ಕರ್ನಾಟಕದ ರಾಜಕೀಯ ಸಂಸ್ಕೃತಿಗೆ ಏನಾಯಿತು?

2 years ago

ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ರಾಜಕೀಯ ನಾಯಕರುಗಳ ನಡುವೆ ಅದರಲ್ಲೂ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ನಡೆಯುತ್ತಿದ್ದಂತಹ ಘರ್ಷಣೆಗಳು, ಅವರು ಬಳಸುತ್ತಿದ್ದ ಭಾಷೆ, ಅವರ ನಡವಳಿಕೆ, ಅವರ ಸಂಸ್ಕಾರ ಸಂಸ್ಕೃತಿ ಇವುಗಳನ್ನು ನೋಡಿ ಕರ್ನಾಟಕದವರು ನಾವು ನಮ್ಮ ರಾಜ್ಯದ ರಾಜಕೀಯ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಇದ್ದೆವು.

ನಿಜಲಿಂಗಪ್ಪನವರ ಸಜ್ಜನಿಕೆ, ದೇವರಾಜ ಅರಸು ಮಾನವೀಯತೆ, ರಾಮಕೃಷ್ಣ ಹೆಗಡೆಯವರ ಸೌಜನ್ಯದ ನಳವಳಿಕೆ, ಎಸ್ಎಂ ಕೃಷ್ಣ ರವರ ತೂಕದ ಮಾತುಗಾರಿಕೆ, ಜೆ ಹೆಚ್ ಪಟೇಲರ ಹಾಸ್ಯ ಮತ್ತು ಸಾಂದರ್ಭಿಕ ಮಾತುಗಾರಿಕೆ,  ನಮ್ಮ ಕರ್ನಾಟಕದ ರಾಜಕಾರಣಿಗಳ ನಡುವೆ ಭಿನ್ನವಾದ ಅಭಿಪ್ರಾಯಗಳು ಇತ್ತು.

ಆದರೂ ಮಾತುಗಳು ಎಂದು ಸಹ ಮಿತಿಯನ್ನು ಮೀರುತ್ತಿರಲಿಲ್ಲ, ವೈಯಕ್ತಿಕ ಟೀಕೆಗಳು ನಡೆಯುತ್ತಿರಲಿಲ್ಲ, ದ್ವೇಷ ,ಅಸೂಯೆಯ ಮಾತುಗಳಿಗೆ ಅವಕಾಶವೇ ಇರಲಿಲ್ಲ, ಸ್ನೇಹ ಮತ್ತು ವಿಶ್ವಾಸ ಇವರ ರಾಜಕಾರಣದಲ್ಲಿ ಎಂದು ಸಹ ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿರಲಿಲ್ಲ, ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷದ ನಾಯಕರ ಮಾತು ಕೇವಲ ಆಡಳಿತ ವಿಚಾರಗಳಿಗೆ, ಸರ್ಕಾರದ ತಪ್ಪುಗಳಿಗೆ, ಕಾರ್ಯವೈಖರಿಗೆ, ಸೀಮಿತವಾಗಿತ್ತು. ವ್ಯಕ್ತಿಗತವಾದ ಟೀಕೆಗಳಿಗೆ, ಅವಕಾಶವೇ ಇರಲಿಲ್ಲ. ಮನಸ್ಸಿಗೆ ನೋವಾಗುವಂತಹ ಅಥವಾ ಅಪಮಾನಗೊಳಿಸುವ ಕಾರಣಕ್ಕಾಗಿಯೇ ಮಾತುಗಳು ಬರುತ್ತಿರಲಿಲ್ಲ.

ಒಂದೊಮ್ಮೆ ಬಾಯಿ ತಪ್ಪಿ ಹಗುರದ ಮಾತುಗಳನ್ನಾಡಿದರೆ ಕ್ಷಮೆಯನ್ನು ಕೇಳುವಂತಹ ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದರು. ಆಗಲು ಭ್ರಷ್ಟಾಚಾರದ ವಿರುದ್ಧ ಹೋರಾಟಗಳಿತ್ತು, ಆದರೆ ಅವುಗಳೆಲ್ಲವೂ ಆ ಘಟನಾವಳಿಗಳಿಗೆ ಮಾತ್ರವೇ ಸಂಬಂಧಿಸಿದ ಮಾತುಗಳಾಗಿರ್ತಿತ್ತು. ಪುಣ್ಯಕ್ಕೆ ಈಗ ಇರುವ ರೀತಿಯಲ್ಲಿ ದೃಶ್ಯ ಮಾಧ್ಯಮಗಳು ಇರಲಿಲ್ಲ. ಪ್ರತಿ ಕ್ಷಣವೂ ಪ್ರತಿ ದಿನವೂ ತಾವೇ ಕಲ್ಪಿಸಿಕೊಂಡು ಪ್ರತಿಯೊಂದು ಘಟನೆಗೂ ಕಥೆಗಳನ್ನ ಕಟ್ಟುತ್ತಾ ಪರಸ್ಪರ ನಾಯಕರುಗಳ ಮಾತುಗಳಿಗೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಾ ಅದನ್ನು ವಿಸ್ತಾರಗೊಳಿಸುತ್ತಾ ಸುದ್ದಿ ಮಾಡುವ ದಿನಗಳನ್ನು ನಾವು ಕಂಡಿರಲಿಲ್ಲ, ಆದರೆ ಈಗ ಅವರು ಏನೆಂದರು ,ಇದಕ್ಕೆ ನೀವೇನೇ ಅನ್ನುತ್ತೀರಿ, ಎನ್ನುತ್ತಾ ಪ್ರಶ್ನೆಗೆ ಪ್ರಶ್ನೆ, ಉತ್ತರಕ್ಕೆ ಉತ್ತರಗಳನ್ನ, ಹುಡುಕುತ್ತಾ ಮನಸ್ಸುಗಳ ನಡುವೆ ಕಹಿ ವಾತಾವರಣವನ್ನು ಸೃಷ್ಟಿ ಮಾಡುತ್ತಿರುವುದು ಸಹ ರಾಜಕಾರಣ ಸಂಸ್ಕೃತಿ ಹಾಳಾಗಲು ಪ್ರಮುಖ ಕಾರಣವೂ ಆಗಿದೆ.

ಬಹುಷಃ ಬಹಳಷ್ಟು ರಾಜಕಾರಣಿಗಳಿಗೆ ತಾಳ್ಮೆಯ, ಸಹನೆಯ, ಬದುಕಿನ ಪಾಠ ಬೇಕಾಗಿದೆ. ಎಲ್ಲರಲ್ಲಿಯೂ ಒಂದು ರೀತಿಯ ಆವೇಶ, ಉದ್ವೇಗ, ಅಸಹನೆ, ಆತುರದ ಪ್ರತಿಕ್ರಿಯೆಗಳು ಕರ್ನಾಟಕ ರಾಜ್ಯದ ರಾಜಕಾರಣವನ್ನ ಕೆಟ್ಟ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಎಲ್ಲರಿಗೂ ಕೆಡುಕಾಗುತ್ತದೆ ರಾಜ್ಯದ ಜನರಿಗೆ ಇದರಿಂದ ಯಾವ ಅನುಕೂಲವೂ ಆಗುವುದಿಲ್ಲ. ಗಾಜಿನ ಮನೆಯಲ್ಲಿ ಕುಳಿತವರು  ಕಲ್ಲು ಹೊಡೆಯುವ ಮುನ್ನ 10 ಬಾರಿ ಯೋಚಿಸಬೇಕು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply