ಹಂಪಿ ವಿವಿಯನ್ನು ಸಾಹಿತ್ಯಪ್ರೇಮಿಗಳು ಅಭಿನಂದಿಸಬೇಕಿದೆ

2 years ago

ಆತ್ಮೀಯರೆ, ಕವಿಯೊಬ್ಬರ ಕಾವ್ಯಸಂಕಲನಕ್ಕೆ ಐವತ್ತು ತುಂಬುವುದು, ಅದನ್ನು ಕಾವ್ಯಲೋಕ ಸಂಭ್ರಮಿಸಿ ಹಬ್ಬದಂತೆ ಆಚರಿಸುವುದು ಒಂದು ಚಾರಿತ್ರಿಕ ಸಂಗತಿಯಲ್ಲದೆ ಮತ್ತೇನು?

ಆಧುನಿಕ ಕನ್ನಡ ಕಾವ್ಯಸಂದರ್ಭದಲ್ಲಿ ನವ್ಯ ಹಾಗೂ ನವ್ಯೋತ್ತರ ಕಾವ್ಯಮಾರ್ಗಗಳ ದಿಕ್ಕುದೆಸೆಗಳನ್ನು ಅದರ ವಸ್ತು, ಅಭಿವ್ಯಕ್ತಿ , ಛಂದಸ್ಸು, ಸಮಾಜವನ್ನು ಪರಿಭಾವಿಸುವ ದೃಷ್ಟಿಕೋನ ಹೀಗೆ ಹಲವು ಆಯಾಮಗಳಿಂದ‌ ಏಕಮುಖಿಯಾಗಿದ್ದ ಕಾವ್ಯದ ನಡೆಯನ್ನು ಹಿಗ್ಗಲಿಸಿದ, ಉನ್ನತೀಕರಿಸಿದ ಸಿದ್ದಲಿಂಗಯ್ಯನವರ ಹೊಲೆ ಮಾದಿಗರ ಹಾಡು ‘ ಸಂಕಲನ 1975 ರಲ್ಲಿ ಪ್ರಕಟಗೊಂಡು ಇದೀಗ ಐವತ್ತನೇ ವರ್ಷಕ್ಕೆ ಕಾಲಿಟ್ಟಿದೆ.

ಈ ಸವಿನೆನಪಿಗಾಗಿ, ಆ ನೆನಪನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ದಿನಾಂಕ 09-10-24 ರಂದು  ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ದಲಿತ ಸಂಸ್ಕೃತಿ ಅಧ್ಯಯನ ಪೀಠ’  ‘ ಹೊಲೆಮಾದಿಗರ ಹಾಡು ಸಾಹಿತ್ಯ ಮತ್ತು ಸಾಮಾಜಿಕ ಪ್ರೇರಣೆ ‘ ಎಂಬ ಆಶಯದದ ಅಡಿಯಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸುವ ಮೂಲಕ ಈ ಕೃತಿಯು ಕನ್ನಡ ಕಾವ್ಯ ಹಾಗೂ ಚಳವಳಿಗಳ ಮೇಲೆ ಉಂಟುಮಾಡಿದ ಬಹುಮುಖಿಯಾದ ಪರಿಣಾಮಗಳ ಹಲವು ಆಯಾಮಗಳನ್ನು ಚರ್ಚಿಸಿತು.

ನಾಡಿನ ಖ್ಯಾತ ಕವಿ ಸುಬ್ಬು ಹೊಲೆಯಾರ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಹೊಲೆಮಾದಿಗರ ಹಾಡು ದಲಿತ ಸಂಘರ್ಷ ಸಮಿತಿ ಹಾಗು ನಾಡಿನ ಇತರೆ ಸಾಮಾಜಿಕ ಚಳವಳಿಗಳ ಮೇಲೆ ಉಂಟು ಮಾಡಿದ ಸಂಚಲನದ ರೀತಿಯನ್ನು ಮೆಲುಕು ಹಾಕಿದರು.

ಪ್ರಾಸ್ತಾವಿಕ ನುಡಿಯನ್ನು ಆಡಿದ  ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ.ಚಿನ್ನಸ್ವಾಮಿ ಸೋಸಲೆ ಅವರು ಹೊಲೆ ಮಾದಿಗರ ಹಾಡು ಕೃತಿಯು ಉಂಟು ಮಾಡಿದ  ಸಾಹಿತ್ಯಕ ಪ್ರೇರಣೆ ಮತ್ತು ವಿಚಾರ ಸಂಕಿರಣದ ಆಶಯಗಳನ್ನು ಅರುಹಿದರು.

ಮುಂಜಾನೆಯಿಂದ ಸಂಜೆಯವರೆಗೂ ಹಾಜರಿದ್ದ ಕವಿಪತ್ನಿ ಶ್ರೀಮತಿ ರಮಾಕುಮಾರಿ ಸಿದ್ಧಲಿಂಗಯ್ಯ ಅವರು ಸಿದ್ಧಲಿಂಗಯ್ಯನವರ ಬಾಳ ಸಂಗಾತಿಯಾಗಿ ಬಲು ಸನಿಹದಿಂದ ಕಂಡ ಕವಿ ಸಿದ್ಧಲಿಂಗಯ್ಯ ಪತಿಯಾಗಿ, ತಂದೆಯಾಗಿ ನಿರ್ವಹಿದ ಪಾತ್ರ ಮತ್ತು ಅವರೊಡನೆ ಕಳೆದ ಹಲವು ರಸನಿಮಿಷಗಳು, ಒಬ್ಬ ಹೋರಾಟಗಾರನಾಗಿ ಅವರು ಅನುಭವಿಸಬೇಕಾಗಿ ಬಂದ ಸಂಕಷ್ಟ, ಅಪಾಯಗಳು, ಅವನ್ನು ಜಾಣ್ಮೆಯಿಂದ ಅವರು ನಿವಾರಿಕೊಳ್ಳುತಿದ್ದ ಮಾರ್ಗಗಳು ಇಂತಹ  ಕವಿಯ ಬಗೆಗಿನ ಸಾಹಿತ್ಯಲೋಕಕ್ಕೆ ಇನ್ನೂ ತಿಳಿಯದ ಹಲವು ಪ್ರಸಂಗಗಳನ್ನು ತೆರೆದಿಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು  ತಮ್ಮ ಗುರುಗಳಾಗಿದ್ದ ಸಿದ್ಧಲಿಂಗಯ್ಯನವರ ಪಾಠದ ವೈಖರಿ ಮತ್ತು ಪಠ್ಯದ ಸಾಮಾಜಿಕ ಆಶಯಗಳನ್ನು ಅವರು ಗ್ರಹಿಸುತಿದ್ದ ರೀತಿಗೆ ಹರಿಶ್ಚಂದ್ರ ಕಾವ್ಯದ ಹರಿಶ್ಚಂದ್ರ ಮತ್ತು ಹೊಲತಿಯರ ಪ್ರಸಂಗವನ್ನು  ಉದಾಹರಣೆ ನೀಡುವುದರ  ಮೂಲಕ ಮೆಲುಕು ಹಾಕಿದರು.
          
ಈ ಸಲುವಾಗಿ ನಡೆದ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಕವಿ ಡಾ.ಟಿ.ಯಲ್ಲಪ್ಪ  ಹೊಲೆ ಮಾದಿಗರ ಹಾಡು: ಹೊಸಗನ್ನಡ ಸಾಹಿತ್ಯಕ್ಕೆ ಪ್ರೇರಣೆ ‘ ಎನ್ನುವ ಶೀರ್ಷಿಕೆಯ ಅಡಿಯಲ್ಲಿ , ಸ್ವಕೇಂದ್ರಿತವೂ, ಏಕಮುಖವೂ ಆಗಿದ್ದ ನವ್ಯಕಾವ್ಯದ ದಿಕ್ಕು ಮತ್ತು ಸ್ವರೂಪವನ್ನು ಶತಶತಮಾನಗಳ ಹಸಿವು, ಅವಮಾನ ಮತ್ತು ಶೋಷಣೆಗೆ ಒಳಗಾದವರ  ನೋವಿನ, ಪ್ರತೀಕಾರದ ಕಿಡಿಕಿಡಿಯಾದ ಭಾಷೆಯನ್ನು, ಚರಿತ್ರೆಯನ್ನೂ ಏಕಕಾಲಕ್ಕೆ ಸಿದ್ಧಲಿಂಗಯ್ಯನವರು ತಮ್ಮ ಕವಿತೆಯಲ್ಲಿ ಕಟ್ಟುವ ಮೂಲಕ ಹೊಸಭಾಷೆಯೊಂದಿಗೆ ಕಾವ್ಯಲೋಕವನ್ನು ಪ್ರವೇಶ ಮಾಡಿದ ಈ ಕವಿಯ ಕೃತಿ  ಚರಿತ್ರೆ ಇಲ್ಲದೆ ಚದುರಿ ಹೋದವರನ್ನು ಸಾಮಾಜಿಕ ಸಂಘಟನೆ, ಸಾಮಾಜಿಕ ಸ್ವಾಸ್ಥ್ಯ, ಸಬಲೀಕರಣಗಳ ದೃಷ್ಟಿಯಿಂದ ಒಗ್ಗೂಡಿಸುವ ಸಲುವಾಗಿ  ಹೊಲೆಮಾದಿಗರ ಹಾಡು ಕ್ರಾಂತಿಕಹಳೆಯಂತೆ ಮೊಳಗಿದ್ದನ್ನು ವಿವರಿಸಿದರು.

ದಲಿತರ ಆತ್ಮಪ್ರತಿನಿಧೀಕರಣದ ಎಲ್ಲಾ ಆಯಾಮಗಳನ್ನು ಪ್ರತಿನಿಧಿಸಿದ ಈ ಕೃತಿ ೧)ಅದುವರೆಗಿನ ಸಮಾಜವನ್ನು ಗ್ರಹಿಸುವ ಅಭಿವ್ಯಕ್ತಿಸುವ ಭಾಷಿಕ ರೂಪವನ್ನು ಸಂಪೂರ್ಣವಾಗಿ ಬದಲಿಸಿತು ೨) ಲೋಹಿಯಾ,ಅಂಬೇಡ್ಕರ್, ಪೆರಿಯಾರ್, ಬುದ್ಧ, ಬಸವರ ತತ್ವಪ್ರಣಾಳಿಕೆಗಳನ್ನು, ಮಾನವತಾವಾದ, ಮಾರ್ಕ್ಸ್‌ ವಾದದ ಆಶಯಗಳನ್ನು ಒಳಗೊಂಡೇ ತನ್ನ ತಾತ್ವಿಕತೆಯನ್ನು ಮಂಡಿಸಿದ ಈ ಕೃತಿ ಪ್ರಜಾಪ್ರಭುತ್ವದೊಳಗೆ ತಲೆ ಎತ್ತುವ ಸರ್ವಾಧಿಕಾರಿ ಶಕ್ತಿಗಳ ವಿರುದ್ಧದ ಆಕ್ರೋಶದಿಂದಲೂ ಮಹತ್ವದ ಕೃತಿ ೩) ಸಿದ್ಧಮಾದರಿಯ ಕಾವ್ಯಸಿದ್ಧಾಂತ, ಕಾವ್ಯಭಾಷೆ, ಕಾವ್ಯಲಯಗಳನ್ನು ಬಿಟ್ಟು, ಜನಪದ ಶೈಲಿ, ಕ್ರಾಂತಿಗೀತೆ, ಭಾವಗೀತೆ, ಮೇಳಗೀತೆ, ಗೀಗಿಪದ, ಮುಂತಾದ ಸಂಕೀರ್ಣ ಸಂವಹನಾ ಸಾಧ್ಯತೆಯ ಕಾವ್ಯವನ್ನು  ರಚಿಸುವ ಮೂಲಕ ಅತ್ಯಂತ ಪ್ರಜ್ಞಾಪೂರ್ವಕವಾಗಿಯೇ ನವ್ಯದ ಆಶಯ ಮತ್ತು ಆಕೃತಿಗಳನ್ನು ಬದಲಿಸುವಲ್ಲಿ ಹೊಲೆಮಾದಿಗರ ಹಾಡು ಕೃತಿಯ ಪಾತ್ರ ಪ್ರಮುಖವಾಗಿತ್ತು. ೪) ಹೊಸ ಕಾಲದ ಪ್ರಜ್ಞಾವಂತ ದಲಿತ ತನ್ನ ಭೂತ, ವರ್ತಮಾನ ಭವಿಷ್ಯವನ್ನು ಕಾಣುತಿದ್ದ ಕ್ರಮಗಳಿಗೆ ಹೊಲೆಮಾದಿಗರ ಹಾಡು ಮಾದರಿಯಾಗಿತ್ತು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ, ಕವಿ, ವಿಮರ್ಶಕ ಡಾ.ರವಿಕುಮಾರ್ ನೀಹ ‘ಹೊಲೆಮಾದಿಗರ ಹಾಡು ಕನ್ನಡ ಸಾಹಿತ್ಯಕ್ಕೆ ನೀಡಿದ ದೃಷ್ಟಿಕೋನ’  ಎಂಬ ವಿಷಯವನ್ನು ಕುರಿತು ಮಾತನಾಡಿ, ದಲಿತರಲ್ಲಿ ಸಾಮಾಜಿಕ ಎಚ್ಚರ, ಆತ್ಮಾಭಿಮಾನ, ಆತ್ಮಗೌರವ, ಶೋಷಣೆಯ ವಿರುದ್ಧ ಧ್ವನಿ ಎತ್ತಲು ಬೇಕಾದ ಧೈರ್ಯ,  ತನ್ನ ಅಸ್ತಿತ್ವವನ್ನು ತನಗೆ ಪ್ರಾಪ್ತವಾಗಿರುವ ಸಾಮಾಜಿಕ ಸ್ಥಿತಿಯೊಂದಿಗೆ ಹೋಲಿಸಿಕೊಂಡು ಅಲ್ಲಿಂದ ಮೇಲೆದ್ದು ತನ್ನ ಇತರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಹಕ್ಕೋತ್ತಾಯಕ್ಕೆ ನಿಲ್ಲುವ ಸಮಾಜೋ ಸಾಂಸ್ಕೃತಿಕವಾದ  ಪ್ರಜ್ಞೆಗಳನ್ನು  ಹೊಲೆಮಾದಿಗರ ಹಾಡು ಉಂಟುಮಾಡಿದ್ದನ್ನು ತೆರೆದಿಟ್ಟರು.

ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದಂತ ಡಾ.ಬಿ.ಎಂ ಪುಟ್ಟಯ್ಯ ಅವರು, ಸಿದ್ಧಲಿಂಗಯ್ಯ ಅವರನ್ನು ದಲಿತ ಕವಿ ಎಂದು ಕರೆದರೆ ಅವರ ಕಾವ್ಯವನ್ನು ಜಾತಿಯ ಹಿನ್ನೆಲೆಯಲ್ಲಿ ಮಾತ್ರ ಅಧ್ಯಯನ ಮಾಡುವ, ಕ್ರಾಂತಿ ಕವಿ ಎಂದು ಬ್ರಾಂಡ್ ಮಾಡಿದರೆ ಅವರ ಕಾವ್ಯವನ್ನು ಇಕ್ರಲಾ ವದೀರ್ಲಾ ಕವಿತೆಗೆ ಸೀಮಿತಗೊಳಿಸಿಬಿಡುವ ಅಪಾಯಗಳಿದ್ದು, ಅವರನ್ನು ಜನತೆಯ ಕವಿ ಅಂತ ಪರಿಭಾವಿಸಿ ಅಧ್ಯಯನ ಮಾಡಿದಾಗ ಮಾತ್ರ ಅವರ ಕಾವ್ಯದ ಬೇರೆ ಸಾಧ್ಯತೆಗಳು ನಮಗೆ ಕಾಣಲು ಸಾಧ್ಯ ಎಂದರು.

ಎಪ್ಪತ್ತರ ದಶಕದ ಪ.ಜಾತಿ ಮತ್ತು ಪ.ಪಂಗಡದ ಹಾಸ್ಟೆಲ್ ಗಳಲ್ಲಿ ಇದ್ದ ವಿದ್ಯಾರ್ಥಿಗಳಿಗೆ ಅಲ್ಲಿನ ಅವ್ಯಸ್ಥೆ ಮತ್ತು ಅನ್ಯಾಯಗಳನ್ನು ಪ್ರಶ್ನೆ ಮಾಡುವ, ಪ್ರತಿಭಟಿಸುವ ಪ್ರೇರಣೆಯನ್ನು ಕೊಟ್ಟದ್ದು ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳು ಮತ್ತು ಹೊಲೆಮಾದಿಗರ ಹಾಡು ಸಂಕಲನದ ಹಾಡುಗಳು. ಹಾಗಾಗಿ ಹೊಲೆಮಾದಿಗರ ಹಾಡುಗಳು ಉಂಟು ಮಾಡಿದ ಸಂಚಲನದ ಹಿಂದೆ ಈ ಹಾಸ್ಟೆಲ್ ಗಳ ಪಾಲೂ ಇದೆ ಎಂದರು.

ಕವಿಯೊಬ್ಬ ಜನಪದ ಸಾಹಿತ್ಯದಿಂದ ಪ್ರಭಾವ ಪಡೆಯುವುದು ಅಪರೂಪದ ಸಂಗತಿ ಅಲ್ಲ. ಆದರೆ ಕವಿಯೊಬ್ಬ ಬದುಕಿರುವಾಗಲೆ ಅವರ ಕವಿತೆಗಳನ್ನು  ಜನಪದ ಗೀತೆಗಳ  ಹಾಗೆ ಓದು ಬರಹ ತಿಳಿಯದ ಜನ, ಹಾಗೂ ಓದು ಬರಹ ಬಲ್ಲ ಪದವಿ ವಿದ್ಯಾರ್ಥಿಗಳೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಜನಪದ ಗೀತೆ ಅಂತ ಹಾಡಿಬಿಡುವಷ್ಟು ಜನಮುಖಿಯಾದ ಕಾವ್ಯ ಸಿದ್ಧಲಿಂಗಯ್ಯನವರದು. ಇದು ಅವರ ಹಿರಿಯ ತಲೆಮಾರಿನ ಕೆ.ಎಸ್ ‌ನರಸಿಂಹಸ್ವಾಮಿಯವರ ನಂತರದಲ್ಲಿ ಸಿದ್ಧಲಿಂಗಯ್ಯನವರ ಕಾವ್ಯ ಉಂಟು ಮಾಡಿದ ಸಂಚಲನಕ್ಕೆ ಸಾಕ್ಷಿ  ಎಂದರು.

ಎರಡನೆ ಗೋಷ್ಟಿಯಲ್ಲಿ ಪ್ರಬಂಧ ಮಂಡಿಸಿದ ಡಾ.ಅನಸೂಯಾ ಕಾಂಬಳೆ ಅವರು, ‘ಮಹಿಳೆ ಶೋಷಣೆ ಮತ್ತು ಸಮಾಜ ‘ ಎಂಬ ವಿಷಯ ಕುರಿತು ಮಾತನಾಡಿದರು. ಸಿದ್ಧಲಿಂಗಯ್ಯನವರ ಕಾವ್ಯದಲ್ಲಿನ ಮಹಿಳಾ ಲೋಕದ ಗೈರುಗಾಜರಿ ಎಂಬಷ್ಟು ಕವಿತೆಗಳು ಇರುವುದನ್ನು ಈಗಾಗಲೆ ಕನ್ನಡ ವಿಮರ್ಶೆ ಚರ್ಚಿಸಿದೆ. ಕ್ರಾಂತಿ ಕನ್ಯೆಯನ್ನು ಒಲಿದು, ಅವಳನ್ನೆ ಮೋಹಜನ್ಯೆ ಎಂದು ಕರೆದು ಅವಳನ್ನೆ ಮದುವೆ ಆಗುವೆನೆಂದು ನುಡಿವ ಈ ಕವಿ ಬಡಜನರ ಬಂಡಾಯದ ಮುತ್ತನ್ನು, ಧರ್ಮಗುರುಗಳ ಚರ್ಮವನ್ನು ಸುಲಿದು ಸೀರೆ ಕುಬಸವನ್ನು, ಮೋಸಗಾರರ ಕೊರಳ ಕಡಿದು ತಲೆಯ ಹಾರವನ್ನು, ಗುಡಿಯ ದೇವರ ಮೇಲಿನ ವಡವೆ ತಂದು ತನ್ನ ಕ್ರಾಂತಿ ಕನ್ಯೆಗೆ ತೊಡಿಸಿ, ಹೀರಿದವರ ರಕ್ತದಿಂದ ಈಕೆಗೆ ನೀರನುಯ್ಯುವೆನೆಂದ ಕವಿ, ಕೊಬ್ಬಿದವರ ಕರುಳ ಕಿತ್ತು ತನ್ನ ಕ್ರಾಂತಿ ಕನ್ಯೆಗೆ ಹೂವ ಮುಡಿಸುವೆ ಎನ್ನುವ ಅಪ್ಪಟ ಕ್ರಾಂತಿಯಲ್ಲಿ ಮುಳುಗಿದ ಕವಿ ಅಪರೂಪಕ್ಕೆ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಎಂಬ ರಮ್ಯ ಮನೋಭಾವದ ಕವಿತೆ ಬರೆದು ತನ್ನ ಕಾಮ್ರೇಡ್ಗಳ ಕೆಂಗಣ್ಣಿಗೆ ಗುರಿಯಾದದ್ದೂ ಇದೆ. ಆದರೆ  ಅವರು ಬರೆದ ಕನ್ನಡವ್ವನಿಗೆ ಕವಿತೆಯಲ್ಲಿ ಚಿತ್ರಿಸಿದ ಕನ್ನಡಮ್ಮನ ಚಿತ್ರಣ ಮಾತ್ರ ಕನ್ನಡ ಕಾವ್ಯದಲ್ಲಿ ಅಪರೂಪದ್ದು.ವಿಜಯ ನಗರ ಸಾಮ್ರಾಜ್ಯದ ವೈಭವವನ್ನು ಚಿತ್ರಿಸುತ್ತಲೇ
” ಹದವಾದ ಚರ್ಮವ ಹರಾಜಿಗಿಟ್ಟು ಜನವ ಬದುಕಿಸಿದ ಕರ್ನಾಟಕ ರತ್ನಸಿಂಹಾಸನಾಧೀಶ್ವರ
ಕನಸಿನಲಿ ಕಂಡು ಸಲುಗೆಯ ಮಾತಾಡಿದವಳೆ ನಿನ್ನ ಕೀರ್ತಿ ಕಡಿಮೆಯೇನೆ?
ರೈತರ ಬೆವರ ನೆಕ್ಕಿ ನೆಕ್ಕೂದಿದ
ಜಮೀನುದಾರರ ಜೊತೆಗಾತಿ
ಕಾರ್ಮಿಕರ ರಕ್ತದ ರವೆ ಉಂಡೆಯ ಉಂಡು
ಹಾರನ್ನಿನಂತೆ ತೇಗುವ ಮಾಲಿಕರ ಮಿಂಡಗಾತಿ!
          ಎಂದು ಅವಳಿಗೊದಗಿದ ಶೋಚನೀಯ ಸ್ಥಿತಿಗೆ ವಿಷಾದ ಪಡುವ ಕವಿತೆಯ ಹಿಂದಿರುವ ವಿಷಾದಯೋಗದಲ್ಲಿ    ಅವರ ಸಂಕಲನಗಳಲ್ಲಿ ರಮ್ಯ ಭಾವೋದ್ದೀಪನದ ಸ್ತ್ರೀ ಸಂವೇದನೆ ಗೈರು  ಹಾಜರಾಗಿರಬಹುದು. ಆದರೆ ನಾಡಿನ ಯಾವುದೇ ಭಾಗದ ದಲಿತ ದಲಿತೇತರ ಎನ್ನದೆ ನಡೆದ ಹೆಣ್ಣಿನ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಅವರಿಗೆ ನ್ಯಾಯ ಕೊಡಿಸುವ ಪರವಾಗಿ ಅಲ್ಲಿ ಸಿದ್ಧಲಿಂಗಯ್ಯನವರ ಉಪಸ್ಥಿತಿ , ಹೋರಾಟ ಇರುತಿತ್ತು ಎಂಬುದು ಅವರು ಮಹಿಳೆಯರ ಬಗ್ಗೆ ಬರೆಯದೆ ಇರುವ ಕವಿತೆಗಳಿಂತ ದೊಡ್ಡ ಮಹಿಳಾ ಪರ ಕಳಕಳಿ ಎಂದು ಸ್ಮರಿಸಿ ಅಭಿನಂದಿಸಿದರು.

ಪ್ರಾಧ್ಯಾಪಕರಾದ ಡಾ.ಎಚ್.ಡಿ ಉಮಾಶಂಕರ್ ಅವರು, ‘ಹೊಲೆಮಾದಿಗರ ಹಾಡು:ಮಹಿಳೆ, ಶೋಷಣೆ ಮತ್ತು ಸಮಾಜ’ಎಂಬ ವಿಷಯದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ಸಿದ್ಧಲಿಂಗಯ್ಯನವರು ಈ ಸಂಕಲನದ ಮೂಲಕ ವ್ಯಕ್ತಪಡಿಸಿದ ಸಿಟ್ಟು ಕೇವಲ ಹೊಲೆ ಮಾದಿಗರನ್ನು ಶೋಷಿಸಿದವರ ಬಗೆಗಿನದು ಮಾತ್ರ ಆಗಿರಲಿಲ್ಲ. ಅದು ಈ ಸಮೂದಾಯವನ್ನು, ಸಮಸ್ತ ದುಡಿವ ವರ್ಗವನ್ನು ಶೋಷಿಸಿದ ಜಮೀನ್ಧಾರರು, ಊಳಿಗಮಾನ್ಯ ಪ್ರಭುಗಳು, ಬಂಡವಾಳಶಾಹಿ ವ್ಯವಸ್ಥೆ, ಪುರೋಹಿತಶಾಹಿ ವ್ಯವಸ್ಥೆಯ ಬಗೆಗಿನ ಸಿಟ್ಟಾಗಿತ್ತು. ಆ ಸಿಟ್ಟನ್ನು ಯಾರು ತಮ್ಮನ್ನು ಶೋಷಿಸುವಾಗ ಬಳಸಿದ್ದರೋ ಅವರದೇ  ಭಾಷೆಯಲ್ಲಿ  ಅವರಿಗೇ ತಿರುಗೇಟು  ನೀಡಲು  ಉತ್ತರ ನೀಡಲು ಬಳಸಿದ ಭಾಷೆಯಾಗಿತ್ತು .. ಇದು ಹೊಲೆಮಾದಿಗರು ಹಾಡಿನ ಸಂಕಲನದ ಕಾವ್ಯಭಾಷೆಯ ಅನನ್ಯತೆ ಎಂದರು.

ಇದಲ್ಲದೆ ಮೇಲ್ಜಾತಿಗಳ ಎದುರು ತಲೆ ಎತ್ತಿ ನಿಲ್ಲಲು ಹೆದರುತಿದ್ದ ಈ ಜನ ತಮ್ಮ ಜಾತಿಯ ಹೆಸರನ್ನು ತಮ್ಮ ಹೆಸರಿನೊಂದಿಗೆ ಇಟ್ಟಕೊಂಡು ತಮ್ಮ ಜಾತಿಯ ಅಸ್ಮಿತೆ ಮತ್ತು ಘನತೆ ಮೇಲ್ಜಾತಿಗಳ ಅಸ್ಮಿತೆಗೆ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಆತ್ಮಗೌರವವನ್ನು ಹೊಲೆಮಾದಿಗರ ಹಾಡು ಹುಟ್ಟು ಹಾಕಿತು. ಆ ಮೂಲಕ ಹೊಲೆಯರು ಮತ್ತು ಮಾದಿಗರು ಸಂಸ್ಕೃತೀಕರಣಕ್ಕೆ ಒಳಗಾಗುವುದರ ಮೂಲಕ ತಮ್ಮ ಜಾತಿಯ ಕೀಳರಿಮೆಯಿಂದ ಮುಕ್ತವಾಗುವ ದಾರಿ ಅಂತ ಭಾವಿಸಿದ್ದ ಕಾಲ ಹೋಗಿ, ತಾವು ಹೊಲೆ ಮಾದಿಗರಾಗಿ ಇರುವುದರ ಮೂಲಕವೇ ತಮ್ಮ ಜಾತಿಗಳ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾಗಿರುವ ಅಗತ್ಯವನ್ನೂ ದಲಿತರಿಗೆ ಈ ಕೃತಿ, ಈ ಕವಿ ಮನಗಾಣುವಂತೆ ಮಾಡಿತು ಎಂಬ ವಿಚಾರಗಳನ್ನು ಮಂಡಿಸಿದರು.

ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜ ವಿಜ್ಞಾನ ನಿಖಾಯಗಳ ಡೀನ್ ಆಗಿದ್ದ ಡಾ.ಚಲುವರಾಜು ಅವರು, ತಮ್ಮ ಕಾಲದ ದಲಿತ ಚಳುವಳಿಗಳ ಹಾಗೂ ಹೊಸ ತಲೆಮಾರಿನ ದಲಿತ ಬರಹಗಾರರ ಆತ್ಮಸಾಕ್ಷಿಯ ಹಾಗೆ ಇದ್ದಂತಹ ಕವಿ ಸಿದ್ಧಲಿಂಗಯ್ಯ ಮತ್ತು ಇವರ ಕವಿತೆಗಳ ಸಮಾಜ, ದಲಿತ ವಿದ್ಯಾರ್ಥಿ ಸಮೂಹ, ಹಾಗೂ ಅಂದಿನ ಚಳುವಳಿಗಳ ಚಾಲಕ ಶಕ್ತಿಯಾಗಿ ಉಂಟು ಮಾಡಿದ  ಪರಿಣಾಗಳನ್ನು ವಿವರಿಸಿದರು.

ಹೊಲೆಮಾದಿಗರು ಕೃತಿಗೆ ಐವತ್ತು ತುಂಬಿದ ಈ ಸಂಧರ್ಭದ ಚರ್ಚೆ ಇದು ಕೇವಲ ಕೃತಿಕೇಂದ್ರಿತವಾಗಿರದೆ ಈ ಐದೂ ದಶಕಗಳ ಕಾಲದ ಕನ್ನಡ ಸಾಹಿತ್ಯ, ಸಮಾಜ ಹಾಗೂ ಪ್ರಗತಿಪರ ಚಳುವಳಿಗಳ ನಡೆಯನ್ನೂ ಹಾಸುಹೊಕ್ಕಾಗಿ ಒಳಗೊಂಡಿತ್ತು ಎಂಬ ಕಾರಣಕ್ಕಾಗಿಯೂ ಸರ್ಕಾರ ಆಚರಿಸುವ ಮೊದಲೇ ವಿಶ್ವವಿದ್ಯಾಲಯವೊಂದು ಇಂತಹ ಕಾರ್ಯಕ್ರಮ ಮಾಡುವುದರ ಮೂಲಕ ಸಾಹಿತಿಯೊಬ್ಬರ ಬಗ್ಗೆ, ಮಾರ್ಗಪ್ರವರ್ತಕ ಕೃತಿಯೊಂದರ ಬಗ್ಗೆ  ತನ್ನ ಬದ್ದತೆ ಮತ್ತು  ಮಾದರಿಯಾದ ಕಳಕಳಿಯ ಮಾದರಿಯೊಂದನ್ನು ಆಳುವ ಸರ್ಕಾರಕ್ಕೂ ಒದಗಿಸಿದೆ ಅಂತ ಇದನ್ನು ಆಯೋಜಿಸಿದ ಹಂಪಿ ವಿವಿಯನ್ನು ಸಾಹಿತ್ಯಪ್ರೇಮಿಗಳು ಅಭಿನಂದಿಸಬೇಕಿದೆ.

– ಪ್ರೊ.ಟಿ.ಯಲ್ಲಪ್ಪ, ಪ್ರಾಧ್ಯಾಪಕರು

Leave a Reply