ಮತ್ತೊಬ್ಬ ಒಕ್ಕಲಿಗ ನಾಯಕನನ್ನು ತುಳಿಯಲು ಯತ್ನಿಸಿತಾ ದೇವೇಗೌಡರ ಕುಟುಂಬ!?

2 years ago

ಚನ್ನಪಟ್ಟಣದಲ್ಲೇಕೆ ನಿಖಿಲ್ ಪರ  ಪ್ರಚಾರದಲ್ಲಿ ಜಿ ಟಿ ದೇವೇಗೌಡ ಕಾಣಿಸಿಕೊಳ್ಳುತ್ತಿಲ್ಲ?

ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹಣಾಹಣಿ ನಡೆಯುತ್ತಿದೆ. ದೇವೇಗೌಡರ ಕುಟುಂಬ ಶತಾಯಗತಾಯ ತಮ್ಮ ವಂಶದ ಕುಡಿಯನ್ನು ಗೆಲ್ಲಿಸಿಕೊಳ್ಳಲೇಬೇಕು ಅಂತ ಎಲ್ಲಾ ಬಗೆಯ ತಂತ್ರಗಳನ್ನು ಹೂಡುತ್ತಿದೆ. ಇಲ್ಲಿರುವ ನಿರ್ಣಾಯಕ ಸಂಖ್ಯೆಯ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿರುವ ಆ ಕುಟುಂಬ ಯಾವ ಅವಕಾಶವನ್ನೂ ಬಿಡುತ್ತಿಲ್ಲ. ಆದರೆ ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ಎನಿಸಿರುವ, ಕುಮಾರಸ್ವಾಮಿಯ ನಂತರ ಜೆಡಿಎಸ್‌ನ ಎರಡನೇ ಶ್ರೇಣಿಯ ನಾಯಕನೆನಿಸಿರುವ, ಮಾಜಿ ಸಚಿವರೂ ಆದ ಒಕ್ಕಲಿಗ ಸಮುದಾಯದ ಜಿ ಟಿ ದೇವೇಗೌಡರ ಅನುಪಸ್ಥಿತಿ ಇಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿದೆ.

ಇಂಥಾ ನಿರ್ಣಾಯಕ ಚುನಾವಣೆಯಲ್ಲಿ ಅವರ್‍ಯಾಕೆ ಪ್ರಚಾರದಿಂದ ದೂರ ಉಳಿದರು? ದೇವೇಗೌಡರ ಕುಟುಂಬದ ಸ್ವಜನ ಪಕ್ಷಪಾತದ ವರ್ತನೆಯಿಂದ ಅವರೂ ಬೇಸತ್ತರಾ? ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನದ ವಿರುದ್ಧ ಬಂಡಾಯವೆದ್ದಿದ್ದಾರಾ? ಪ್ರಚಾರದಿಂದ ದೂರ ಉಳಿದಿರುವುದು ಅದರ ಮುನ್ಸೂಚನೆಯಾ? ಉಪಚುನಾವಣೆ ಮುಗಿಯುತ್ತಿದ್ದಂತೆಯೇ ಅವರು ಪಕ್ಷ ತೊರೆಯುತ್ತಾರಾ?

ರಾಜಕಾರಣ ಎನ್ನುವುದು ತುಂಬಾ ಅನಿಶ್ಚಿತಮಯ, ಅಸ್ಥಿರ ಕ್ಷೇತ್ರ. ಹಾಗಾಗಿ ಅಲ್ಲಿ ನಾಳೆ ಏನಾಗುತ್ತದೆ ಅನ್ನೋದನ್ನು ಈಗಲೇ ಊಹಿಸುವುದು ಕಷ್ಟ. ಆದರೆ ಇವತ್ತು ಏನಾಗುತ್ತಿದೆ? ಮತ್ತು ಹಾಗೆ ಆಗಲು ಏನು ಕಾರಣ? ಅನ್ನೋದನ್ನು ನಿಖರವಾಗಿ ವಿಶ್ಲೇಷಿಸಬಹುದು. ಹಾಗಾಗಿ ಜಿಟಿಡಿ ಜೆಡಿಎಸ್ ತೊರೆದು ಹೋಗ್ತಾರಾ ಅನ್ನೋ ಪ್ರಶ್ನೆಯನ್ನು ಬದಿಗಿರಿಸಿ, ಅವರ್‍ಯಾಕೆ ದೇವೇಗೌಡರ ಕುಟುಂಬದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಅನ್ನೋದನ್ನು ನೋಡಬಹುದು.

