ಪೂಜ್ಯ ಭಾವನೆ ಉಳಿಸಿಕೊಂಡಿರುವ ವ್ಯಕ್ತಿತ್ವದ ಅಭ್ಯರ್ಥಿಗಳು ಬೇಕಾಗಿದ್ದಾರೆ

2 years ago

ನಮ್ಮ ಸಂಸದರು ಹೀಗಿರಬೇಕು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿ 1952 ರಿಂದ ಅನೇಕ ಮಂದಿ ತಮ್ಮದೇ ಆದಂತಹ ಕೊಡುಗೆಗಳನ್ನು ನಗರಕ್ಕೆ ಮತ್ತು ಜನರ ಬದುಕಿಗೆ ನೀಡಿ ಇಂದಿಗೂ ಸಹ ಜನರ ಮನಸ್ಸಿನಲ್ಲಿ ಪೂಜ್ಯ ಭಾವನೆಯನ್ನು ಉಳಿಸಿಕೊಂಡಿರುವ ವ್ಯಕ್ತಿತ್ವದ ಅಭ್ಯರ್ಥಿಗಳು ನಮಗೆ ಇಂದು ಬೇಕಾಗಿದ್ದಾರೆ

ಸದಾ ಜನರ ನಡುವೆ ಬೆರೆತು ಜನಸಾಮಾನ್ಯರಂತೆ ಸರಳ ಜೀವನವನ್ನು ನಡೆಸಿ ಜಾತಿ ಮತ ಭೇದವನ್ನ ಎಂದೂ ಎಣಿಸದೆ ಎಲ್ಲರೊಂದಿಗೆ ಬೆರೆತು ಮಾನವೀಯತೆಯ ನೆಲೆಯಲ್ಲಿ ಪ್ರತಿಕ್ಷಣವನ್ನು ಕಳೆದು ನಗರದ ಜನರ ಮೂಲಭೂತ ಸೌಕರ್ಯ ಸೌಲಭ್ಯಗಳಿಗಾಗಿ ಸದಾ ಕಾಲ ದುಡಿಯುತ್ತಿದ್ದಂತಹ ವ್ಯಕ್ತಿಗಳು ಶಾಮಣ್ಣ ಮತ್ತು ವಿ ಎಸ್ ಕೃಷ್ಣ ಅಯ್ಯರ್

ನಗರದ ಜನರಿಗೆ ನೀರಿನ ಸಮಸ್ಯೆಯಾದಾಗ ಪ್ರತಿಭಟನೆಯನ್ನು ಮಾಡದೆ ಅಧಿಕಾರಿಗಳೊಂದಿಗೆ ಸಮನ್ವಯವನ್ನ ಸಾಧಿಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಹಲವಾರು ಬಡಾವಣೆಗಳಲ್ಲಿ ತಾವೇ ಖುದ್ದಾಗಿ ನಿಂತು ಸಮಸ್ಯೆಗಳನ್ನ ಪರಿಹರಿಸಿಕೊಡುತ್ತಿದ್ದ ವ್ಯಕ್ತಿತ್ವ ಅವರದಾಗಿತ್ತು

ಯಾವುದೇ ಮಧ್ಯವರ್ತಿ ಇಲ್ಲದೆ ನೇರವಾಗಿ ಭೇಟಿ ಮಾಡಿ ಸಮಸ್ಯೆಯನ್ನ ಹೇಳಿಕೊಳ್ಳಬಹುದಾದಂತಹ ಸ್ಥಿತಿ ನಿರ್ಮಾಣ ಮಾಡಿದ್ದರು. ಬಂದವರ ಬಟ್ಟೆಯನ್ನು ನೋಡುತ್ತಿರಲಿಲ್ಲ ಮುಖದ ಬಣ್ಣವನ್ನು ನೋಡುತ್ತಿರಲಿಲ್ಲ. ಅವರ ಧರ್ಮದ ಲಾಂಛನವನ್ನು ನೋಡುತ್ತಿರಲಿಲ್ಲ. ಅವರ ಕಷ್ಟವನ್ನು ಕೇಳುತ್ತಿದ್ದರು ಮತ್ತು ಕಣ್ಣೀರನ್ನು ಕಾಣುತ್ತಿದ್ದರು. ಸಹಾಯ ಮಾಡುವುದರ ಮೂಲಕ ಅವರ ಮುಖದಲ್ಲಿ ಸಂತೃಪ್ತಿಯನ್ನು ಕಂಡಾಗ ಇವರುಗಳು ಸಾರ್ಥಕ ಭಾವದಿಂದ ಸಮಾಧಾನ ಕೊಳ್ಳುತ್ತಿದ್ದರು

ಇವರು ಭಾಷಣವನ್ನು ಮಾಡುತ್ತಿದ್ದರು. ಆದರೆ ಎಲ್ಲಿಯೂ ದ್ವೇಷದ ಲವಶೇಷ ಇರುತ್ತಿರಲಿಲ್ಲ. ಬೆಂಕಿಯ ಮಾತುಗಳನ್ನು ಆಡುತ್ತಿರಲಿಲ್ಲ. ಸಾಮರಸ್ಯದ ಸಂದೇಶವೇ ಇವರ ಗುರಿಯಾಗಿತ್ತು. ಸಮಸ್ಯೆಗಳು ಬಂದಾಗ ಸ್ವಾರ್ಥಕ್ಕೆ ಎಂದೂ ಬಳಸಿಕೊಳ್ಳಲಿಲ್ಲ. ಅವುಗಳಲ್ಲಿ ರಾಜಕಾರಣದ ಆಟವನ್ನು ಆಡಲಿಲ್ಲ, ಮತವನ್ನ ಗಳಿಸುವ ಸಲುವಾಗಿ ಅವಕಾಶವಾದದ ಮಾತನಾಡುತ್ತಿರಲಿಲ್ಲ

ಲೋಕಸಭೆಯಲ್ಲೂ ಮಾತನಾಡುತ್ತಿದ್ದರು. ನಗರದ ಜನರ ಸೌಕರ್ಯ ಸೌಲಭ್ಯಗಳ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯುತ್ತಿದ್ದರು. ಅಷ್ಟೇ ಅಲ್ಲ ಕಡತಗಳ ಹಿಂದೆ ಕಚೇರಿಗಳಿಗೆ ಅಲೆಯುತ್ತಿದ್ದರು. ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ಶಾಲೆಗಳು ಬಡವರ ಪಾಲಿಗೆ ದೇವಾಲಯವೆಂದು ಭಾವಿಸಿ ಅವುಗಳ ಜೀರ್ಣೋದ್ಧಾರಕ್ಕಾಗಿ ಸೌಕರ್ಯ ಸೌಲಭ್ಯಗಳಿಗಾಗಿ ಗಂಭೀರವಾಗಿ ಸಭೆಗಳನ್ನ ನಡೆಸಿ ಆ ಕಾರ್ಯದಲ್ಲಿ ಯಶಸ್ಸನ್ನು ಕಂಡವರು

ಯಾರ ಮೇಲೂ ಸಿಟ್ಟು ಮಾಡಿಕೊಂಡವರಲ್ಲ ಯಾರಿಗೂ ಬೈದವರಲ್ಲ, ಹಿಂಸೆಯನ್ನ ಎಂದು ಆರಾಧಿಸಿದವರಲ್ಲ, ಕೋಪದ ಆವೇಶದ ಮಾತುಗಳಿಗೆ ಎಂದು ಅವಕಾಶವನ್ನು ಕೊಡುತ್ತಿರಲಿಲ್ಲ

ಕೆಂಗಲ್ ಹನುಮಂತಯ್ಯನವರು ನಮ್ಮ ಪ್ರತಿನಿಧಿಯಾಗಿದ್ದರು. ರೈಲ್ವೆ ಸಚಿವರಾಗಿ ನಾಡಿನ ಮುಖ್ಯಮಂತ್ರಿಯಾಗಿ ದುಡಿದಂತಹ ಮಹಾನ್ ಚೇತನ ಅವರಿಂದಾಗಿ ಈ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಬಂದಿತು

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳು ನಮ್ಮ ಪ್ರತಿನಿಧಿಗಳಾಗಿದ್ದರು. ಅವರ ಪಾಂಡಿತ್ಯ ಗಾಂಭೀರ್ಯದ ನಡವಳಿಕೆ ಅವರನ್ನು ಲೋಕಸಭೆಯ ಸಭಾಪತಿಯನ್ನಾಗಿಸಿತು

ಕರ್ನಾಟಕದಲ್ಲಿ ದಿಟ್ಟತನ ಮತ್ತು ನೇರವಾದ ನಡವಳಿಕೆ ಕ್ಷಣದಲ್ಲಿಯೇ ನಿರ್ಧಾರವನ್ನು ಕೈಗೊಳ್ಳುವ ಎದೆಗಾರಿಕೆ ಇದ್ದ ಮಾಜಿ ಮುಖ್ಯಮಂತ್ರಿ ಗುಂಡೂರಾಯರು ನಮ್ಮ ಪ್ರತಿನಿಧಿಗಳಾಗಿದ್ದರು‌‌.

ಬೆಂಗಳೂರು ನಗರದಲ್ಲಿ ಅಂಬೇಡ್ಕರ್ ಕಾಲೇಜ್, ಒಕ್ಕಲಿಗರ ಸಂಘಕ್ಕೆ ಅನುಕೂಲವನ್ನು ಮಾಡಿಕೊಟ್ಟವರು, ಬೆಂಗಳೂರು ಬಸ್ ನಿಲ್ದಾಣವನ್ನ ನಿರ್ಮಿಸಿ ಕೊಟ್ಟವರು, ಅರ್ಚಕರಿಗೆ ಗೌರವದ ಸಂಭಾವನೆಯನ್ನು ಉಳಿಸಿಕೊಟ್ಟವರು, ಶಿಕ್ಷಕರಿಗೆ ಮತ್ತು ಪೊಲೀಸರಿಗೆ ಅತಿಹೆಚ್ಚಿನ ಸಂಬಳವನ್ನು ನೀಡುವಂತಹ ಆದೇಶವನ್ನು ಹೊರಡಿಸಿದವರು

ವಿಶ್ವವೇ ಮೆಚ್ಚಿದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಪ್ರಾಮಾಣಿಕತೆಯ ಮತ್ತೊಂದು ಸಾಕ್ಷಿ ಶುದ್ಧ ಬದುಕಿನ ಅಪ್ಪಟ ವ್ಯಕ್ತಿತ್ವ ನೇರವಾದ ಮಾತುಗಾರಿಕೆ ತಮ್ಮ ವಿಚಾರಗಳಲ್ಲಿ ಎಂದು ಯಾರೊಂದಿಗೂ ರಾಜಿಯಾಗದ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಪ್ರೊಫೆಸರ್ ವೆಂಕಟಗಿರಿ ಗೌಡರು ನಮ್ಮ ಪ್ರತಿನಿಧಿಯಾಗಿದ್ದರು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಯಭಾರಿಯಾಗಿ ಪಕ್ಷ ಭೇದವನ್ನು ಮರೆತು, ರಾಜಕಾರಣವನ್ನು ಮಾಡದೆ ರಾಜ್ಯದ ಹಿತವನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ತಮ್ಮ ಅಧಿಕಾರವನ್ನು ಬಳಸಿದಂತಹ ಮತ್ತು ಕನ್ನಡ ಭಾಷೆಯನ್ನ ಅತಿ ಹೆಚ್ಚು ಪ್ರೀತಿಸುತ್ತಿದ್ದಂತಹ ಚುನಾವಣೆಯನ್ನು ಹೊರತುಪಡಿಸಿ ಬೇರೆ ಎಲ್ಲ ಸಂದರ್ಭದಲ್ಲಿ ಎಲ್ಲಾ ಪಕ್ಷದವರೊಂದಿಗೂ ಪ್ರೀತಿಯಿಂದ ನಡೆದುಕೊಳ್ಳುತ್ತಾ ಎಲ್ಲರ ವಿಶ್ವಾಸವನ್ನು ಗಳಿಸಿದ್ದ ಅನಂತ್ ಕುಮಾರ್ ಅವರು ನಮ್ಮ ಪ್ರತಿನಿಧಿಯಾಗಿದ್ದರು

