ್ಟು ದಿನ ಬಿಜೆಪಿಯಲ್ಲೇ ಇದ್ದ ಯೋಗೇಶ್ವರ್ ಅವರಿಗೆ ಸಾಥ್ ಕೊಡುತ್ತಿರುವ ಬಿಜೆಪಿಯ ಕೆಲ ಒಕ್ಕಲಿಗ ನಾಯಕರು ನೆಪಕ್ಕಾದರು ಬಂದು ಪ್ರಚಾರ ಮಾಡಿ ಹೋಗುತ್ತಿದ್ದಾರೆ. ಆ ನಿಟ್ಟಿನಲ್ಲಿ ನೋಡಿದಾಗ, ಅಧಿಕೃತವಾಗಿ ಬಿಜೆಪಿ ಪಕ್ಷದಲ್ಲಿರುವ ಸುಮಲತಾ ಅವರೂ ಚೆನ್ನಪಟ್ಟಣಕ್ಕೆ ಬಂದು ಪ್ರಚಾರ ಮಾಡಬೇಕಿತ್ತು. ಯಾಕೆಂದರೆ, ಚನ್ನಪಟ್ಟಣದಲ್ಲಿ ಅಂಬರೀಷ್ ಅವರ ದೊಡ್ಡ ಅಭಿಮಾನಿ ಬಳಗವಿದೆ. ಸುಮಲತಾ ಕೂಡಾ ಇಲ್ಲಿ ತಮ್ಮ ವೈಯಕ್ತಿಕ ಪ್ರಭಾವ ಹೊಂದಿದ್ದಾರೆ. ಆದರೂ ಅವರು ಚನ್ನಪಟ್ಟಣದ ಪ್ರಚಾರದಲ್ಲೆಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಈ ಕುರಿತು ಮಾಧ್ಯಮದವರು ಕೇಳಿದಾಗ, “ಪಕ್ಷ ನನ್ನನ್ನು ಪ್ರಚಾರ ಮಾಡಿ ಎಂದು ಕೇಳಿಲ್ಲ. ನನ್ನನ್ನು ಬಳಸಿಕೊಳ್ಳಬೇಕೆಂದು ಯಾವಾಗ ಪಕ್ಷಕ್ಕೆ ಅನ್ನಿಸುತ್ತದೆಯೋ ಆಗ ಪ್ರಚಾರಕ್ಕೆ ಹೋಗುತ್ತೇನೆ” ಎಂದು ಹೇಳಿದ್ದಾರೆ.
ಅವರ ಮಾತನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರಚಾರದಲ್ಲಿ ಭಾಗವಹಿಸುವಂತೆ ಅವರಿಗೆ ಬಿಜೆಪಿ ಪಕ್ಷದಿಂದಾಗಲಿ ಅಥವಾ ಎನ್ಡಿಯ ಮೈತ್ರಿಯ ನಾಯಕರಿಂದಾಗಲಿ ಬುಲಾವ್ ಹೋಗಿಲ್ಲ ಅನ್ನೋದು ಇಲ್ಲಿ ಸ್ಪಷ್ಟವಾಗುತ್ತದೆ. ಯಾಕೆ?
ಈ ಪ್ರಶ್ನೆಗೆ ಕುಮಾರಸ್ವಾಮಿಯವರ ಸೇಡಿನ ರಾಜಕಾರಣವೇ ಉತ್ತರ. ಅಂಬರೀಷ್ ಬದುಕಿದ್ದಾಗಿನಿಂದಲೂ ಕುಮಾರಸ್ವಾಮಿಯವರಿಗೆ ಅವರ ಬಗ್ಗೆ ಒಂದು ಬಗೆಯ ಸಿಟ್ಟು. ಅಂಬರೀಷ್ ಕಾಂಗ್ರೆಸ್ ಪಕ್ಷದಲ್ಲಿ ನೆಲೆ ನಿಂತರು ಅನ್ನೋದಕ್ಕಿಂತಲೂ, ಅವರು ಸಿದ್ದರಾಮಯ್ಯನವರ ಆತ್ಮೀಯ ಸ್ನೇಹಿತರಾದರು ಅನ್ನೋದು ಆ ಸಿಟ್ಟಿಗೆ ಕಾರಣ ಎಂದು ಕುಮಾರಸ್ವಾಮಿಯವರ ಆಪ್ತರೆ ಹೇಳಿಕೊಳ್ಳುತ್ತಾರೆ. ಅಂಬರೀಷ್ ನಮ್ಮನ್ನು ಅಗಲಿದಾಗಲೂ, ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕಳಿಸಿಕೊಡಲು ಆಗಿನ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಆರಂಭದಲ್ಲಿ ಒಪ್ಪಿರಲಿಲ್ಲ. ಇದರಿಂದ ಮಂಡ್ಯದಲ್ಲಿ ಅಂಬರೀಷ್ ಬಗ್ಗೆ ಅಭಿಮಾನ ಮತ್ತಷ್ಟು ಹೆಚ್ಚಾಗಿ, ಅದು ಅನುಕಂಪದ ಆಧಾರದಲ್ಲಿ ಅವರ ಕುಟುಂಬಕ್ಕೆ ಸಿಕ್ಕಿಬಿಟ್ಟರೆ ಮಂಡ್ಯದಲ್ಲಿ ತಮ್ಮ ಹಿಡಿತ ಸಡಿಲವಾಗುತ್ತದೆ ಅನ್ನೋದು ಅವರ ಲೆಕ್ಕಾಚಾರವಾಗಿತ್ತು. ಹಾಗಾಗಿ, ಮಂಡ್ಯದಿಂದ ಜನರನ್ನು ಅಂತಿಮ ದರ್ಶನಕ್ಕೆ ಕರೆಸಲು ಬೇಕಾದಷ್ಟು ಬಸ್ ವ್ಯವಸ್ಥೆ ಮಾಡಿಸುತ್ತೇನೆ, ಆದರೆ ಅಲ್ಲಿಗೆ ಪಾರ್ಥೀವ ಶರೀರ ಕೊಂಡೊಯ್ಯುವುದು ಬೇಡ ಎಂದಿದ್ದರು. ಆದರೆ ಅಂಬರೀಷ್ ಪತ್ನಿ ಸುಮಲತಾ ಮತ್ತು ಮಗ ಅಭಿಷೇಕ್ ಗೌಡ ಹಠ ಹಿಡಿದಿದ್ದರಿಂದ, ವಿಧಿಯಿಲ್ಲದೆ ಮಂಡ್ಯಕ್ಕೆ ಪಾರ್ಥೀವ ಶರೀರ ಕೊಂಡೊಯ್ಯಲು ಅನುಮತಿ ನೀಡಿದ್ದರು. ಆದರೆ, ಅಂಬರೀಷ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕಳಿಸಿದ್ದೇ ನಾನು, ಸುಮಲತಾ ಅದಕ್ಕೆ ಒಪ್ಪಿರಲಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ, ಅಂಬರೀಷ್ ಕುಟುಂಬದ ಆಪ್ತರಲ್ಲಿ ಒಬ್ಬರಾದ ರಾಕಲೈನ್ ವೆಂಕಟೇಶ್ ಅವರು ಮಾಧ್ಯಮಗಳ ಮುಂದೆ ಬಂದು ಅವತ್ತು ನಿಜಕ್ಕೂ ಏನಾಯ್ತು? ಕುಮಾರಸ್ವಾಮಿಯವರು ಮಂಡ್ಯಕ್ಕೆ ಕಳಿಸಿಕೊಡಲು ಎಷ್ಟು ಅನಾಸಕ್ತಿ ತೋರಿಸಿದ್ದರು? ಎಂಬುದನ್ನು ವಿವರವಾಗಿ ಹೇಳಿದ ಮೇಲೆ ಸತ್ಯಾಂಶ ಬೆಳಕಿಗೆ ಬಂತು.
ಅಂಬರೀಶ್ ಅವರ ಕುಟುಂಬದ ಮೇಲೆ ಕುಮಾರಸ್ವಾಮಿಯವರಿಗೆ ಈ ಸೇಡು ಹೆಚ್ಚಾದದ್ದು, 2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು, ಅವರ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ ನಂತರ. ಆಗಿನಿಂದ ಅಂಬರೀಶ್ ಅವರ ಕುಟುಂಬದ ಮೇಲೆ ಕೆಂಡಕಾರುತ್ತಲೇ ಬರುತ್ತಿದ್ದಾರೆ. ಒಮ್ಮೆ ಮಾಧ್ಯಮದವರು ಸುಮಲತಾ ಅವರ ಬಗ್ಗೆ ಪ್ರಶ್ನಿಸಿದಾಗ, “ಯಾರದು ಸುಮಲತಾ? ಆ ಹೆಸರಿನ ಯಾರೂ ನನಗೆ ಗೊತ್ತೇ ಇಲ್ಲವಲ್ಲಾ!” ಎಂದು ಲೇವಡಿಯ ಉತ್ತರ ನೀಡಿದ್ದರು ಕುಮಾರಸ್ವಾಮಿ.
ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯದಲ್ಲಿ ಯಾವುದೇ ಕಾರಣಕ್ಕು ತಮ್ಮ ಕುಟುಂದವರಲ್ಲದ ಬೇರೆ ಒಕ್ಕಲಿಗ ನಾಯಕರು ಬೆಳೆಯಬಾರದೆನ್ನುವುದು ಕುಮಾರಸ್ವಾಮಿಯವರ ಲೆಕ್ಕಾಚಾರ. ಹಾಗಾಗಿಯೇ ಅವರು ಅಂಬರೀಷ್ ಅವರನ್ನು ವಿರೋಧಿಸಿದರು. ತಮ್ಮದೇ ಜೊತೆಗಿದ್ದ ಚೆಲುವರಾಯಸ್ವಾಮಿಯನ್ನೂ ಬೆಳೆಯಗೊಡಲಿಲ್ಲ. ತಮ್ಮ ತಂದೆ ದೇವೇಗೌಡರ ಜೊತೆ ಸೇರಿ ಎಸ್ ಎಂ ಕೃಷ್ಣ ರಾಜಕೀಯ ನೇಪಥ್ಯಕ್ಕೆ ಸರಿಯುವಂತೆ ಮಾಡಿದರು. 2024ರ ಲೋಕಸಭಾ ಚುನಾವಣೆಯಲ್ಲೂ ಸಿ ಎಸ್ ಪುಟ್ಟರಾಜು ಅವರಿಗೆ ಮಂಡ್ಯ ಟಿಕೇಟ್ ನೀಡುವ ಭರವಸೆ ಕೊಟ್ಟು, ಕೊನೇ ಘಳಿಗೆಯಲ್ಲಿ ತಾವೇ ಸ್ಪರ್ಧಿಸಿದರು. ಈ ಉದ್ದೇಶದಿಂದಲೇ ಸುಮಲತಾ ಅವರನ್ನೂ ಅವರು ದ್ವೇಷಿಸುತ್ತಿದ್ದಾರೆ.
ಸುಮಲತಾ ಅವರು ಯಾವುದೇ ಕಾರಣಕ್ಕು ಮಂಡ್ಯದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಅವಕಾಶ ನೀಡಬಾರದು ಅನ್ನೋದು ಕುಮಾರಸ್ವಾಮಿಯವರ ಲೆಕ್ಕಾಚಾರ. ಅದಕ್ಕೋಸ್ಕರವೇ ಬಿಜೆಪಿ ಹೈಕಮಾಂಡ್ ನಾಯಕರ ಮೇಲೆ ಒತ್ತಡ ತಂದು, ಅವರು ಚನ್ನಪಟ್ಟಣದ ಪ್ರಚಾರದಿಂದ ದೂರ ಉಳಿಯುವಂತೆ ಮಾಡಿದ್ದಾರೆ. ಇದನ್ನು ಬಿಜೆಪಿಯ ಆಂತರಿಕ ಮೂಲಗಳೇ ಖಾತ್ರಿಪಡಿಸುತ್ತವೆ. ಇಲ್ಲದೇ ಹೋಗಿದ್ದರೆ, ಸುಮಲತಾ ಹೊರಗುಳಿಯುವ ಬೇರಾವ ಅವಕಾಶಗಳೂ ಇಲ್ಲ….
ಅಂಬರೀಷ್ ರಾಜಕಾರಣಿಯಾಗಿ ಗುರುತಿಸಿಕೊಂಡರಾದರೂ, ಸಿನಿಮಾ ವರ್ಚಸ್ಸಿನ ನಾಯಕರಾಗಿಯೇ ಹೆಸರಾದವರು. ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿದವರು. ಅಷ್ಟೇ ಸ್ನೇಹಮಯಿ ವ್ಯಕ್ತಿ. ಅವರು ಕಾಂಗ್ರೆಸ್ನಲ್ಲಿದ್ದರು ಕೂಡಾ ಎಲ್ಲಾ ಪಕ್ಷದಲ್ಲಿಯೂ ಅವರ ಆತ್ಮೀಯ ಗೆಳೆಯರಿದ್ದರು. ಅನ್ಯಭಾಷೆಯ ನಟರು, ರಾಜಕಾರಣಿಗಳು ಕೂಡಾ ಅತ್ಯಂತ ಗೌರವದಿಂದ ಕಾಣುತ್ತಿದ್ದ, ಆತ್ಮೀಯತೆಯಿಂದ ಒಡನಾಡುತ್ತಿದ್ದ ಅಪರೂಪದ ವ್ಯಕ್ತಿ ಅಂಬರೀಷ್. ಅಂತವರ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಕುಮಾರಸ್ವಾಮಿಯವರಿಗೆ ಇಷ್ಟು ಸೇಡು, ಸಿಟ್ಟಿರುವುದು ನಿಜಕ್ಕೂ ವಿಪರ್ಯಾಸ….
ಸ್ವತಃ ಅಂಬಿಯಣ್ಣನ ಅಭಿಮಾನಿಯಾದ ನಾನು ತುಂಬಾ ನೋವಿನಿಂದಲೇ ಇದನ್ನು ದಾಖಲಿಸುತ್ತಿದ್ದೇನೆ.
– ಎನ್ ವಿ ಜಗನ್ನಾಥ ಗೌಡ, ಮದ್ದೂರು