ಜಿ ಟಿ ದೇವೇಗೌಡ ಆರಂಭದಿಂದಲೂ ಎಚ್ ಡಿ ದೇವೇಗೌಡರಿಗೆ ತುಂಬಾ ನಿಷ್ಠರಾದವರು. ಈ ಹಿಂದೆ ಹಲವು ಬಾರಿ, ತನಗಿಂತ ಕಿರಿಯವರಾದ ಕುಮಾರಸ್ವಾಮಿಯಿಂದ ಅವಮಾನವಾದರೂ ಪಕ್ಷ ತೊರೆಯುವ ನಿರ್ಧಾರ ಮಾಡಿದವರಲ್ಲ. ಹಾಗೆ ನೋಡಿದರೆ, ಜಿಟಿಡಿಯವರಿಗೆ ದೇವೇಗೌಡರ ಮೇಲೆ ಎಷ್ಟು ಗೌರವವಿದೆಯೋ, ಅಷ್ಟೇ ಆತ್ಮೀಯತೆ ಮತ್ತು ಪ್ರೀತಿ ಸಿದ್ದರಾಮಯ್ಯನವರ ಮೇಲೂ ಇದೆ. ಯಾಕೆಂದರೆ, ಮೈಸೂರಿನ ರಾಜಕಾರಣದಲ್ಲಿ ಜಿ ಟಿ ದೇವೇಗೌಡರು ಬೆಳೆಯಲು ನೆರವಾದವರೇ ಸಿದ್ದರಾಮಯ್ಯನವರು. ಸ್ವತಃ ಜಿಟಿಡಿ ಈ ಮಾತನ್ನು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ 2018ರ ಅಸೆಂಬ್ಲಿ ಚುನಾವಣೆ ವೇಳೆ, ಅಂತಹ ಸಿದ್ದರಾಮಯ್ಯನವರ ವಿರುದ್ಧವೇ ಸ್ಪರ್ಧಿಸಿ ಅವರನ್ನು ಸೋಲಿಸಬೇಕು ಎಂದು ದೇವೇಗೌಡರ ಫ್ಯಾಮಿಲಿ ಆಜ್ಞೆ ಮಾಡಿದಾಗ, ದೊಡ್ಡಗೌಡರ ಮೇಲಿನ ಗೌರವ ಕಾರಣಕ್ಕೆ ಕಷ್ಟವಾದರೂ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ, ಆತ್ಮೀಯ ಮಿತ್ರನನ್ನೇ ಎದುರುಹಾಕಿಕೊಂಡರು. ಗೌಡರ ಮೇಲೆ ಜಿಟಿಡಿಯವರ ಅಭಿಮಾನ ಅಂತದ್ದು.

ಆದರೆ, ಆ ಅಭಿಮಾನಕ್ಕೆ ಪ್ರತಿಯಾಗಿ ಜಿ ಟಿ ದೇವೇಗೌಡರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಲೇ ಬರಲಾಗುತ್ತಿದೆ. ಕುಮಾರಸ್ವಾಮಿಗಿಂತ ವಯಸ್ಸಿನ ಮತ್ತು ಆಡಳಿತಾನುಭವದ ಹಿರಿತನವಿರುವ ಜಿಟಿಡಿಗೆ ಹೆಚ್ಚು ಅವಕಾಶ ಮತ್ತು ಸ್ವಾತಂತ್ಯ್ರ ಸಿಕ್ಕಿಬಿಟ್ಟರೆ, ಅವರು ಕುಮಾರಸ್ವಾಮಿಯನ್ನೇ ಓವರ್‍‌ಟೇಕ್ ಮಾಡಬಹುದೆನ್ನುವುದು ದೊಡ್ಡಗೌಡರ ಕುಟುಂಬದ ಲೆಕ್ಕಾಚಾರ. ಎಷ್ಟೇ ಆಗಲಿ, ತಮ್ಮ ಕುಟುಂಬದವರಲ್ಲದೆ ಬೇರೊಬ್ಬ ಒಕ್ಕಲಿಗ ನಾಯಕ ಬೆಳೆಯಬಾರದು ಅನ್ನೋದು ದೇವೇಗೌಡರ ರಾಜಕಾರಣದ ವೈಖರಿ. ಹಾಗಾಗಿ ಅವರು ಸಾಲುಸಾಲು ಒಕ್ಕಲಿಗ ನಾಯಕರನ್ನು ತುಳಿಯುತ್ತಲೇ ಬಂದಿದ್ದಾರೆ. ಈಗ ಉಪಚುನಾವಣೆ ನಡೆಯುತ್ತಿರುವ ಚನ್ನಪಟ್ಟಣದಲ್ಲೂ, ಒಕ್ಕಲಿಗ ನಾಯಕ ಸಿ ಪಿ ಯೋಗೇಶ್ವರ್ ಅವರನ್ನು ತುಳಿಯಲು ಗೌಡರ ಫ್ಯಾಮಿಲಿ ನಡೆಸಿದ ಕಸರತ್ತು ಅಷ್ಟಿಷ್ಟಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉತ್ಸುಕವಾಗಿದ್ದ ಸಿ ಪಿ ಯೋಗೇಶ್ವರ್ ಅವರಿಗೆ ಟಿಕೆಟ್ ತಪ್ಪಿಸಿ, ತಮ್ಮ ಮನೆ ಅಳಿಯನನ್ನು ತಮ್ಮದೇ ಪಕ್ಷವಿದ್ದರೂ ಬಿಜೆಪಿ ಪಕ್ಷದ ಟಿಕೇಟಿನಿಂದ ಕಣಕ್ಕಿಳಿಸಿದರು. ಆಗಲೇ ಅಸಮಾಧಾನ ಹೊರಹಾಕಿದ್ದ ಯೋಗೇಶ್ವರ್‍‌ಗೆ, ಮುಂದೆ ಕುಮಾರಸ್ವಾಮಿಯಿಂದ ತೆರವಾಗುವ ಚನ್ನಪಟ್ಟಣಕ್ಕೆ ನಡೆಯುವ ಉಪಚುನಾವಣೆಯಲ್ಲಿ ಅವಕಾಶ ನೀಡುವ ಮಾತು ಕೊಟ್ಟು ಅವರನ್ನು ಚೆನ್ನಾಗಿ ಬಳಸಿಕೊಂಡರು. ಯೋಗೇಶ್ವರ್ ಕಾಣಿಕೆಯಿಂದಲೇ ಗೌಡರ ಅಳಿಯ ಅಲ್ಲಿ ಗೆಲ್ಲಲು ಸಾಧ್ಯವಾಯ್ತು. ಆದರೆ ಉಪಚುನಾವಣೆ ಎದುರಾಗಿ, ಯೋಗೇಶ್ವರ್‍‌ಗೆ ಟಿಕೇಟ್ ಬಿಟ್ಟುಕೊಡುವ ವಿಚಾರ ಬಂದಾಗ, ತಮ್ಮ ಮಗ ನಿಖಿಲ್‌ನನ್ನು ಕಣಕ್ಕಿಳಿಸುವ ಸ್ವಾರ್ಥಕ್ಕೋಸ್ಕರ ಕುಮಾರಸ್ವಾಮಿ ಮಾತು ತಪ್ಪಿದರು. ಕೊನೆಗೆ ಅವರು ಮಾತೃಪಕ್ಷ ಕಾಂಗ್ರೆಸ್‌ಗೆ ಹೋಗಿ ಸ್ಪರ್ಧಿಸಬೇಕಾಯ್ತು. ಹೀಗೆ ತಮ್ಮ ಕುಟುಂಬದವರಲ್ಲದ ಒಕ್ಕಲಿಗ ನಾಯಕರು ಬೆಳೆಯಬಾರದೆನ್ನುವುದು ದೇವೇಗೌಡರ ಕುಟುಂಬದ ಎಣಿಕೆ.

ಅದೇ ಕಾರಣಕ್ಕೆ ಜಿಟಿಡಿಯವರನ್ನು ಸಹಾ ಪಕ್ಷದಲ್ಲಿ ನಿರ್ಲಕ್ಷಿಸುತ್ತಲೇ ಬರಲಾಯ್ತು. ಮೈಸೂರಿನ ರಾಜಕಾರಣದಲ್ಲಿ ಜಿಟಿಡಿಯವರ ವರ್ಚಸ್ಸು ಕುಂದಿಸಬೇಕು ಎಂಬ ಏಕೈಕ ಕಾರಣಕ್ಕೆ ವಯಸ್ಸಿನಲ್ಲಿ ಅವರಿಗಿಂತ ಚಿಕ್ಕವರಾದ ಸಾ ರಾ ಮಹೇಶ್‌ ಅವರನ್ನು ಕುಮಾರಸ್ವಾಮಿ ಓಲೈಸುತ್ತಾ ಬಂದರು. ಇದು ಜಿಟಿಡಿಯವರ ಅಸಮಾಧಾನದ ಮೂಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಚಿವ ಸಂಪುಟದಲ್ಲಿ ಜಿ ಟಿ ಡಿ ಸಹಕಾರ ಖಾತೆಯ ನಿರೀಕ್ಷೆಯಲ್ಲಿದ್ದರು. ಅದನ್ನು ತಪ್ಪಿಸಿ ಉನ್ನತ ಶಿಕ್ಷಣದಂತಹ ಖಾತೆ ನೀಡಲಾಯ್ತು. ಮೈಸೂರು ಜಿಲ್ಲಾ ಉಸ್ತುವಾರಿಯಾಗುವ ಹಂಬಲ ಹೊಂದಿದ್ದ ಜಿಟಿಡಿ ಆಸೆ ಮೇಲೂ ಕುಮಾರಸ್ವಾಮಿ ತಣ್ಣೀರು ಸುರಿದರು.

ಇಷ್ಟೆಲ್ಲ ಅವಮಾನವಾಗುತ್ತಿದ್ದರೂ, ದೇವೇಗೌಡರ ಮೇಲಿನ ಗೌರವದ ಕಾರಣಕ್ಕೆ ಜಿಟಿಡಿ ಜೆಡಿಎಸ್‌ನಲ್ಲೇ ಉಳಿದರು. ಆದರೆ ಈಗೀಗ ದೇವೇಗೌಡರು ಕೂಡಾ ತಮ್ಮ ಮಕ್ಕಳು, ಮೊಮ್ಮಕ್ಕಳ ಮೇಲೆ ಅತಿಯೆನಿಸುಷ್ಟು ವ್ಯಾಮೋಹ ತಳೆದು, ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತಿರುವುದು ಜಿಟಿಡಿಯವರ ತಾಳ್ಮೆಯ ಕಟ್ಟೆಯೊಡೆಯುವಂತೆ ಮಾಡಿದೆ ಎನ್ನುತ್ತವೆ ಅವರ ಆಪ್ತ ಮೂಲಗಳು. ನಿಜ ಹೇಳಬೇಕೆಂದರೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಜಿಟಿಡಿಯವರಿಗೆ ಅಷ್ಟಾಗಿ ಇಷ್ಟವಿರಲಿಲ್ಲ. ತಮ್ಮ ಪಕ್ಷದ ಸಿದ್ದಾಂತಕ್ಕೂ, ಬಿಜೆಪಿಯ ಕೋಮುವಾದಕ್ಕೂ ಎಳ್ಳಷ್ಟೂ ಹೊಂದಾಣಿಕೆಯಾಗುವುದಿಲ್ಲ ಎಂಬ ಅಭಿಪ್ರಾಯ ಜಿಟಿಡಿಯವರದು.  ತಮ್ಮ ಈ ಅಸಮಾಧಾನವನ್ನು ದೊಡ್ಡಗೌಡರ ಬಳಿಯೂ ಹೇಳಿಕೊಂಡಿದ್ದರಂತೆ. ಆದರೆ ಮಗನ ಇಚ್ಛೆಗೆ ನಾನು ಈ ವಯಸ್ಸಿನಲ್ಲಿ ಅಡ್ಡಿಬರಲಾರೆ ಎಂದು ದೇವೇಗೌಡರು ಕಡ್ಡಿತುಂಡು ಮಾಡಿದಂತೆ ಹೇಳಿದ ಮೇಲೆ, ದೇವೇಗೌಡರ ಮೇಲಿನ ಭರವಸೆಯನ್ನೂ ಕಳೆದುಕೊಂಡು ಪಕ್ಷದಿಂದ ಅಂತರ ಕಾಯ್ದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಅಷ್ಟಾದರೂ ಜಿ ಟಿ ಡಿ ಪಕ್ಷದ ಏಳಿಗೆಗೆ ಹೆಗಲು ಕೊಡುತ್ತಲೇ ಬರುತ್ತಿದ್ದರು. ಕುಮಾರಸ್ವಾಮಿ ಸಂಸದರಾಗಿ ದಿಲ್ಲಿ ರಾಜಕಾರಣದತ್ತ ತೆರಳಿದ ಮೇಲೆ ಈ ಬಾರಿ ಹಿರಿತನದ ಆಧಾರದಲ್ಲಿ ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸ್ಥಾನ ತನಗೇ ಸಿಗಲಿದೆ ಎಂದು ಜಿಟಿಡಿ ನಿರೀಕ್ಷೆ ಇಟ್ಟುಕೊಂಡಿದ್ದರು. ಜಿಟಿಡಿಗೆ ಜೆಡಿಎಲ್‌ಪಿ ಸ್ಥಾನ ಕೊಟ್ಟರೆ, ಅವರಷ್ಟೇ ಅಲ್ಲ, ಹುಣಸೂರಿನ ಶಾಸಕನಾಗಿರುವ ಅವರ ಮಗ ಜಿ ಟಿ ಹರೀಶ್‌ ಗೌಡ ಕೂಡಾ ಆ ಪ್ರಭಾವದಿಂದ ಬೆಳೆದುಬಿಡಬಹುದು; ಹಾಗೇನಾದರು ಆದಲ್ಲಿ, ನಿಖಿಲ್ ಭವಿಷ್ಯಕ್ಕೆ ಇದು ಮುಳ್ಳಾಗಬಹುದು ಎಂದೆಣಿಸಿದ ಕುಮಾರಸ್ವಾಮಿಯವರು ಕೊನೇ ಕ್ಷಣದಲ್ಲಿ ಜೆಡಿಎಲ್‌ಪಿ ಸ್ಥಾನವನ್ನು ಜಿಟಿಡಿ ಕೈತಪ್ಪಿಸಿ ಸುರೇಶ್‌ ಬಾಬು ಅವರಿಗೆ ನೀಡಿದರು. ಇದಾದ ನಂತರ ಇನ್ನು ತಮಗೆ ಇಲ್ಲಿ ಬೆಳೆಯುವ ಯಾವ ಅವಕಾಶವನ್ನೂ ಗೌಡರ ಕುಟುಂಬ ಉಳಿಸುವುದಿಲ್ಲ ಎಂಬುದು ಅರ್ಥವಾಗಿ, ಜಿಟಿಡಿ ಪಕ್ಷದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹಾಸನಾಂಬೆಯ ದರ್ಶನಕ್ಕೆಂದು ಬಂದಿದ್ದ ಜಿಟಿಡಿಯವರನ್ನು ಮಾಧ್ಯಮದವರು ಕೇಳಿದಾಗ, “ಚನ್ನಪಟ್ಟಣದ ಪ್ರಚಾರದಲ್ಲಿ ಭಾಗವಹಿಸುವ ಬಗ್ಗೆ ನಾನಿನ್ನೂ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಪಕ್ಷವೂ ನನ್ನನ್ನು ಆಹ್ವಾನಿಸಿಲ್ಲ” ಎಂದು ಹೇಳಿದ ಅವರ ಮಾತು, ಒಳಗಿನ ಈ ಭಿನ್ನಮತಕ್ಕೆ ಕನ್ನಡಿ ಹಿಡಿದಂತಿತ್ತು.

ಮೈಸೂರಿನ ದಸರಾ ವೇದಿಕೆಯಲ್ಲಿ ಜಿಟಿಡಿ, ಸಿಎಂ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ್ದಾಗಲಿ, ಮುಡಾ ಪ್ರಕರಣವೊಂದು ಸಂಚೆಂದು ಬಹಿರಂಗ ಮಾಡಿದ್ದಾಗಲಿ, ಈಗ ಚನ್ನಪಟ್ಟಣದ ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದಾಗಲಿ ಇವೆಲ್ಲವೂ ಮುಂದಿನ ದಿನಗಳಲ್ಲಿ ಜಿಟಿಡಿಯವರ ನಿರ್ಧಾರ ಏನಾಗಿರಬಹುದು ಎಂಬುದನ್ನು ಅಂದಾಜಿಸಲು ಮುನ್ಸೂಚನೆಗಳಂತೆ ಗೋಚರಿಸುತ್ತವೆ. ಅದೇನೆ ಇರಲಿ, ಗೌಡರ ಕುಟುಂಬಕ್ಕೆ ಅಪಾರ ನಿಷ್ಠೆ ತೋರುತ್ತಾ ಬಂದ ಜಿಟಿಡಿಯವರನ್ನೇ ತುಳಿಯಲು ಕುಮಾರಸ್ವಾಮಿ ಮುಂದಾದದ್ದು ಅಕ್ಷಮ್ಯ! ಪುತ್ರವ್ಯಾಮೋಹಕ್ಕೆ ಸಿಲುಕಿದ ದೇವೇಗೌಡರು ಅದಕ್ಕೆ ಮೌನಸಮ್ಮತಿ ಕೊಟ್ಟದ್ದು ಅದಕ್ಕಿಂತಲೂ ಅಕ್ಷಮ್ಯ!!

– ಕೆಂಪರಾಜು ಜಿ ಕರೀಗೌಡ, ಮಳವಳ್ಳಿ, ಹವ್ಯಾಸಿ ಪತ್ರಕರ್ತ

Leave a Reply