ಈಗ ನಮಗೆ ಬೇಕಿದೆ ಸಾಮರಸ್ಯದ ಸಂದೇಶವನ್ನು ಸಾರುವ ಮಾನವೀಯತೆಯ ನೆಲೆಯಲ್ಲಿ ಸಾರ್ವಜನಿಕ ಜೀವನವನ್ನು ನಡೆಸುವ, ಸರಳತೆಯಿಂದ ಬದುಕುವ ನಾಡನ್ನು ಪ್ರೀತಿಸುವ, ನುಡಿಯನ್ನು ಆರಾಧಿಸುವ, ಬಡಜನರ ಬಗ್ಗೆ ಕಾಳಜಿ ಇರುವ, ಬೆಂಗಳೂರಿನ ಅಭಿವೃದ್ಧಿಗಾಗಿ ತಮ್ಮ ಧ್ವನಿಯನ್ನು ಬಳಸಿಕೊಳ್ಳುವ, ರಾಜಕಾರಣಕ್ಕಾಗಿ ಜಾತಿ ಮತಗಳ ಸಂಗತಿಗಳನ್ನ ಬಳಸಿಕೊಳ್ಳದೆ, ಕುವೆಂಪುರವರ ಸರ್ವ ಜನಾಂಗದ ಶಾಂತಿಯ ಸಂದೇಶವನ್ನು ಎತ್ತಿ ಹಿಡಿಯುವ ಶಾಮಣ್ಣ ವಿ ಎಸ್ ಕೃಷ್ಣಯ್ಯ ಅವರ ರೀತಿಯಲ್ಲಿ ಸ್ಪಂದಿಸುವ ಗುಂಡೂರಾಯರ ರೀತಿಯಲ್ಲಿ ದಿಟ್ಟತನದಿಂದ ದುಡಿಯುವ ಅಭ್ಯರ್ಥಿಗಳು ನಮಗೆ ಬೇಕಾಗಿದ್ದಾರೆ

ಎಂಟು ಬಾರಿ ಶಾಸಕರಾಗಿ ಹಲವಾರು ಬಾರಿ ಮಂತ್ರಿಗಳಾಗಿ ಈಗಲೂ ಸಹ ಸರಳತೆಗೆ ಮತ್ತೊಂದು ಹೆಸರಾಗಿರುವ ಶ್ರೀರಾಮಲಿಂಗಾರೆಡ್ಡಿರವರ ಸುಪುತ್ರಿ, ಜಯನಗರದ ಮಾಜಿ ಶಾಸಕಿ, ಪರಿಸರ ಪ್ರೇಮಿ, ಅನ್ಯಾಯವನ್ನ ಎಂದೂ ಸಹಿಸದ ಹೋರಾಟಗಾರ್ತಿ, ಮಹಿಳೆಯರ ಧ್ವನಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಶ್ರೀಮತಿ ಸೌಮ್ಯ ರೆಡ್ಡಿರವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಿರಿಮೆಯನ್ನ ಹೆಚ್ಚಿಸಬಲ್ಲರು‌.

ಇಲ್ಲಿನ ಜನರ ಭಾವನೆಯನ್ನು ಅರಿತು ದುಡಿಯಬಲ್ಲರು ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ. ನಿಮ್ಮ ಅಭಿಪ್ರಾಯವೂ ಇದೇ ನಿಟ್ಟಿನಲ್ಲಿ ಇದ್ದರೆ ನೀವು ನಮ್ಮೊಂದಿಗೆ ಕೈಜೋಡಿಸಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply